16 ದಿನಗಳ ಬಳಿಕ ಕನಿಕಾ ಕಪೂರ್ ಡಿಸ್ಚಾರ್ಜ್

Public TV
2 Min Read

ಲಕ್ನೋ: ಕೊರೊನಾ ಸೋಂಕಿಗೆ ತುತ್ತಾಗಿದ್ದ ಬಾಲಿವುಡ್ ಗಾಯಕಿ, ಕನಿಕಾ ಕಪೂರ್ 16 ದಿನಗಳ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೊರೊನಾ ಸೋಂಕಿಗೆ ಒಳಗಾಗಿದ್ದ ಗಾಯಕಿಗೆ ಲಕ್ನೋನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಆರನೇ ವರದಿ ನಗೆಟಿವ್ ಬಂದ ಹಿನ್ನೆಲೆಯಲ್ಲಿ ಇಂದು ಸಂಜಯ್ ಗಾಂಧಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಆದ್ರೆ ಮುಂದಿನ 14 ದಿನ ಮನೆಯಲ್ಲಿ ಎಲ್ಲರೊಂದಿಗೆ ಅಂತರ ಕಾಯ್ದುಕೊಂಡು ಕ್ವಾರಂಟೈನ್ ನಲ್ಲಿರುವಂತೆ ವೈದ್ಯರು ಸೂಚಿಸಿದ್ದಾರೆ. ಕನಿಕಾ ಕಪೂರ್ ಗೆ ಕೊರೊನಾ ಸೋಂಕು ತಗುಲಿರೋದು ಮಾರ್ಚ್ 20ರಂದು ದೃಢಪಟ್ಟಿತ್ತು. ಅಂದಿನಿಂದಲೇ ಐಸೋಲೇಷನ್ ವಾರ್ಡಿನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಮಾರ್ಚ್ 30ರ ನಂತರ ಕನಿಕಾ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿತ್ತು.

ಕನಿಕಾ ವಿರುದ್ಧ ಎಫ್‍ಐಆರ್: ಕೊರೊನಾ ವಿರುದ್ಧದ ಹೋರಾಟದಲ್ಲಿ ಜಯಗಳಿಸಿರುವ ಕನಿಕಾಗೆ ಬಂಧನದ ಭೀತಿ ಎದುರಾಗಿದೆ. ಲಕ್ನೋ ಸಿಟಿಯ ಸರೋಜಿನಿ ನಗರ ಪೊಲೀಸ್ ಠಾಣೆಯಲ್ಲಿ ಕನಿಕಾ ಕಪೂರ್ ವಿರುದ್ಧ ಐಪಿಸಿ ಸೆಕ್ಷನ್ 188, 269 ಮತ್ತು 270ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕೊರೊನಾಗೆ ಸಂಬಂಧಿಸಿದ ಮುಂಜಾಗ್ರತ ಕ್ರಮಗಳನ್ನು ಪಾಲಿಸದಿರುವುದು ಮತ್ತು ನಿರ್ಲಕ್ಷ್ಯ ಆರೋಪದಡಿಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ.

ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದರೂ ಕನಿಕಾ ಕಪೂರ್ ಕೆಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಮಾರ್ಚ್ 9ರಂದು ಲಂಡನ್ ನಿಂದ ಬಂದಿದ್ದ ಕನಿಕಾ, ಲಕ್ನೊ ನಗರದ ಅಪಾರ್ಟ್ ಮೆಂಟ್ ನಲ್ಲಿ ಉಳಿದುಕೊಂಡಿದ್ದರು. ಈ ಅಪಾರ್ಟ್ ಮೆಂಟ್‍ನಲ್ಲಿ 700 ಕುಟುಂಬಗಳು ವಾಸವಾಗಿದ್ದರಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇಷ್ಟು ಮಾತ್ರ ಅಲ್ಲದೇ ಲಕ್ನೋದಲ್ಲಿರುವ ತಾಜ್ ಹೋಟೆಲ್ ನಲ್ಲಿ ಕಾಂಗ್ರೆಸ್ ಮಾಜಿ ಸಂಸದ ಜಿತಿನ್ ಪ್ರಸಾದ್ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.

ಈ ಪಾರ್ಟಿಯಲ್ಲಿ ರಾಜಸ್ಥಾನದ ಮಾಜಿ ಸಿಎಂ ವಸುಂಧರಾ ರಾಜೆ, ಪುತ್ರ ದುಷ್ಯಂತ ಸಿಂಗ್, ಉತ್ತರ ಪ್ರದೇಶದ ಆರೋಗ್ಯ ಮಂತ್ರಿ ಜಯಪ್ರತಾಪ್ ಸೇರಿದಂತೆ ಹಲವು ರಾಜಕೀಯ ಪ್ರಮುಖರು ಭಾಗಿಯಾಗಿದ್ದರು. ಹಾಗಾಗಿ ಕನಿಕಾ ಕೊರೊನಾ ಪ್ರಕರಣ ದೊಡ್ಡ ಆತಂಕವನ್ನೇ ಸೃಷ್ಟಿಸಿತ್ತು. ಕನಿಕಾ ಜೊತೆ ಸಂಪರ್ಕದಲ್ಲಿದ್ದ 45 ಜನರ ವರದಿ ನೆಗೆಟಿವ್ ಬಂದಿದ್ದು, ಮೂರು ನಾಯಕರನ್ನು ಐಸೋಲೇಷನ್ ಮಾಡಲಾಗಿದೆ. ಇನ್ನು ಆರೋಗ್ಯ ಮಂತ್ರಿಯವರ ಸಂಪರ್ಕದಲ್ಲಿದ್ದ 50ಕ್ಕೂ ಅಧಿಕ ಜನರ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *