ಕೊರೊನಾ ಎಫೆಕ್ಟ್- ಚಿಕ್ಕಬಳ್ಳಾಪುರದಲ್ಲಿ ದೇವಾಲಯ ಬಂದ್

Public TV
1 Min Read

– ಭಕ್ತರ ಪ್ರವೇಶಕ್ಕೆ ಬ್ರೇಕ್

ಚಿಕ್ಕಬಳ್ಳಾಪುರ: ಕೊರೊನಾ ವೈರಸ್ ಭೀತಿ ಹಿನ್ನೆಲೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮುದುಗಾನಕುಂಟೆ ಗ್ರಾಮದ ಶ್ರೀ ಗಂಗಾಭಾಗೀರಥಿ ದೇವಾಲಯವನ್ನು ಸಂಪೂರ್ಣ ಬಂದ್ ಮಾಡಲಾಗಿದೆ.

ಗಂಗಾಭಾಗೀರಥಿ ದೇವಾಲಯಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಹೀಗಾಗಿ ಪ್ರತಿ ಸೋಮವಾರ ದೇವಾಲಯಕ್ಕೆ ಬರುತ್ತಿದ್ದ ಭಕ್ತರು ಇಂದು ಸಹ ಎಂದಿನಂತೆ ದೇವಾಲಯಕ್ಕೆ ಆಗಮಿಸಿದ್ದರು. ಆದರೆ ದೇವರ ದರ್ಶನ ಸಿಗದೆ ಮರಳಿದ್ದಾರೆ. ಚಿಕ್ಕಬಳ್ಳಾಪುರ -ಗೌರಿಬಿದನೂರು ಮಾರ್ಗದ ಪ್ರಮುಖ ರಸ್ತೆಯ ಕೇಂಗೇನಹಳ್ಳಿ ಬಳಿಯ ದೇವಾಲಯದ ಪ್ರವೇಶ ದ್ವಾರ, ಕಡಬೂರು ಮಾರ್ಗ ಹಾಗೂ ಗಂಗಸಂದ್ರ ಗ್ರಾಮದ ಬಳಿಯ ಪ್ರವೇಶ ದ್ವಾರ ಸೇರಿದಂತೆ ಸಾಗಾನಹಳ್ಳಿ ಗ್ರಾಮದ ಕಡೆ ಇರುವ ಪ್ರವೇಶ ದ್ವಾರಗಳಲ್ಲಿ ದೇವಸ್ಥಾನ ಬಂದ್ ಆಗಿರುವ ನಾಮಫಲಕ ಹಾಕಲಾಗಿದೆ.

ನಾಲ್ಕೂ ಕಡೆ ಪೊಲೀಸರು ಹಾಗೂ ಕಂದಾಯ ಇಲಾಖೆಯ ಗ್ರಾಮ ಸಹಾಯಕರು, ಮುಜರಾಯಿ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತರನ್ನು ವಾಪಸ್ ಕಳುಹಿಸಲಾಗುತ್ತಿದೆ. ಹೀಗಾಗಿ ದೂರದೂರುಗಳಿಂದ ಬಂದ ಭಕ್ತರು ಗಂಗಾದೇವಿಯ ದರ್ಶನ ಪಡೆಯಲಾಗದೆ ನಿರಾಸೆಯಿಂದ ತೆರಳುತ್ತಿದ್ದಾರೆ.

ಸಂತಾನಭಾಗ್ಯ ಇಲ್ಲದವರು ಈ ಗಂಗಾಭಾಗೀರಥಿಗೆ ಪ್ರತಿ ಸೋಮವಾರ ಆಗಮಿಸಿ ದೇವಾಯಲದ ಆವರಣದಲ್ಲಿನ ಕಲ್ಯಾಣಿಯಲ್ಲಿ ಸ್ನಾನ ಮಾಡಿ ಪೂಜೆ ಸಲ್ಲಿಸಿ ದೇವಿಗೆ ಹರಕೆ ಹೊತ್ತರೆ ಮಕ್ಕಳಾಗುತ್ತವೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ಹೀಗಾಗಿ ಪ್ರತಿ ಸೋಮವಾರ ಸಾವಿರಾರು ಭಕ್ತರು ಈ ದೇವಾಲಯಕ್ಕೆ ಆಗಮಿಸುತ್ತಾರೆ. ಆದರೆ ಕೊರೊನಾ ವೈರಸ್‍ನಿಂದಾಗಿ ಭಕ್ತರ ಆಗಮನಕ್ಕೆ ಬ್ರೇಕ್ ಬಿದ್ದಿದೆ. ಇಡೀ ದೇವಾಲಯದ ಆವರಣ ಬಿಕೋ ಎನ್ನುತ್ತಿದೆ. ಕೊರೊನ ವೈರಸ್ ಹರಡುವ ಸಾಧ್ಯತೆ ಇರುವುದರಿಂದ ಮುದುಗಾನಕುಂಟೆ ದೇವಾಲಯಕ್ಕೆ ಕೆಲ ದಿನಗಳ ಕಾಲ ಭಕ್ತರು ಆಗಮಿಸಬಾರದು ಎಂದು ಆಡಳಿತ ಮಂಡಳಿಯ ಸದಸ್ಯರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *