ವರ್ಕ್ ಫ್ರಮ್ ಹೋಂ- ಜಿಯೋದಿಂದ ಆಫರ್

Public TV
2 Min Read

ನವದೆಹಲಿ: ಮಹಾಮಾರಿ ಕೊರೊನಾ ಭೀತಿ ಹಿನ್ನೆಲೆ ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಎಂದು ಘೋಷಿಸಿದ್ದು, ಗ್ರಾಹಕರಿಗೆ ಅನುಕೂಲವಾಗುವಂತೆ ಜಿಯೋ ಆಫರ್ ಘೋಷಿಸಿದೆ.

ಜಿಯೋ ಫೈಬರ್ ನೆಟ್ ಬಳಸುವವರಿಗೆ ಆಫರ್ ಘೋಷಿಸಿದ್ದು, ಯಾವುದೇ ಸೇವಾ ಶುಲ್ಕವಿಲ್ಲದೆ ಬೇಸಿಕ್ ಜಿಯೋ ಫೈಬರ್ ಬ್ರಾಡ್ ಬ್ಯಾಂಡ್ ಕನೆಕ್ಷನ್ ನೀಡುತ್ತಿದೆ. ಆಯಾ ಏರಿಯಾಗಳ ಆಧಾರದ ಮೇಲೆ ಫೈಬರ್ ನೆಟ್ ನೀಡಲು ಮುಂದಾಗಿದೆ. ಹೊಸ ಗ್ರಾಹಕರಿಗೆ ಸೇವಾ ಶುಲ್ಕವಿಲ್ಲದೆ ಕನೆಕ್ಷನ್ ನೀಡುವುದರ ಜೊತೆಗೆ ಪ್ರತಿ ಸೆಕೆಂಡಿಗೆ 10 ಎಂಬಿ ವೇಗದಲ್ಲಿ ಉಚಿತವಾಗಿ ಇಂಟರ್‍ನೆಟ್ ನೀಡುವುದಾಗಿ ಘೋಷಿಸಿದೆ. ಅಷ್ಟೇ ಅಲ್ಲದೆ ಈಗಿರುವ ಗ್ರಾಹಕರಿಗೆ ಎಲ್ಲ ಪ್ಲಾನ್‍ಗಳಿಗೆ ಹೆಚ್ಚುವರಿಯಾಗಿ ಡಬಲ್ ಡಾಟಾ ನೀಡಲು ಮುಂದಾಗಿದೆ.

ಇಂತಹ ಕಷ್ಟದ ಸಂದರ್ಭದಲ್ಲಿಯೂ ಯಾವುದೇ ರೀತಿಯ ತೊಂದರೆ ಇಲ್ಲದೆ ಕಂಪನಿ ಕಾರ್ಯನಿರ್ವಹಿಸಲಿದೆ. ಎಲ್ಲ ಸಮಯದಲ್ಲಿಯೂ ಗ್ರಾಹಕರಿಗೆ ಸೇವೆ ಒದಗಿಸಲಿದೆ ಎಂದು ಸಂಸ್ಥೆ ಖಚಿತಪಡಿಸಿದೆ. ಈ ಮೂಲಕ ಕೊರೊನಾ ವಿರುದ್ಧದ ಹೋರಾಟದಲ್ಲಿ ರಿಲಾಯನ್ಸ್ ಜಿಯೋ ಕೈ ಜೋಡಿಸಿದೆ.

ರಿಲಾಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಬೇಸಿಕ್ ಜಿಯೋ ಫೈಬರ್ ಬ್ರಾಡ್‍ಬ್ಯಾಂಡ್ ಕನೆಕ್ಷನ್ ನೀಡುತ್ತಿದ್ದು, ಪ್ರತಿ ಸೆಕೆಂಡಿಗೆ 10 ಎಂಬಿ ವೇಗದಲ್ಲಿ ಇಂಟರ್ ನೆಟ್ ಒದಗಿಸಲಿದೆ. ಆದರೆ ರೂಟರ್ ಗಾಗಿ ಗ್ರಾಹಕರು ಹಣ ಪಾವತಿಸಬೇಕಾಗುತ್ತದೆ. ಇದಕ್ಕೂ ಸಹ ಮಿನಿಮಮ್ ರೀಫಂಡೇಬಲ್ ಪ್ಲಾನ್ ಇದ್ದು, ಹೋಮ್ ಗೇಟ್‍ವೇ ರೂಟರ್ ಗಳಿಗೆ ಕನಿಷ್ಠ ಮರುಪಾವತಿಸಬಹುದಾದ ಠೇವಣಿ ನೀಡಲಾಗುತ್ತಿದೆ. ಈಗಾಗಲೇ ಜಿಯೋ ಫೈಬರ್ ಬ್ರಾಡ್ ಬ್ಯಾಂಡ್ ಗ್ರಾಹಕರಾಗಿದ್ದಲ್ಲಿ ಪ್ರಸ್ತುತ ಒದಗಿಸುತ್ತಿರುವುದಕ್ಕಿಂತ ಹೆಚ್ಚುವರಿಯಾಗಿ ದುಪ್ಪಟ್ಟು ಡಾಟಾ ನೀಡಲಾಗುವುದು ಎಂದು ಕಂಪನಿ ತಿಳಿಸಿದೆ.

ಇತ್ತೀಚೆಗಷ್ಟೇ ಜಿಯೋ ಆಫರ್ ಘೋಷಿಸಿದ್ದು, 4ಜಿ ಬಳಕೆದಾರರಿಗೆ ಆಡ್ ಆನ್ ವೋಚರ್ ಮೂಲಕ ಡಬಲ್ ಡಾಟಾ ಕೊಡಲು ಮುಂದಾಗಿದೆ. ಇದರಿಂದ ಜಿಯೋ ಬದಲಿಗೆ ಇತರೆ ನೆಟ್‍ವರ್ಕ್ ಗಳ ಕರೆ ಶುಲ್ಕವನ್ನು ಕಡಿತಗೊಳಿಸಲಾಗಿದ್ದು, ಯಾವುದೇ ಶುಲ್ಕವಿಲ್ಲದೆ ಬೇರೆ ನೆಟ್‍ವರ್ಕ್‍ಗೆ ಕರೆ ಮಾಡಬಹುದಾಗಿದೆ. ಈ ಸೇವೆ ಒದಗಿಸಲು ಸಹಾಯ ಮಾಡುವ ಸಿಬ್ಬಂದಿಯನ್ನು ದೇಶಾದ್ಯಂತ ರೋಟೇಶನ್ ಆಧಾರದ ಮೇಲೆ ನಿಯೋಜಿಸಲಾಗುವುದು ಸಂಸ್ಥೆ ಮಾಹಿತಿ ನೀಡಿದೆ.

ಜಗತ್ತಿನಾದ್ಯಂತ ರೌದ್ರತಾಂಡವವಾಡ್ತಿರುವ ಕೊರೊನಾ ಹೆಮ್ಮಾರಿಗೆ ಇಲ್ಲಿವರೆಗೆ 15,306 ಮಂದಿ ಬಲಿಯಾಗಿದ್ದಾರೆ. 3.50 ಲಕ್ಷ ಮಂದಿ ಸೋಂಕಿತರಾಗಿದ್ದಾರೆ. ಅಮೆರಿಕಾದಲ್ಲಿ ಕೊರೋನಾಗೆ ನಿನ್ನೆ ಒಂದೇ ದಿನ 100 ಮಂದಿ ಮೃತಪಟ್ಟಿದ್ದು, ಒಟ್ಟಾರೆ 458 ಮಂದಿ ಬಲಿಯಾಗಿದ್ದಾರೆ. ಸೋಂಕಿತರ ಸಂಖ್ಯೆ 34 ಸಾವಿರ ದಾಟಿದೆ.

ಚೀನಾ ಇಟಲಿ ಬಳಿಕ ಹೆಚ್ಚಿನ ಸಂಖ್ಯೆ ವೈರಸ್ ಬಾಧಿತರು ಇರೋದು ಅಮೆರಿಕಾದಲ್ಲಿ ಎಂದು ವರದಿಯಾಗಿದೆ. ಇಟಲಿಯಲ್ಲಿ ಎರಡು ದಿನಕ್ಕೆ ಹೋಲಿಸಿದ್ರೆ ನಿನ್ನೆ ಮೃತರ ಸಂಖ್ಯೆ ಕಡಿಮೆಯಾಗಿದೆ. ನಿನ್ನೆ 651 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 5500ಕ್ಕೆ ಏರಿಕೆಯಾಗಿದೆ. ಸ್ಪೇನ್‍ನಲ್ಲಿ 2182, ಇರಾನ್‍ನಲ್ಲಿ 1812, ಫ್ರಾನ್ಸ್ 674, ಬ್ರಿಟನ್ 281, ನೆದರ್ ಲೆಂಡ್‍ನಲ್ಲಿ 179, ಜರ್ಮನಿಯಲ್ಲಿ 111 ಮಂದಿ ಸಾವನ್ನಪ್ಪಿದ್ದಾರೆ. ಜರ್ಮನಿ ಚಾನ್ಸಲರ್ ಏಂಜೆಲಾ ಮಾರ್ಕೆಲ್‍ರಲ್ಲಿ ಸೋಂಕು ಲಕ್ಷಣ ಕಂಡು ಬಂದಿದ್ದು, ಕ್ವಾರಂಟೇನ್‍ನಲ್ಲಿ ಇರಿಸಲಾಗಿದೆ. ನ್ಯೂಯಾರ್ಕ್ ನಗರದ ಜೈಲುಗಳಲ್ಲಿ 38 ಮಂದಿಗೆ ಕೊರೊನಾ ಸೋಂಕು ಕಂಡು ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *