ಕರ್ನಾಟಕದಲ್ಲಿ ಏ.30ರವರೆಗೆ ಲಾಕ್‍ಡೌನ್ -ಶನಿವಾರ ಘೋಷಣೆ ಸಾಧ್ಯತೆ

Public TV
3 Min Read

– ಕ್ಯಾಬಿನೆಟ್ ಸಭೆಯಲ್ಲಿ ನಿರ್ಧಾರ
– ಲಾಕ್‍ಡೌನ್ ವಿಸ್ತರಣೆಗೆ ಸಲಹೆ ನೀಡಿದ್ದ ವೈದ್ಯರ ಸಮಿತಿ

ಬೆಂಗಳೂರು: ಕರ್ನಾಟಕದಲ್ಲಿ ಮತ್ತೆ 15 ದಿನಗಳ ಕಾಲ ಲಾಕ್‍ಡೌನ್ ವಿಸ್ತರಣೆಯಾಗುವುದು ಬಹುತೇಕ ಖಚಿತವಾಗಿದೆ.  ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಕೊರೊನಾ ತಡೆಗಟ್ಟಲು ಲಾಕ್‍ಡೌನ್ ವಿಸ್ತರಣೆ ಅನಿವಾರ್ಯ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.

ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಯಡಿಯೂರಪ್ಪ, ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ 15 ದಿನ ವಿಸ್ತರಣೆಗೆ ಸಲಹೆ ಬಂದಿದೆ. ಏ.11 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಲಾಕ್‍ಡೌನ್ ಮುಂದುವರಿಕೆ ಅನಿವಾರ್ಯ ಎಂದು ನಿನ್ನೆ ಆರೋಗ್ಯ ಖಾತೆಯ ಸಚಿವ ಶ್ರೀರಾಮಲು ಹೇಳಿದ್ದರು. ಇದರ ಜೊತೆಯಲ್ಲೇ ವಿರೋಧ ಪಕ್ಷಗಳ ನಾಯಕರ ಜೊತೆ ಪ್ರಧಾನಿ ನರೇಂದ್ರ ಮೋದಿ ನಡೆಸಿದ ಸಭೆಯಲ್ಲೂ ಲಾಕ್‍ಡೌನ್ ವಿಸ್ತರಣೆ ಅನಿವಾರ್ಯ ಎಂಬುದದ ಬಗ್ಗೆ ಸುಳಿವು ನೀಡಿದ್ದರು.

ಬುಧವಾರ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ವೈದ್ಯರಾದ ಡಾ. ಮಂಜುನಾಥ್ ಹಾಗೂ ದೇವಿಶೆಟ್ಟಿ ನೇತೃತ್ವದ ಟಾಸ್ಕ್ ಫೋರ್ಸ್ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಕೊರೊನಾ ಟಾಸ್ಕ್ ಫೋರ್ಸ್ 50 ಶಿಫಾರಸುಗಳನ್ನ ನೀಡಿತ್ತು.

ಶಿಫಾರಸು ಏನಿತ್ತು?
* ಹಾಟ್‍ಸ್ಟಾಟ್ ಜಿಲ್ಲೆಗಳಲ್ಲಿ ಏಪ್ರಿಲ್ 30ವರೆಗೆ ಲಾಕ್‍ಡೌನ್ ಮುಂದುವರಿಸಿ
* ನಾನ್ ಹಾಟ್‍ಸ್ಪಾಟ್ ಜಿಲ್ಲೆಗಳಲ್ಲಿ ರಿಯಾಯ್ತಿ ಕೊಡಬಹುದು
* ಯಾರು ಬೇರೆ ಜಿಲ್ಲೆಗೆ ಸಂಚಾರ ಮಾಡದಂತೆ ಕ್ರಮವಹಿಸಬೇಕು
* ಎ.ಸಿ. ಇಲ್ಲದ ಎಲ್ಲ ಅಂಗಡಿಗಳನ್ನು ತೆರೆಯಬಹುದು
* ಮೇ 31ರ ತನಕ ಶಾಲಾ- ಕಾಲೇಜು ಓಪನ್ ಬೇಡ
* ಜನರ ಅನವಶ್ಯಕ ಓಡಾಟಕ್ಕೆ ಬ್ರೇಕ್ ಹಾಕ್ಬೇಕು

* ಏಪ್ರಿಲ್ 30ರವರೆಗೆ ಬಸ್, ರೈಲು, ವಿಮಾನ, ಮೆಟ್ರೋ ಸಂಚಾರ ಬೇಡ
* ಸಾರ್ವಜನಿಕ ಶೌಚಾಲಯ ಬಂದ್, ಗುಟ್ಕ, ಚ್ಯೂಯಿಂಗ್‍ಗಮ್ ಬ್ಯಾನ್
* ಗೂಡ್ಸ್, ಮೆಡಿಕಲ್ ಬಿಟ್ಟು ಅಂತರ್ ಜಿಲ್ಲೆ ವಾಹನ ಸಂಚಾರ ಸ್ಥಗಿತ
* ಸಮ-ಬೆಸ ಸಂಖ್ಯೆಯಲ್ಲಿ ಖಾಸಗಿ ವಾಹನಗಳು ಓಡಾಟ
* ಕೊರೊನಾ ಟೆಸ್ಟ್ 1 ತಿಂಗಳಲ್ಲಿ 50 ಸಾವಿರಕ್ಕೂ ಹೆಚ್ಚು ಜನರಿಗೆ ಆಗಬೇಕು
* ಐಟಿ, ಬಿಟಿ, ಸರ್ಕಾರಿ ಕಚೇರಿಗಳು, ಕಾರ್ಖಾನೆಗಳಲ್ಲಿ ಶೇ. 50 ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸಬಹುದು

ಹಲವೆಡೆ ಲಾಕ್‍ಡೌನ್ ಘೋಷಣೆ:
ಒಡಿಶಾದಲ್ಲಿ ಏಪ್ರಿಲ್ 30ರವರೆಗೆ ಲಾಕ್‍ಡೌನ್ ವಿಸ್ತರಣೆಯಾಗಿದೆ. ಉತ್ತರ ಪ್ರದೇಶದಲ್ಲಿ ಬುಧವಾರ ರಾತ್ರಿಯಿಂದಲೇ 15 ಹಾಟ್‍ಸ್ಪಾಟ್‍ಗಳಾದ ಲಖನೌ, ನೋಯ್ಡಾ, ಆಗ್ರಾ, ಕಾನ್ಪುರ, ವಾರಣಾಸಿ, ಬರೇಲಿ ಸೇರಿದಂತೆ 15 ಜಿಲ್ಲೆಗಳನ್ನು ಏಪ್ರಿಲ್ 15ರವರೆಗೆ ಶೇ.100ರಷ್ಟು ಸೀಲ್ ಮಾಡಲಾಗಿದೆ. ಯಾವುದಕ್ಕೂ ಹೊರಗೆ ಬರುವ ಹಾಗೇ ಇಲ್ಲ. ಮನೆ ಬಾಗಿಲಿಗೆ ಅಗತ್ಯ ವಸ್ತುಗಳ ಡೆಲಿವರಿಗೆ ಅವಕಾಶ ನೀಡಲಾಗಿದೆ. ಪಶ್ಚಿಮಬಂಗಾಳ ಮದ್ಯದಂಗಡಿ ಬೆಳಗ್ಗೆ 2 ತಾಸು, ಸಂಜೆ 2 ತಾಸು ಷರತ್ತಿನ ಮೇಲೆ ತೆಗೆಯಲು ಅನುಮತಿ ನೀಡಲಾಗಿದೆ.

ದೇಶದಲ್ಲಿ ಸೋಂಕಿನ ಸಂಖ್ಯೆ 5 ಸಾವಿರ ದಾಟಿದೆ. ಈ ಹಿನ್ನೆಲೆಯಲ್ಲಿ ಮೇ 15ರವರೆಗೆ ಲಾಕ್‍ಡೌನ್ ಮುಂದುವರಿಸುವುದು ಅನಿವಾರ್ಯ ಎಂದು ಪ್ರಧಾನಿಗೆ ಕೇಂದ್ರ ಸಚಿವರ ಉನ್ನತ ಮಟ್ಟದ ಸಮಿತಿ ಶಿಫಾರಸು ಮಾಡಿತ್ತು. ರಾಜ್ಯಗಳ ಸಲಹೆ ಬಳಿಕ ಕೇಂದ್ರ ಸಚಿವರ ಸಮಿತಿ ಈ ಶಿಫಾರಸು ಮಾಡಿದೆ.

ಮೇ 15ರವರೆಗೂ ಲಾಕ್‍ಡೌನ್..?
ಶಿಫಾರಸು#1 – ಮೇ.15ರ ತನಕ ಶಾಲೆ, ಕಾಲೇಜು ತೆರೆಯುವಂತಿಲ್ಲ
ಶಿಫಾರಸು#2 – ಧಾರ್ಮಿಕ ಸ್ಥಳಗಳ ಬಂದ್ ಮುಂದುವರಿಯಬೇಕು
ಶಿಫಾರಸು#3 – ಶಾಪಿಂಗ್ ಮಾಲ್ ತೆರೆಯಲು ಅವಕಾಶ ನೀಡಬಾರದು. ಡ್ರೋನ್ ಕಣ್ಗಾವಲು ವಿಧಿಸಬೇಕು
ಶಿಫಾರಸು#4 – ಅಂತರ್ ರಾಜ್ಯ ಸಾರಿಗೆ ನಿರ್ಬಂಧ ಮುಂದುವರಿಸ್ಬೇಕು
ಶಿಫಾರಸು#5 – ನಿರ್ದಿಷ್ಟ ಸಂದರ್ಭದಲ್ಲಿ ಮಾತ್ರ ಸಾರ್ವಜನಿಕ ಸಾರಿಗೆ
ಶಿಫಾರಸು#6 – ಜನರು ಹೆಚ್ಚು ಬರುವ ಕಚೇರಿಗಳಲ್ಲಿ ಕಟ್ಟುನಿಟ್ಟಿನ ಕ್ರಮ

ಕರ್ನಾಟಕದಲ್ಲಿ ಇಲ್ಲಿಯವರೆಗೆ 191 ಮಂದಿಗೆ ಕೊರೊನಾ ಬಂದಿದ್ದು ಈ ಪೈಕಿ 6 ಮಂದಿ ಮೃತಪಟ್ಟಿದ್ದಾರೆ. 28 ಮಂದಿ ಗುಣಮುಖರಾಗಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *