ಕೊರೊನಾ ಗೆದ್ದ ಬೆಂಗಳೂರಿನ ವ್ಯಕ್ತಿಯ ಮಾತು-ಚಿಕಿತ್ಸೆ ಹೇಗಿರುತ್ತೆ? ಸೋಂಕು ತಗುಲಿದ್ದು ಹೇಗೆ?

Public TV
4 Min Read

-ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಮೊದಲಿಗ
-ಕೊರೊನಾದಿಂದ ತಡೆಗೆ ಏನ್ ಮಾಡಬೇಕು?

ಬೆಂಗಳೂರು: ಭಾರತದಲ್ಲಿ ಕೊರೊನಾ ವೈರಸ್ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇತ್ತ ಕೊರೊನಾ ಗೆದ್ದ ಬೆಂಗಳೂರಿನ ಆರ್.ಆರ್.ನಗರದ ನಿವಾಸಿ ವೆಂಕಟ್ ರಾಘವ್ ತಮಗಾದ ಅನುಭವವನ್ನು ಜನತೆಯೊಂದಿಗೆ ಹಂಚಿಕೊಂಡಿದ್ದಾರೆ. ತಮಗೆ ಕೊರೊನಾ ಸೋಂಕು ತಗುಲಿದ್ದು ಹೇಗೆ? ಚಿಕಿತ್ಸೆ ಹೇಗಿತ್ತು ಎಂಬುದರ ಬಗ್ಗೆ ವೆಂಕಟ್ ರಾಘವ್ ವಿವರಿಸಿದ್ದಾರೆ.

ವೆಂಕಟ್ ರಾಘವ್ ಮಾತು:
ನಮಸ್ಕಾರ, ನಾನು ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸಿಯಾಗಿದ್ದು, ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆದ ಮೊದಲ ವ್ಯಕ್ತಿ. ಮಾರ್ಚ್ ಮೊದಲ ವಾರ ನಾನು ಯುಎಸ್ ಗೆ ಹೋಗಬೇಕಿತ್ತು. ಹಲವು ವಿಮಾನ ನಿಲ್ದಾಣಗಳು ಲಾಕ್‍ಡೌನ್ ಪರಿಣಾಮ ಇಟಲಿ ಮತ್ತು ಚೀನಾದವರು ಯುಎಸ್ ಮಾರ್ಗವಾಗಿ ಪ್ರಯಾಣಿಸುತ್ತಿದ್ದರು. ಈ ವೇಳೆ ಸಾರ್ವಜನಿಕ ಶೌಚಾಲಯ, ಬಯೋಮೆಟ್ರಿಕ್ (ಸೆಕ್ಯೂರಿಟಿ ಸ್ಕ್ಯಾನ್) ಬಳಕೆ ಮಾಡಿದಾಗ ನನಗೆ ಕೊರೊನಾ ವೈರಸ್ ತಗುಲಿದಿದೆ ಎಂಬುವುದು ನನ್ನ ಅನಿಸಿಕೆ. ಪ್ರಯಾಣದ ವೇಳೆ ಸೋಂಕಿತರ ಸಂಪರ್ಕಕ್ಕೆ ಬಂದಾಗ ಕೊರೊನಾ ತಗುಲಿರಬಹುದು. ಇದೇ ಮಾರ್ಗದ ಮೂಲಕ ಕೊರೊನಾ ನನಗೆ ತಗುಲಿತ್ತು ಎಂಬುದರ ಬಗ್ಗೆ ಖಾತ್ರಿ ಇಲ್ಲ.

ಭಾನುವಾರ ನಾನು ಯುಎಸ್ ನಲ್ಲಿ ತಲುಪಿದೆ. ಮಾರ್ಚ್ 6 ಗುರುವಾರ ನನಗೆ ಜ್ವರ ಕಾಣಿಸಿಕೊಂಡಿತು. ಪ್ರಯಾಣ ಮಾಡಿದ್ದರಿಂದ ಜ್ವರ ಎಂದು ತಿಳಿದು ಕೆಲ ಮಾತ್ರೆ ತೆಗೆದುಕೊಂಡು ಚೇತರಿಕೆ ಕಾಣಲಿಲ್ಲ. ಜ್ವರದ ಜೊತೆಯಲ್ಲಿ ಶೀತವು ಹೆಚ್ಚಾಗಿದ್ದರಿಂದ ನನ್ನ ಪ್ರವಾಸವನ್ನು ಮುಂದೂಡಿ ವಾಪಸ್ ಬಂದೆ. ನನ್ನ ಜ್ವರದ ಬಗ್ಗೆ ಅನುಮಾನಗಳಿದ್ದರಿಂದ ವಿಮಾನ ನಿಲ್ದಾಣದ ವೈದ್ಯರ ಬಳಿ ತೆರಳಿ ಆರೋಗ್ಯದಲ್ಲಾದ ಏರುಪೇರುಗಳ ಬಗ್ಗೆ ಮಾಹಿತಿ ನೀಡಿದೆ.

ಕೊರೊನಾ ವೈರಸ್ ಸೋಂಕು ತಗುಲಿದೆಯಾ ಅಥವಾ ಇಲ್ವಾ ಎಂಬುದರ ಬಗ್ಗೆ ತಿಳಿದುಕೊಳ್ಳಬೇಕು. ಅನುಮಾನ ಮತ್ತು ಭಯದ ಜೊತೆ ಮನೆಗೆ ಹೋಗಲಾರೆ. ಒಂದು ವೇಳೆ ಸೋಂಕು ತಗುಲಿದ್ದರೂ, ಅದು ನನ್ನಿಂದ ಬೇರೆಯವರಿಗೆ ಹರಡೋದು ಬೇಡ ಎಂದು ವಿಮಾನ ನಿಲ್ದಾಣದ ವೈದ್ಯರಿಗೆ ಹೇಳಿದೆ. ಮಾರ್ಚ್ ಮೊದಲ ವಾರದಲ್ಲಿ ಏರ್ ಪೋರ್ಟ್ ವೈದ್ಯರ ಬಳಿ ಕೊರೊನಾ ವೈರಸ್ ಬಗ್ಗೆ ಪರೀಕ್ಷಿಸುವ ಯಾವುದೇ ವೈದ್ಯಕೀಯ ಉಪಕರಣಗಳು ಇರಲಿಲ್ಲ. ಹಾಗಾಗಿ ನನಗೆ ಕೊರೊನಾ ನೆಗಟಿವ್ ಎಂದು ರಿಪೋರ್ಟ್ ನೀಡಿದರು. ವಿಮಾನ ನಿಲ್ದಾಣದಿಂದ ಹೊರ ಬಂದ ನಾನು ಕಂಪನಿ ಕಳುಹಿಸಿದ ಕ್ಯಾಬ್ ನಲ್ಲಿ ಮನೆ ಸೇರಿದೆ.

ನನಗೆ ಅನುಮಾನವಿತ್ತು: ಮನೆಗೆ ಬಂದ ನಂತರವೂ ನಾನು ಆರೋಗ್ಯವಾಗಿದ್ದೇನೆ ಎಂಬುದರ ಬಗ್ಗೆ ಅನುಮಾನವಿತ್ತು. ಪತ್ನಿಗೆ ವಿಷಯ ತಿಳಿಸಿ ಕುಟುಂಬದವರಿಂದ ಅಂತರ ಕಾಯ್ದುಕೊಂಡು ಪ್ರತ್ಯೇಕ ಕೋಣೆಯಲ್ಲಿ ಉಳಿದುಕೊಂಡೆ. ಆರ್.ಆರ್.ನಗರದಲ್ಲಿಯ ಕ್ಲಿನಿಕ್ ಗೆ ತೆರಳಿದಾಗ ಅಲ್ಲಿಯ ಡಾಕ್ಟರ್ ಸಹ ಕೊರೊನಾ ಬಗ್ಗೆ ಭಯಗೊಂಡಿದ್ದರು. ತಮ್ಮ ಹತ್ರ ಕೊರೊನಾಗೆ ಚಿಕಿತ್ಸೆ ನೀಡುವ ಸೌಲಭ್ಯಗಳಿಲ್ಲ. ಅವರ ಸಲಹೆಯ ಮೇರೆಗೆ ರಾಜೀವ್ ಗಾಂಧಿ ಆಸ್ಪತ್ರೆಗೆ ತೆರಳಿದೆ.

ರಾಜೀವ್ ಗಾಂಧಿ ಆಸ್ಪತ್ರೆಯ ಸಿಬ್ಬಂದಿ ಅತ್ಯಂತ ಕಾಳಜಿಯಿಂದ ನನಗೆ ಚಿಕಿತ್ಸೆ ನೀಡಿದರು. ನನ್ನ ಟ್ರಾವೆಲ್ ಹಿಸ್ಟರಿ, ನನ್ನ ಜೊತೆಗೆ ನೇರ ಸಂಪರ್ಕದಲ್ಲಿದ್ದವರು ಎಲ್ಲ ಮಾಹಿತಿ ಪಡೆದು ಕೆಲವು ಮಾತ್ರೆ ನೀಡಿ ವರದಿ ಬರುವರೆಗೂ ಪ್ರತ್ಯೇಕವಾಗಿರುವಂತೆ ತಿಳಿಸಿ ಕಳುಹಿಸಿದರು.

ಮರುದಿನ ಮಧ್ಯಾಹ್ನ ರಾಜೀವ್ ಗಾಂಧಿ ಆಸ್ಪತ್ರೆಯ ವೈದ್ಯ ಡಾ.ಪದ್ಮಾ ಕರೆ ಮಾಡಿ, ನಿಮ್ಮಲ್ಲಿ ಕೊರೊನಾ ವೈರಸ್ ಹೆಚ್ಚಾಗಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಾಗುವಂತೆ ತಿಳಿಸಿದರು. ಕೂಡಲೇ ಬಟ್ಟೆ ಪ್ಯಾಕ್ ಮಾಡಿಕೊಂಡು ಆಸ್ಪತ್ರೆ ಕಳುಹಿಸಿದ ಆಂಬುಲೆನ್ಸ್ ನಲ್ಲಿ ತೆರಲಿ ಐಸೋಲೇಶನ್ ವಾರ್ಡಿನಲ್ಲಿ ದಾಖಲಾದೆ.

ವೈದ್ಯರ ಸೂಚನೆ ಪಾಲಿಸಿ: ಕೊರೊನಾ ವೈರಸ್ ತಗುಲಿದ ಸೋಂಕಿತನಾಗಿದ್ದರಿಂದ ಆಸ್ಪತ್ರೆ ಸಿಬ್ಬಂದಿ ಸಹಜವಾಗಿ ಆತಂಕಕ್ಕೊಳಗಾಗಿದ್ದರು. ಜ್ವರ ಪದೇ ಪದೇ ಏರುಪೇರಾಗಿತ್ತು. ಐಸೋಲೇಶನ್ ವಾರ್ಡಿನಲ್ಲಿ ಎಲ್ಲ ವ್ಯವಸ್ಥೆ ಕಲ್ಪಿಸಲಾಗಿತ್ತು. ಗುಣಮಟ್ಟದ ಆಹಾರವನ್ನು ನೀಡುತ್ತಿದ್ದರು. ಒಮ್ಮೆ ನಾನು ದಕ್ಷಿಣ ಭಾರತದ ಶೈಲಿಯ ತಿಂಡಿ ಬೇಕೆಂದಾಗ ಡಾ.ದೀಪಕ್ ಎಂಬವರು ತಾವೇ ಹೋಟೆಲಿಗೆ ತೆರಳಿ ತಂದುಕೊಟ್ಟರು. ಐಸೋಲೆಶನ್ ವಾರ್ಡಿನಲ್ಲಿ ಹೆಚ್ಚು ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ಸೂಚಿಸಿದ್ದರು. ವೈದ್ಯರ ನಿರಂತರ ಚಿಕಿತ್ಸೆಯಿಂದ ಜ್ವರ ಕಡಿಮೆಯಾಗುತ್ತಾ ಬಂತು. ಎರಡು ವಾರಗಳ ನಂತರ ನನ್ನಲ್ಲಿ ಚೇತರಿಕೆ ಕಾಣಿಸ್ತು. ನಾನು ಸಹ ಭಯಪಡದೇ ವೈದ್ಯರು ಹೇಳಿದಂತೆ ಆರೋಗ್ಯ ಕಾಪಾಡಿಕೊಂಡಿದ್ದರಿಂದ ಇಂದು ಗುಣಮುಖವಾಗಿದ್ದೇನೆ.

 

ಸರ್ಕಾರಕ್ಕೆ ಧನ್ಯವಾದ: ಮಾಸ್ಕ್ ಧರಿಸೋದು, ಕೈಗಳನ್ನು ತೊಳೆಯುತ್ತೀರಿ, ಹೊರಗಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ನನಗೆ ಕೊರೊನಾಗೆ ಬಂದಿದ್ದರಿಂದ ನೆರೆಹೊರೆಯವರು ತುಂಬಾ ಪ್ಯಾನಿಕ್ ಆಗಿದ್ದರು. ಆದ್ರೆ ನಮ್ಮ ಪಕ್ಕದ್ಮನೆಯ ಮಂಜುಳಾ ಎಂಬವರು ಪ್ರತಿನಿತ್ಯ ಊಟ ಕಳುಹಿಸುತ್ತಿದ್ದರು. ಮಗಳಿಗೆ ಪಿಯುಸಿ ಪರೀಕ್ಷೆ ಇತ್ತು. ಕಾಲೇಜಿನವರು ಪರೀಕ್ಷೆಗೆ ಅನುಮತಿ ನೀಡದಿದ್ದಾಗ ಸರ್ಕಾರವೇ ಆಕೆಗೆ ಒಂದು ಪರೀಕ್ಷಾ ಕೇಂದ್ರವನ್ನು ತೆರೆಯ್ತು. ಆರೋಗ್ಯ ಇಲಾಖೆ ಸಿಬ್ಬಂದಿ ಮನೆಗೆ ಬಂದು ಪತ್ನಿಗೆ ಧೈರ್ಯ ತುಂಬಿದ್ರು. ಯಾವ ಖಾಸಗಿ ಆಸ್ಪತ್ರೆ ನಮ್ಮ ಸಹಾಯಕ್ಕೆ ಬರಲಿಲ್ಲ. ಸರ್ಕಾರವೇ ನಮ್ಮ ಸಹಾಯಕ್ಕೆ ಬಂತು. ಆರೋಗ್ಯ ಸಚಿವರಾದ ಶ್ರೀರಾಮುಲು ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ರಾಜೀವ್ ಗಾಂಧಿ ಆಸ್ಪತ್ರೆಯಿಂದ ಹೊರ ಬಂದರೂ ಏಪ್ರಿಲ್ 6ರವರೆಗೆ ಹೋಮ್ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಿದ್ದಾರೆ. ಹಾಗಾಗಿ ಕುಟುಂಬಸ್ಥರಿಂದ ಅಂತರ ಕಾಯ್ದುಕೊಂಡಿದ್ದೇನೆ. ಪ್ರತ್ಯೇಕ ತಟ್ಟೆಯನ್ನು ಬಳಸುತ್ತಿದ್ದೇನೆ. ನನ್ನ ಬಟ್ಟೆಗಳನ್ನು ಪ್ರತ್ಯೇಕವಾಗಿ ಇರಿಸಲಾಗುತ್ತಿದೆ. ವೈದ್ಯರು ಸೂಚನೆಯನ್ನು ಪಾಲಿಸಿದ್ರೆ ಕೊರೊನಾದಿಂದ ಉಳಿಯಬಹುದು ಎಂದು ವೆಂಕಟ್ ರಾಘವ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *