ದೇಶದಲ್ಲಿ ಶತಕದತ್ತ ಸಾವಿನ ಸಂಖ್ಯೆ- ಒಂದೇ ದಿನ 600 ಹೊಸ ಪ್ರಕರಣ

Public TV
2 Min Read

– ರಾಜ್ಯದಲ್ಲಿ ಒಂದೇ ದಿನ 16 ಹೊಸ ಪ್ರಕರಣಗಳು

ನವದೆಹಲಿ: ಪ್ರಪಂಚಾದ್ಯಂತ ತಾಂಡವಾಡುತ್ತಿರುವ ಕೊರೊನಾ ದೇಶದಲ್ಲಿಯೂ ವ್ಯಾಪಕವಾಗಿ ಹಬ್ಬುತ್ತಿದ್ದು, ಶನಿವಾರ ಒಂದೇ ದಿನ ದೇಶದಲ್ಲಿ 600ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದೆ. ದೇಶದಲ್ಲಿ ಒಂದೇ ದಿನ ಪತ್ತೆಯಾದ ಪ್ರಕರಣಗಳ ಪೈಕಿ ಇದು ಅತೀ ಹೆಚ್ಚು. ಅಲ್ಲದೆ ರಾಜ್ಯದಲ್ಲಿಯೂ ಶನಿವಾರ ಒಂದೇ ದಿನ 16 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ದಿನದಿಂದ ದಿನಕ್ಕೆ ಕೊರೊನಾ ಭಯ ಹೆಚ್ಚುತ್ತಲೇ ಇದೆ.

ರಾಜ್ಯದಲ್ಲಿ ಹೊಸದಾಗಿ 16 ಪ್ರಕರಣಗಳು ಬೆಳಕಿಗೆ ಬಂದಿದ್ದು, ಸೋಂಕಿತರ ಸಂಖ್ಯೆ 144ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿನ ಹಾಟ್‍ಸ್ಪಾಟ್‍ಗಳಲ್ಲಿ ಒಂದಾಗಿರುವ ಮೈಸೂರಿನಲ್ಲಿ ಶನಿವಾರ ಒಂದೇ ದಿನಕ್ಕೆ 7 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಅವರಲ್ಲಿ 5 ಮಂದಿ ದೆಹಲಿಗೆ ಹೋಗಿ ಬಂದವರಾಗಿದ್ದಾರೆ. ದೆಹಲಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಒಟ್ಟು 16 ಮಂದಿ ಕೊರೊನಾಗೆ ತುತ್ತಾಗಿದ್ದು, ಈ ಮೂಲಕ ಮೈಸೂರಿನಲ್ಲಿ ಸೊಂಕಿತರ ಸಂಖ್ಯೆ 28ಕ್ಕೆ ಏರಿದೆ.

ದೆಹಲಿಯಲ್ಲಿ ಭಾಗವಹಿಸಿದ್ದವರ ತಪಾಸಣೆ ಮಾಡಲಾಗಿದ್ದು, 214 ಮಂದಿಯ ವರದಿ ಬಂದಿದೆ. ಇದರಲ್ಲಿ 16 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇನ್ನುಳಿದ 198 ಪ್ರಕರಣ ನೆಗೆಟಿವ್ ಬಂದಿದೆ. 10 ಮಂದಿ ಇಂಡೋನೇಷ್ಯಾ ಹಾಗೂ 9 ಮಂದಿ ಕರ್ಗೀಸ್ತಾನ್‍ನಿಂದ ಜಮಾತ್ ಧಾರ್ಮಿಕ ಸಂಘಟನೆಯಲ್ಲಿ ಭಾಗವಹಿಸಿ ಕರ್ನಾಟಕಕ್ಕೆ ಬಂದಿದ್ದರು. ಈ 19 ಮಂದಿಯ ವರದಿ ನೆಗೆಟಿವ್ ಇದೆ ಎಂದು ಸಚಿವ ಸುರೇಶ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.

ದೇಶದಲ್ಲಿ ಈ ವರೆಗೆ ಕೊರೊನಾ ವೈರಸ್‍ಗೆ ಬಲಿಯಾದವರ ಸಂಖ್ಯೆ ನೂರನ್ನು ಸಮೀಪಿಸುತ್ತಿದ್ದು, ಒಟ್ಟು ಕೊರೊನಾ ಸೋಂಕಿನ ಪ್ರಕರಣಗಳು 3,450ಕ್ಕೆ ಹೆಚ್ಚಿವೆ. ಆದರೆ ಜನ ಆತಂಕಕ್ಕೆ ಒಳಗಾಗಬೇಕಿಲ್ಲ. ದೇಶದಲ್ಲಿ ವರದಿಯಾದ ಪ್ರಕರಣಗಳ ಪೈಕಿ ಶೇ.30ರಷ್ಟು ಒಂದೇ ಸ್ಥಳಕ್ಕೆ ಸಂಬಂಧಿಸಿದ್ದಾಗಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಸೋಂಕಿನ 1,023 ಪ್ರಕರಣಗಳು ದೆಹಲಿಯ ನಿಜಾಮುದ್ದೀನ್‍ನಲ್ಲಿ ನಡೆದ ತಬ್ಲೀಗ್ ಜಮಾತ್ ಸಭೆಯ ಜತೆ ನಂಟು ಹೊಂದಿವೆ. ಈ ಸಭೆಯಲ್ಲಿ ಭಾಗವಹಿಸಿದವರು, ಅವರ ಸಂಪರ್ಕಕ್ಕೆ ಬಂದವರು ಸೇರಿ 22 ಸಾವಿರ ಜನರನ್ನು ದೇಶದ ವಿವಿಧ ಭಾಗಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ. ತಬ್ಲೀಗ್ ಸಭೆಯಲ್ಲಿ ಭಾಗವಹಿಸಿ ಸೋಂಕಿಗೆ ಒಳಗಾದವರನ್ನು ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಕೇರಳ, ಉತ್ತರ ಪ್ರದೇಶ ಸೇರಿ 17 ರಾಜ್ಯಗಳಲ್ಲಿ ಪತ್ತೆ ಮಾಡಲಾಗಿದೆ.

ವಿಶ್ವದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 12 ಲಕ್ಷದ ಗಡಿ ದಾಟಿದ್ದು, 64,727 ಜನ ಸಾವನ್ನಪ್ಪಿದ್ದಾರೆ. ಅಮೆರಿಕದಲ್ಲೇ ಹೆಚ್ಚು ಪ್ರಕರಣಗಳು ಕಂಡು ಬಂದಿದ್ದು, 3.11 ಲಕ್ಷ ಜನ ಸೋಂಕಿಗೆ ಒಳಗಾಗಿದ್ದಾರೆ. ಸ್ಪೇನ್ ಹಾಗೂ ಇಟಲಿಯಲ್ಲಿ 1.25 ಲಕ್ಷಕ್ಕೂ ಅಧಿಕ ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *