ಬೆಂಗಳೂರಲ್ಲೇ 5 ಲಕ್ಷ ಮಂದಿಗೆ ಕೊರೊನಾ ಸೋಂಕು ತಗುಲಬಹುದು – ಐಸಿಎಂಆರ್ ವರದಿ

Public TV
2 Min Read

ನವದೆಹಲಿ: ಬೆಂಗಳೂರಿನ 5 ಲಕ್ಷ ಮಂದಿಗೆ ಕೊರೊನಾ ಬರಬಹುದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಮಾಹಿತಿ ನೀಡಿದೆ.

ಹೌದು, ಐಸಿಎಂಆರ್ ತನ್ನ ಅಧ್ಯಯನ ವರದಿಯಲ್ಲಿ ಬೆಂಗಳೂರಿನಲ್ಲಿ ಕನಿಷ್ಟ 5 ಲಕ್ಷ ಮಂದಿಗೆ ಕೊರೊನಾ ಸೋಂಕು ತಗುಲಬಹುದು ಎಂದು ಅಂದಾಜಿಸಿದೆ. ಫೆ.27 ರಂದು ಈ ವರದಿ ಪ್ರಕಟವಾಗಿದೆ. ಕೊರೊನಾ ದೇಶಕ್ಕೆ ಕಾಲಿಟ್ಟ 200 ದಿನದಲ್ಲಿ ಬೆಂಗಳೂರು, ಮುಂಬೈ, ಕೊಲ್ಕತ್ತಾದಲ್ಲಿ ತಲಾ 5 ಲಕ್ಷ ಮಂದಿಗೆ ಬಂದರೆ ದೆಹಲಿಯಲ್ಲಿ 15 ಲಕ್ಷ ಮಂದಿಗೆ ಸೋಂಕು ತಗುಲಬಹುದು ಎಂದು ಹೇಳಿದೆ. ಒಬ್ಬರಿಗೆ ಸೋಂಕು ಬಂದರೆ ಇಬ್ಬರಿಗೆ ಅಪಾಯ ಸಾಧ್ಯತೆ. ತೀರಾ ಪರಿಸ್ಥಿತಿ ಹದಗೆಟ್ಟರೆ ಒಬ್ಬರಿಂದ ನಾಲ್ವರಿಗೆ ಸೋಂಕು ಹರಡುವ ಸಾಧ್ಯತೆಯಿದೆ ಎಂದು ಉಲ್ಲೇಖಿಸಿದೆ.

ವಿಮಾನ ನಿಲ್ದಾಣಗಳ ಮೂಲಕ ವೈರಸ್ ಭಾರತ ಪ್ರವೇಶಿಸುತ್ತಿರುವ ಹಿನ್ನೆಲೆಯಲ್ಲಿ ಈ ಅಧ್ಯಯನಕ್ಕೆ ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತ್ತಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಬರುವ ಪ್ರಯಾಣಿಕರನ್ನು ಲೆಕ್ಕಾಚಾರ ಹಾಕಿ ವರದಿ ತಯಾರಿಸಲಾಗಿದೆ. ಗೃಹಬಂಧನದಲ್ಲಿರುವಾಗಲೇ ಅರ್ಧದಷ್ಟು ಜನರಿಗೆ ಕೊರೊನಾ ರೋಗದ ಲಕ್ಷಣಗಳು ಕಾಣಿಸಬಹುದು ಎಂದು ಹೇಳಿದೆ.

ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಐಸಿಎಂಆರ್ ನಿರ್ದೇಶಕ ಬಲರಾಂ ಭಾರ್ಗವ್, ನಾವು ಈ ಅಧ್ಯಯನವನ್ನು ಪೂರ್ಣವಾಗಿ ಗಣಿತದ ಆಧಾರದಲ್ಲಿ ಒಂದು ತಿಂಗಳ ಹಿಂದೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಈಗ ವಿಮಾನ ನಿಲ್ದಾಣಗಳಲ್ಲಿ 15 ಲಕ್ಷ ಮಂದಿಯನ್ನು ಸ್ಕ್ರೀನಿಂಗ್ ಮಾಡಲಾಗಿದೆ ಎಂದು ತಿಳಿಸಿದೆ. ಆದರೆ ಶೇ.46 ರಷ್ಟು ಕೊರೊನಾ ಪೀಡಿತ ಪ್ರಯಾಣಿಕರನ್ನು ಥರ್ಮಲ್ ಸ್ಕ್ರೀನಿಂಗ್ ಮೂಲಕ ಪತ್ತೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಅಧ್ಯಯನ ಹೇಳಿದೆ. ಅಷ್ಟೇ ಅಲ್ಲದೇ ವಿಮಾನ ನಿಲ್ದಾಣಗಳಲ್ಲಿ ಕೊರೊನಾ ಪರೀಕ್ಷೆ ಮಾಡುವ ಫಾಸ್ಟ್- ಟೆಸ್ಟ್ ಕಿಟ್ ಗಳು ಲಭ್ಯವಿಲ್ಲ. ಹೀಗಾಗಿ ಕೊರೊನಾ ಪ್ರಕರಣಗಳು ವೇಗವಾಗಿ ಪತ್ತೆಯಾಗುವುದಿಲ್ಲ ಎಂದು ಉಲ್ಲೇಖಿಸಿದೆ.

ಭಾರತ ಆರಂಭದಲ್ಲೇ ಚೀನಾ, ಹಾಂಕಾಂಗ್ ಗೆ ವಿಮಾನ ಸೇವೆಯನ್ನು ನಿಷೇಧಿಸಿತ್ತು. ಬಳಿಕ ಯುರೋಪಿಯನ್ ರಾಷ್ಟ್ರಗಳಿಗೆ ನಿಷೇಧಿಸಿತ್ತು. ಆದರೆ ವಿದೇಶಿ ಪ್ರಯಾಣಿಕರು ಬರುತ್ತಿರುವ ಅಂಶಗಳನ್ನು ಪರಿಗಣಿಸಿ ಈ ಅಧ್ಯಯನವನ್ನು ತಯಾರಿಸಲಾಗಿದ್ದ ಕಾರಣ ಮುಂದೆ ದತ್ತಾಂಶಗಳು ಬದಲಾಗಬಹುದು.

ಕೇಂದ್ರ ಸರ್ಕಾರ ವಿಮಾನ ನಿಲ್ದಾಣಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆಯನ್ನು ಮಾರ್ಚ್ ಮೊದಲ ವಾರದಲ್ಲಿ ಆರಂಭಿಸಿತ್ತು. ಆದರೆ ಈ ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆಯಿಂದ ಪಾರಾಗಲು ವಿಮಾನ ಲ್ಯಾಂಡಿಂಗ್ ಆಗುವ ಮೊದಲ ಒಂದು ಗಂಟೆ ಪ್ರಯಾಣಿಕರು ಪ್ಯಾರಾಸಿಟಮೋಲ್ ಮಾತ್ರೆ ಸೇವಿಸುತ್ತಿದ್ದ ವಿಚಾರವೂ ಈಗ ಬೆಳಕಿಗೆ ಬಂದಿದೆ. ಇದರ ಜೊತೆ ಗೃಹ ಬಂಧನದಲ್ಲಿರಬೇಕಾದ ವ್ಯಕ್ತಿಗಳು ಸಾರ್ವಜನಿಕವಾಗಿ ಓಡಾಡಿ ನಂತರ ಪಾಸಿಟಿವ್ ಬಂದಿದೆ. ಹೀಗಾಗಿ ಕೊರೊನಾ ಪೀಡಿತರ ಸಂಖ್ಯೆ ಭಾರತದಲ್ಲಿ ಮುಂದೆ ಇಟಲಿ, ಸ್ಪೇನ್, ಅಮೆರಿಕಂತೆ ಏರಿಕೆ ಆಗುತ್ತಾ ಅಥವಾ ಕಡಿಮೆ ಆಗುತ್ತಾ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

ರಾಜ್ಯ ಸರ್ಕಾರದ ಲೆಕ್ಕಾಚಾರವೇನು?: ಈ ವಿಚಾರದ ಬಗ್ಗೆ ಇಂದು ಪರಿಷತ್ತಿನಲ್ಲಿ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ, ಜನರು ಇದೇ ರೀತಿ ನಿರ್ಲಕ್ಷ್ಯ ಮುಂದುವರಿಸಿದರೆ ರಾಜ್ಯದಲ್ಲಿ 1 ಲಕ್ಷ ಕೊರೊನಾ ಪ್ರಕರಣಗಳು ಬರಬಹುದು ಎಂಬ ಆತಂಕ ವ್ಯಕ್ತಪಡಿಸಿದರು.

ಕರ್ನಾಟಕ ಕೊರೊನಾ ಬಗೆ ಖ್ಯಾತ ವೈದ್ಯ ದೇವಿ ಶೆಟ್ಟಿಯವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಕರ್ನಾಟಕದಲ್ಲಿ 80 ಸಾವಿರ ಮಂದಿಗೆ ಕೊರೊನಾ ಬರಬಹುದು. ಈ ಪೈಕಿ 15 ಜನರಿಗೆ ಮಾತ್ರ ತುರ್ತು ಚಿಕಿತ್ಸೆ ಅಗತ್ಯವಾಗಬಹುದು ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *