ಮುಸ್ಲಿಂ ಧಾರ್ಮಿಕ ಸಭೆಯಲ್ಲಿ ಹೆಚ್ಚು ಜನ ಭಾಗಿ- ಸೋಂಕು ತಗುಲಿ 6 ಮಂದಿ ಸಾವು

Public TV
2 Min Read

ಹೈದರಾಬಾದ್: ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಹೆಚ್ಚು ಜನ ಸೇರಿದ್ದು, ಇದರಲ್ಲಿ ತೆಲಂಗಾಣದ ಆರು ಜನಕ್ಕೆ ಕೊರೊನಾ ಸೋಂಕು ತಗುಲಿ ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಸರ್ಕಾರ ಬಹಿರಂಗಪಡಿಸಿದೆ.

ತಬ್ಲಿಘಿ ಜಮಾತ್ ಧಾರ್ಮಿಕ ಸಭೆಯನ್ನು ಏರ್ಪಡಿಸಿತ್ತು. ಇದರಲ್ಲಿ ಇಂಡೋನೇಷ್ಯಾ ಹಾಗೂ ಮಲೇಷ್ಯಾದವರು ಸೇರಿ ಸುಮಾರು 2 ಸಾವಿರಕ್ಕೂ ಅಧಿಕ ಜನ ಭಾಗವಹಿಸಿದ್ದರು. ಮಾರ್ಚ್ 1ರಿಂದ 15ರವರೆಗೆ ದೆಹಲಿಯ ಪಶ್ಚಿಮದ ನಿಜಾಮುದ್ದೀನ್‍ನಲ್ಲಿ ಈ ಧಾರ್ಮಿಕ ಸಭೆ ನಡೆದಿತ್ತು. ಈ ಕಾರ್ಯಕ್ರಮದ ನಂತರವೂ ತುಂಬಾ ಜನ ಜಮಾತ್‍ನ ಮರ್ಕಜ್‍ನಲ್ಲಿ ಉಳಿದುಕೊಳ್ಳುವುದನ್ನು ಮುಂದುವರಿಸಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಈ ಸಭೆಯಲ್ಲಿ ಭಾಗವಹಿಸಿದ್ದ ಆರು ಜನ ಸಾವನ್ನಪ್ಪಿದ್ದು, ಕೊರೊನಾ ಸೋಂಕಿನಿಂದ ಇವರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಆರು ಜನರ ಪೈಕಿ ಇಬ್ಬರು ಹೈದರಾಬಾದ್‍ನ ಗಾಂಧಿ ಆಸ್ಪತ್ರೆಯಲ್ಲಿ ಹಾಗೂ ಇಬ್ಬರು ಅಪೋಲೋ ಹಾಗೂ ಗ್ಲೋಬಲ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಉಳಿದ ಇಬ್ಬರು ನಿಜಾಮಾಬಾದ್ ಹಾಗೂ ಗದ್ವಾಲ್‍ನಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದಿದ್ದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಇನ್ನೂ 9 ಜನರಿಗೆ ಕೊರೊನಾ ಸೋಂಕಿರುವುದು ಪತ್ತೆಯಾಗಿದೆ. 9 ಜನರ ಪೈಕಿ ಒಬ್ಬರ ಸಂಬಂಧಿಯಾಗಿರುವ ಇನ್ನೊಬ್ಬ ವ್ಯಕ್ತಿಗೂ ಕೊರೊನಾ ಸೋಂಕಿರುವುದು ದೃಢಪಟ್ಟಿದೆ.

ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಶಂಕಿತರನ್ನು ಗುರುತಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರನ್ನೂ ಪರೀಕ್ಷೆಗೊಳಪಡಿಸಲಾಗಿದೆ. ಅಲ್ಲದೆ ಯಾರ್ಯಾರು ದೆಹಲಿಗೆ ಭೇಟಿ ನೀಡಿದ್ದೀರೋ ಎಲ್ಲರೂ ತಕ್ಷಣವೇ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾಗಿ ಎಂದು ತೆಲಂಗಾಣ ಸರ್ಕಾರ ಜನರಲ್ಲಿ ಮನವಿ ಮಾಡಿದೆ.

ಆಂಧ್ರ ಪ್ರದೇಶದ ವೈಎಸ್‍ಆರ್ ಕಾಂಗ್ರೆಸ್ ಶಾಸಕ ಶೈಖ್ ಮೊಹಮ್ಮದ್ ಮುಸ್ತಫಾ ಅವರ ಸಂಬಂಧಿ ರೋಗಿ ನಂಬರ್.10 ಗೆ ಕೊರೊನಾ ಸೋಂಕಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ. ಶಾಸಕರನ್ನೂ ಸೇರಿದಂತೆ ಒಟ್ಟು 14ಜನರನ್ನು ಐಸೋಲೇಷನ್‍ನಲ್ಲಿ ಇಡಲಾಗಿದೆ. 10ನೇ ನಂಬರ್ ರೋಗಿಯು ದೆಹಲಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಈತ ರೋಗಿ ನಂ.13, 14 ಹಾಗೂ 15 ಇವರೊಂದಿಗೆ ನೇರ ಸಂಪರ್ಕ ಹೊಂದಿದ್ದರಿಂದ ಇವರಿಗೂ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಕ್ವಾರೆಂಟೈನ್‍ಗೆ ಒಳಪಡಿಸಿದ್ದ 14 ಜನರಲ್ಲಿ ಗುಂಟೂರು(ಪೂರ್ವ) ಶಾಸಕ ಮುಸ್ತಫಾ ಸೇರಿದಂತೆ ಆರು ಜನರಿಗೆ ರೋಗದ ಲಕ್ಷಣಗಳು ಕಂಡು ಬಂದಿದೆ. ಹೀಗಾಗಿ ಇವರ ಗಂಟಲು ಮಾದರಿಯನ್ನು ಜಿಜಿಎಚ್ ವಿಜಯವಾಡ ಲ್ಯಾಬಿಗೆ ಕಳುಹಿಸಿಕೊಡಲಾಗಿದ್ದು, ಫಲಿತಾಂಶಕ್ಕಾಗಿ ವೈದ್ಯರು ಕಾಯುತ್ತಿದ್ದಾರೆ.

ಅತ್ತ ನಿಜಾಮುದ್ದೀನ್ ಪ್ರದೇಶದಲ್ಲಿ ಪ್ಯಾರಾ ಮಿಲಿಟರಿ ಪಡೆಯನ್ನು ನಿಯೋಜಿಸಲಾಗಿದ್ದು, 200ಕ್ಕೂ ಹೆಚ್ಚು ಜನರನ್ನು ಐಸೋಲೇಷನ್‍ನಲ್ಲಿ ಇಡಲಾಗಿದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಲವರಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *