ಉದ್ಯೋಗ ಕಡಿತ : ಸೆಪ್ಟೆಂಬರ್ ವೇಳೆಗೆ 3 ಲಕ್ಷ ಮಲೆಯಾಳಿಗಳು ಕೇರಳಕ್ಕೆ ವಾಪಸ್

Public TV
1 Min Read

ತಿರುವನಂತಪುರಂ: ಕೋವಿಡ್-19 ಆರ್ಭಟಕ್ಕೆ ಇಡಿ ವಿಶ್ವವೇ ಈಗ ತತ್ತರಿಸಿ ಹೋಗಿದ್ದು ಹಲವೆಡೆ ಉದ್ಯೋಗ ಕಡಿತ ಆರಂಭವಾಗಿದೆ. ಇದರ ನೇರ ಪರಿಣಾಮ ಭಾರತದ ರಾಜ್ಯಗಳಿಗೂ ತಟ್ಟಲಿದ್ದು, ಸೆಪ್ಟೆಂಬರ್ ವೇಳೆಗೆ 3 ಲಕ್ಷ ಮಲೆಯಾಳಿಗಳು ಕೇರಳಕ್ಕೆ ಮರಳಲಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.

ಕೋವಿಡ್-19 ವಿಶ್ವದ ಆರ್ಥಿಕತೆಗೆ ಬಲವಾದ ಹೊಡೆತ ನೀಡಿದೆ. ಗಲ್ಫ್ ರಾಷ್ಟ್ರಗಳಲ್ಲಿ ಇದು ಗಂಭೀರ ಸಮಸ್ಯೆಯನ್ನು ತಂದೊಡ್ಡಿದೆ. ಪರಿಣಾಮ ಮೂರು ಲಕ್ಷಕ್ಕೂ ಅಧಿಕ ಮಂದಿ ಉದ್ಯೋಗ ಕಳೆದುಕೊಂಡು ರಾಜ್ಯಕ್ಕೆ ಬರಬಹುದು ಎಂದು ಕೇರಳ ಸರ್ಕಾರ ನೇಮಿಸಿದ ಉನ್ನತ ಮಟ್ಟದ ಸಮಿತಿಯ ಸದಸ್ಯ, ವಲಸೆ ತಜ್ಞ ಎಸ್ ಇರುಡಯ ರಾಜನ್ ತಿಳಿಸಿದ್ದಾರೆ.

ಗಲ್ಫ್ ದೇಶಗಳ ಪೈಕಿ ವಿಶೇಷವಾಗಿ ಕುವೈತ್ ನಿಂದ ಒಂದು ಲಕ್ಷ ಮಂದಿ ಮರಳಬಹುದು. ವಲಸೆ ದಾಖಲೆಗಳು ಸರಿ ಇಲ್ಲದ ಹಿನ್ನೆಲೆಯಲ್ಲಿ ಅವರನ್ನು ಕಳುಹಿಸಬಹುದು. ಮುಂದೆ ಹಲವು ರಾಷ್ಟ್ರಗಳು ಇದನ್ನೇ ಅನುಸರಿಸುವ ಸಾಧ್ಯತೆಯಿದೆ. ಕೋವಿಡ್ 19 ನಿಂದ ಮಧ್ಯಪ್ರಾಚ್ಯ ರಾಷ್ಟ್ರಗಳ ಆರ್ಥಿಕತೆ ಹೇಗೆ ಚೇತರಿಕೆ ಆಗುತ್ತದೆ ಎನ್ನುವುದರ ಮೇಲೆ ಈ ವಲಸೆ ಪ್ರಮಾಣ ನಿಂತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

1990-91ರ ಅವಧಿಯಲ್ಲಿ ನಡೆದ ಗಲ್ಫ್ ಯುದ್ಧ ಸಮಯದಲ್ಲಿ 10 ಲಕ್ಷ ಕೇರಳಿಗರು ರಾಜ್ಯಕ್ಕೆ ಮರಳಿದ್ದರು. ಇದಾದ ಬಳಿಕ 2008ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತದ ವೇಳೆ ಸಾಕಷ್ಟು ಜನ ಉದ್ಯೋಗ ಕಳೆದುಕೊಂಡಿದ್ದರು. 2011ರಲ್ಲಿ ಸೌದಿ ಅರೇಬಿಯಾ ಖಾಸಗಿ ಕ್ಷೇತ್ರದಲ್ಲಿ ಶೇ.10 ರಷ್ಟು ಉದ್ಯೋಗಗಳನ್ನು ಸೌದಿ ಜನತೆಗೆ ನೀಡಬೇಕೆಂದು ಕಾನೂನು ರೂಪಿಸಿದ ಹಿನ್ನೆಲೆಯಲ್ಲಿ ಹಲವು ಮಂದಿಯ ಉದ್ಯೋಗ ಹೋಗಿತ್ತು.

ಅಂತಾರಾಷ್ಟ್ರೀಯ ವಿಮಾನ ಹಾರಾಟ ಆರಂಭಗೊಂಡ ಕೂಡಲೇ ಭಾರತಕ್ಕೆ ಭಾರೀ ಸಂಖ್ಯೆಯಲ್ಲಿ ಜನ ಮರಳಲಿದ್ದಾರೆ. ವಿದೇಶಗಳಲ್ಲಿ ಉದ್ಯೋಗ ಕಡಿತ ಈಗಾಗಲೇ ಆರಂಭಗೊಂಡಿದೆ. ಹೀಗಾಗಿ ಸರ್ಕಾರಗಳು ಅಲ್ಲಿನ ಪ್ರಜೆಗಳಿಗೆ ಉದ್ಯೋಗ ನೀಡಲು ವೀಸಾ ವಿಚಾರದಲ್ಲಿ ಕಠಿಣ ನೀತಿಯನ್ನು ಅನುಸರಿಸಿದರೆ ಲಕ್ಷಾಂತರ ಭಾರತೀಯರು ಉದ್ಯೋಗ ಕಳೆದುಕೊಳ್ಳವುದು ನಿಶ್ಚಿತ ಎಂಬ ಅಭಿಪ್ರಾಯ ಈಗಾಗಲೇ ವ್ಯಕ್ತವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *