ಅಕ್ಷಯ್ ಬಳಿಕ ಅನುಷ್ಕಾ-ವಿರಾಟ್ ದಂಪತಿಯಿಂದ ಆರ್ಥಿಕ ನೆರವು

Public TV
2 Min Read

ನವದೆಹಲಿ: ಮಹಾಮಾರಿ ಕೊರೊನಾ ತಡೆಯಲು ಹಲವರು ಸಹಾಯ ಹಸ್ತ ಚಾಚುತ್ತಿದ್ದು, ಬಾಲಿವುಡ್ ನಟ, ನಟಿಯರು ದೊಡ್ಡ ಮಟ್ಟದಲ್ಲಿ ನೆರವು ನೀಡುತ್ತಿದ್ದಾರೆ. ನಟ ಅಕ್ಷಯ್ ಕುಮಾರ್ ಬಳಿಕ ಇದೀಗ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ- ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಣ ಸಹಾಯ ಮಾಡಿದ್ದಾರೆ. ಇತ್ತ ಸಲ್ಮಾನ್ ಖಾನ್ ಸಹ ಸಿನಿಮಾ ಕೂಲಿ ಕಾರ್ಮಿಕರಿಗೆ ನೆರವಾಗಿದ್ದಾರೆ.

ಈ ಕುರಿತು ಇಬ್ಬರೂ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದು, ವಿರಾಟ್ ಹಾಗೂ ನಾನು ಪಿಎಂ-ಕೇರ್ಸ್ ಫಂಡ್ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಧನ ಸಹಾಯ ಮಾಡಿದ್ದೇವೆ. ಹಲವು ಜನರು ಬಳಲುತ್ತಿರುವುದನ್ನು ನೋಡಿ ಹೃದಯ ಬಡಿತವೇ ನಿಂತಂತಾಗುತ್ತಿದೆ. ಹೀಗಾಗಿ ನಮ್ಮ ಈ ಕೊಡುಗೆ ಪರಿಹಾರ ಕೆಲಸಕ್ಕೆ ನೆರವಾಗಲಿದೆ ಎಂದು ನಾವು ಭಾವಿಸಿದ್ದೇವೆ. ನಮ್ಮ ಪ್ರೀತಿಯ ಜನರ ನೋವು ನಿವಾರಿಸಲು ಸಹಾಯವಾಗಲಿದೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಹ್ಯಾಷ್‍ಟ್ಯಾಗ್‍ನೊಂದಿಗೆ ಇಂಡಿಯಾಫೈಟ್ಸ್ ಕೊರೊನಾ ಎಂದು ಪೋಸ್ಟ್ ನಲ್ಲಿ ಹಾಕಿದ್ದಾರೆ.

 

View this post on Instagram

 

A post shared by AnushkaSharma1588 (@anushkasharma) on

ಸಾಮಾಜಿಕ ಜಾಲತಾಣಗಳಲ್ಲಿ ಅನುಷ್ಕಾ- ವಿರಾಟ್ ದಂಪತಿ ಆ್ಯಕ್ಟಿವ್ ಆಗಿದ್ದು, ಈ ವರೆಗೆ ತಮ್ಮ ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ಜಾಗೃತಿ ಮೂಡಿಸಿದ್ದರು. ಯಾರೂ ಅನಗತ್ಯವಾಗಿ ಮನೆಯಿಂದ ಹೊರಗೆ ಬರಬೇಡಿ. ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ ಎಂದು ಮನವಿ ಮಾಡುತ್ತಿದ್ದರು. ಇದೀಗ ಧನ ಸಹಾಯವನ್ನೂ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕೇವಲ ಹಣ ನೀಡಿದ್ದೇವೆ ಎಂದು ಮಾತ್ರ ತಿಳಿಸಿದ್ದು, ಎಷ್ಟು ಹಣ ನೀಡಿದ್ದಾರೆ ಎಂಬುದನ್ನು ಬಹಿರಂಗ ಪಡಿಸಿಲ್ಲ.

ನಟ ಅಕ್ಷಯ್ ಕುಮಾರ್ ಇತ್ತೀಚೆಗೆ ತಮ್ಮ ಉಳಿತಾಯದ 25 ಕೋಟಿ ರೂ.ಗಳನ್ನು ಪಿಎಂ ಕೇರ್ಸ್ ಫಂಡ್‍ಗೆ ನೀಡಿದ್ದರು. ಅಲ್ಲದೆ ಸಲ್ಮಾನ್ ಖಾನ್ ಸಹ 25 ಸಾವಿರ ಕಾರ್ಮಿಕರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಇದೀಗ ವಿರುಷ್ಕಾ ದಂಪತಿ ಹಣ ನೀಡಿದ್ದಾರೆ. ಹಲವು ಕ್ರಿಕೆಟ್ ಆಟಗಾರರು ಸಹಾಯ ಹಸ್ತ ಚಾಚಿದ್ದು, ಸಚಿನ್ ತೆಂಡೂಲ್ಕರ್ 50 ಲಕ್ಷ ರೂ. ಸುರೇಶ್ ರೈನಾ 52 ಲಕ್ಷ ರೂ. ನೀಡಿದ್ದಾರೆ. ಅಲ್ಲದೆ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧೂ, ಒಲಿಂಪಿಕ್ ಕ್ರೀಡಾಪಟು ಹಿಮಾ ದಾಸ್, ಕುಸ್ತಿ ಪಟು ಭಜರಂಗ್ ಪುನಿಯಾ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಆರ್ಥಿಕ ನೆರವು ನೀಡಿದ್ದಾರೆ. ಮಾತ್ರವಲ್ಲದೆ ಬಿಸಿಸಿಐ ಸಹ 51 ಕೋಟಿ ರೂ. ನೀಡಿದೆ.

ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್‍ನ 25 ಸಾವಿರ ಕಾರ್ಮಿಕರಿಗೆ ಸಲ್ಮಾನ್ ಖಾನ್ ಅವರ ಬೀಯಿಂಗ್ ಹ್ಯೂಮನ್ ಫೌಂಡೇಶನ್ ನೇರವಾಗಿ ಹಣ ಒದಗಿಸಲಿದೆ. ಈಗಾಗಲೇ ದಿನಗೂಲಿ ಕಾರ್ಮಿಕರ ಹೆಸರು ಮತ್ತು ಬ್ಯಾಂಕ್ ಖಾತೆಯ ಮಾಹಿತಿಯನ್ನು ಸಲ್ಮಾನ್ ಖಾನ್ ಸಂಸ್ಥೆ ಕೇಳಿದ್ದು, ಶೀಘ್ರದಲ್ಲೇ ಪ್ರತಿಯೊಬ್ಬರ ಖಾತೆಗೆ ಹಣ ಜಮಾ ಆಗಲಿದೆ ಎಂದು ಎಫ್‍ಡಬ್ಲ್ಯುಐಸಿಇ ಅಧ್ಯಕ್ಷ ಬಿ.ಎನ್.ತಿವಾರಿ ಸ್ಪಷ್ಟಪಡಿಸಿದ್ದಾರೆ.

ಎಫ್‍ಡಬ್ಲ್ಯುಐಸಿಇ ನಲ್ಲಿ ಒಟ್ಟು 5 ಲಕ್ಷ ಕಾರ್ಮಿಕರಿದ್ದು, ಇದರಲ್ಲಿ 25 ಸಾವಿರ ಕಾರ್ಮಿಕರಿಗೆ ಆರ್ಥಿಕ ನೆರವು ಅಗತ್ಯವಾಗಿದೆ. ಇವರನ್ನು ತಮ್ಮ ಸ್ವಂತ ವೆಚ್ಚದಲ್ಲಿ ನೋಡಿಕೊಳ್ಳುವುದಾಗಿ ಸಲ್ಮಾನ್ ಖಾನ್ ಅವರ ಪೌಂಢೇಷನ್ ಹೇಳಿದೆ ಎಂದು ತಿವಾರಿ ಮಾಹಿತಿ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *