15 ದಿನ ಲಾಕ್‍ಡೌನ್ ವಿಸ್ತರಣೆ – ಕ್ಯಾಬಿನೆಟ್ ಸಭೆಯ ಇನ್‍ಸೈಡ್ ಸ್ಟೋರಿ

Public TV
1 Min Read

ಬೆಂಗಳೂರು: ಕರ್ನಾಟಕದಲ್ಲಿ ಲಾಕ್‍ಡೌನ್ 15 ದಿನಗಳ ಕಾಲ ವಿಸ್ತರಣೆಯಾಗುತ್ತಾ ಇಲ್ಲವೋ ಎನ್ನುವುದು ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ. ಆದರೆ ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮಧ್ಯಾಹ್ನ 12 ಗಂಟೆಗೆ ನಡೆದ ಸಭೆಯಲ್ಲಿ ಏಪ್ರಿಲ್ 30ರ ತನಕ ರಾಜ್ಯವನ್ನೇ ಸಂಪೂರ್ಣವಾಗಿ ಲಾಕ್ ಡೌನ್ ಮಾಡಿ ಎಂದು ಕೆಲ ಸಚಿವರು ಸಲಹೆ ನೀಡಿದರೆ, ಅತಿ ಹೆಚ್ಚು ಕೊರೊನಾ ಪ್ರಕರಣ ಕಂಡು ಬಂದಿರುವ 14 ಜಿಲ್ಲೆಗಳನ್ನು ಮಾತ್ರ ಏಪ್ರಿಲ್ 30ರ ತನಕ ಲಾಕ್ ಡೌನ್ ಮಾಡಿದ್ದರೆ ಉತ್ತಮ. ಉಳಿದ ಕಡೆ ಸಡಿಲಗೊಳಿಸಿ ಎಂದ ಕೆಲ ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಚಿವರ ಸಲಹೆಯನ್ನು ಆಲಿಸಿದ ಸಿಎಂ ಯಡಿಯೂರಪ್ಪ ಅಂತಿಮವಾಗಿ ನಾಳೆ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಚರ್ಚೆ ಮಾಡುತ್ತೇನೆ. ಎಲ್ಲರ ಸಲಹೆಗಳನ್ನು ಕೇಳಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದರು ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

ಒಂದೆಡೆ ವೈರಸ್, ಇನ್ನೊಂದೆಡೆ ಆರ್ಥಿಕ ಸ್ಥಿತಿ ಎರಡು ಕೂಡ ನಮಗೆ ಸವಾಲಾಗಿದೆ. ನಾನು ಅಧಿಕಾರಕ್ಕೆ ಬಂದಾಗಲೆಲ್ಲ ನನಗೆ ಸವಾಲು ಬರುತ್ತದೆ. ನಾವು ಅಂದುಕೊಂಡಂತೆ ಪರಿಸ್ಥಿತಿ ಇರುವುದಿಲ್ಲ. ಎಲ್ಲ ಸವಾಲುಗಳನ್ನು ನಾವು ಎದುರಿಸೋಣ ಎಂದು ಸಿಎಂ ತಿಳಿಸಿದರು.

ಕ್ಯಾಬಿನೆಟ್ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ಪ್ರಧಾನಿ ಜತೆ ಮಾತುಕತೆ ನಡೆಸಿದ ಬಳಿಕ ಏಪ್ರಿಲ್ 14ರ ನಂತರ ಲಾಕ್ ಡೌನ್ ಮುಂದುವರಿಸಬೇಕೇ? ಬೇಡವೇ ಎನ್ನುವುದನ್ನು ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.

ಲಾಕ್‍ಡೌನ್ ಸಮಯದಲ್ಲಿ 15 ದಿನ ವಿಸ್ತರಿಸಲು ಸಂಪುಟದ ಸದಸ್ಯರು ಒತ್ತಾಯ ಮಾಡಿದ್ದಾರೆ. ಈ ಸಂದರ್ಭದಲ್ಲಿ ಜನತೆ ಮನೆಯಿಂದ ಹೊರ ಬಾರದೇ ಸಹಕಾರ ನೀಡಬೇಕು. ಲಾಕ್‍ಡೌನ್ ಉಲ್ಲಂಘಿಸುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.

ಬೆಂಗಳೂರಿನಲ್ಲಿ ಲಾಕ್‍ಡೌನ್ ಉಲ್ಲಂಘಿಸಿದವರ ಸುಮಾರು 10 ಸಾವಿರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜನತೆ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಕಠಿಣ ತೀರ್ಮಾನ  ತೆಗೆದುಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *