ಕರ್ಫ್ಯೂ ಪಾಲಿಸಿದರೆ ಮಾತ್ರ ವೈರಾಣು ಹರಡುವುದನ್ನು ನಿಯಂತ್ರಿಸಬಹುದು: ಜಗದೀಶ್ ಶೆಟ್ಟರ್

Public TV
1 Min Read

ಹುಬ್ಬಳ್ಳಿ: ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿರುವ 21 ದಿನಗಳ ಕರ್ಫ್ಯೂಗೆ ಸಾರ್ವಜನಿಕರು ಬೆಂಬಲಿಸಬೇಕು. ಸ್ವಯಂ ನಿಯಂತ್ರಣವನ್ನು ಹೇರಿಕೊಂಡು ಅನಗತ್ಯವಾಗಿ ಮನೆಯಿಂದ ಹೊರಬರದೆ ವೈರಾಣು ಹರಡುವುದನ್ನು ನಿಯಂತ್ರಿಸಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಮನವಿ ಮಾಡಿಕೊಂಡಿದ್ದಾರೆ.

ಹುಬ್ಬಳ್ಳಿಯ ಹಳೆ ಬಸ್ ನಿಲ್ದಾಣದಲ್ಲಿ ಅಗ್ನಿಶಾಮಕದಳದಿಂದ ನಡೆಸಲಾದ ಡಿಸ್‍ಇನ್ಫೆಕ್ಷನ್ ಸ್ವಚ್ಛತಾ ಕಾರ್ಯ ವೀಕ್ಷಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಅಕ್ಷರಶಃ ಕರ್ಫ್ಯೂವನ್ನು ಪಾಲಿಸಿದಾಗ ಮಾತ್ರ ವೈರಾಣು ಹರಡುವುದನ್ನು ನಿಯಂತ್ರಿಸಬಹುದು. ಈ ಮೂಲಕ ನಾವು ವೈರಾಣುವಿನಿಂದ ಹರಡುವ ಸಾಂಕ್ರಾಮಿಕ ರೋಗದ ವಿರುದ್ಧ ಹೊರಾಟ ನಡೆಸಬಹುದು. ಯಾವುದೇ ರೀತಿಯ ಅಲಕ್ಷ್ಯ ಸಲ್ಲದು. ವೈಯಕ್ತಿಕ, ಕುಟುಂಬ ಹಾಗೂ ದೇಶದ ಹಿತದೃಷ್ಟಿಯಿಂದ ಇದನ್ನು ಮಾಡುವುದು ಅಗತ್ಯವಾಗಿದೆ. ಪ್ರಧಾನ ಮಂತ್ರಿಗಳು ಹೇಳಿದಂತೆ ನಾವು 21 ದಿನ ನಡೆದುಕೊಳ್ಳದಿದ್ದರೆ, 21 ವರ್ಷಗಳ ಕಾಲ ಹಿಂದೆ ಹೋಗುತ್ತೇವೆ. ವೈರಾಣುವಿನ ಹರಡುವಿಕೆ ಮೂರನೆ ಹಂತ ತಲುಪಿದರೆ ದೇಶಕ್ಕೆ ದೊಡ್ಡ ಗಂಡಾತರ ಒದಗಿ ಬರುತ್ತದೆ. ಆದರಿಂದ ಜನರು ಪ್ರಜ್ಞಾವಂತಿಕೆಯಿಂದ ವರ್ತಿಸಬೇಕು ಎಂದು ಕರೆ ನೀಡಿದರು.

ಅಗ್ನಿಶಾಮಕ ಇಲಾಖೆಯಿಂದ ಹುಬ್ಬಳ್ಳಿ ಹಾಗೂ ಧಾರವಾಡ ನಗರಗಳಲ್ಲಿ ಪ್ರತ್ಯೇಕವಾಗಿ ಅಗ್ನಿಶಾಮಕ ವಾಹನಗಳನ್ನು ಬಳಸಿ ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತಿದೆ. ಸೋಡಿಯಂ ಹೈಪೋಕ್ಲೋರೈಡ್ ಮಿಶ್ರಿತ ದ್ರಾವಣವನ್ನು ಸಿಂಪಡಿಸುವುದರಿಂದ ವೈರಾಣು ಹಾಗೂ ಬ್ಯಾಕ್ಟೀರಿಯಾಗಳಿಂದ ಹರಡುವ ಕಾಯಿಲೆಗಳನ್ನು ನಿಯಂತ್ರಿಸಬಹುದಾಗಿದೆ. ಧಾರವಾಡ ಜಿಲ್ಲಾಡಳಿತ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಈ ನಿಟ್ಟಿನಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್, ಹುಬ್ಬಳ್ಳಿ-ಧಾರವಾಡ ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ್, ಮುಖ್ಯ ಅಗ್ನಿಶಾಮಕ ಅಧಿಕಾರಿ ಈಶ್ವರನಾಯ್ಕ, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಶ್ರೀಕಾಂತ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಚಂದ್ರಶೇಕರ್, ಹುಬ್ಬಳ್ಳಿ ಶಹರ ತಹಶೀಲ್ದಾರ್ ಶಶಿಧರ್ ಮಾಡ್ಯಾಳ, ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್ ಪ್ರಕಾಶ್ ನಾಸಿ ಸೇರಿದಂತೆ ಇತರೆ ಅಗ್ನಿ ಶಾಮಕ ಸಿಬ್ಬಂದಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *