ಬಾಗಲಕೋಟೆಯಲ್ಲಿ ಓರ್ವನಿಗೆ ಕೊರೊನಾ ಪಾಸಿಟಿವ್

Public TV
2 Min Read

– ಮನೆ ಬಿಟ್ಟು ಹೊರಬರದಂತೆ ಡಿಸಿ ಮನವಿ

ಬಾಗಲಕೋಟೆ: ಜಿಲ್ಲೆಯಲ್ಲಿ 75 ವರ್ಷದ ವೃದ್ದನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕಿತ ವ್ಯಕ್ತಿಯು ವಾಸಿಸುವ ಸುತ್ತಮುತ್ತಲಿನ ವ್ಯಾಪ್ತಿಯ 5 ಕಿಮೀ ಪ್ರದೇಶಕ್ಕೆ ಸಂಪೂರ್ಣವಾಗಿ ನಿರ್ಬಂಧ ಹೇರಲಾಗಿದ್ದು, ಸಾರ್ವಜನಿಕರು ಮನೆ ಬಿಟ್ಟು ಹೊರಬರದಂತೆ ಜಿಲ್ಲಾಧಿಕಾರಿ ಡಾ.ಕೆ ರಾಜೇಂದ್ರ ಮನವಿ ಮಾಡಿದ್ದಾರೆ.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇದು ಮೊದಲ ಪ್ರಕರಣವಾಗಿದ್ದು, ಸೋಂಕಿತ ವ್ಯಕ್ತಿಯನ್ನು ಜಿಲ್ಲಾ ಆಸ್ಪತ್ರೆಯ ಐಸೋಲೇಶನ್ ವಾರ್ಡ್‍ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಮಾಡಲಾಗಿದ್ದು, ಅಲ್ಲಿರುವ ರೋಗಿಗಳನ್ನು ಹಳೇ ಬಾಗಲಕೋಟೆಯಲ್ಲಿರುವ 50 ಹಾಸಿಗೆಯ ಆಸ್ಪತ್ರೆ ಹಾಗೂ ಕುಮಾರೇಶ್ವರ ಆಸ್ಪತ್ರೆಗೆ ರವಾನಿಸಿ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ನೀಡಲಾಗುವುದೆಂದು ತಿಳಿಸಿದರು.

ಸೋಂಕಿತ ವ್ಯಕ್ತಿಯನ್ನು ಕಳೆದ 15 ದಿನಗಳಲ್ಲಿ ಯಾರು ಸಂಪರ್ಕ ಹೊಂದಿದ್ದಾರೆಯೋ ಅವರನ್ನು ಪತ್ತೆ ಹಚ್ಚುವ ಕಾರ್ಯ ಮಾಡಲಾಗುತ್ತಿದೆ. ಅಲ್ಲದೇ ಸೋಂಕಿತ ವ್ಯಕ್ತಿಯನ್ನು ಸಂಪರ್ಕಿಸಿದವರು ಸ್ವಯಂ ಪ್ರೇರಿತರಾಗಿ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪ್ರಕಾಶ್ ಬಿರಾದಾರ (9449843160) ಅವರನ್ನು ಕೂಡಲೇ ಸಂಪರ್ಕಿಸಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳು ಕೋರಿದರು. ಡಯಾಲಿಸಿಸ್ ಮಾಡುವಂತ ರೋಗಿಗಳನ್ನು ಕುಮಾರೇಶ್ವರ, ಸುಭಾಷ್ ಮತ್ತು ಕೆರೂಡಿ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಕೊರೊನಾಗೆ ಉತ್ತಮ ಔಷಧಿ ಎಂದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಸ್ಟೇಹೋಮ್ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ ಮಾತನಾಡಿ, ಸೋಂಕಿತ ವ್ಯಕ್ತಿಯು ವಾಸಿಸುವ ಸುತ್ತಮುತ್ತಲಿನ 5 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಿರ್ಬಂಧಿತ ಪ್ರದೇಶದಲ್ಲಿರುವವರು ಹೊರಗೆ ಹೋಗುವಂತಿಲ್ಲ. ಅಲ್ಲದೇ ಹೊರಗಿನವರು ಈ ನಿರ್ಬಂಧಿತ ಪ್ರದೇಶದಲ್ಲಿ ಪ್ರವೇಶಿಸುವಂತಿಲ್ಲ. ಈ ನಿರ್ಬಂಧ ಉಲ್ಲಂಘಿಸಿದವರ ವಿರುದ್ಧ ಕಾನೂನಿನ ಪ್ರಕಾರ ಕ್ರಮಕೈಗೊಳ್ಳಲಾಗುವುದೆಂದು ತಿಳಿಸಿದರು.

ನಿರ್ಬಂಧಿತ ಪ್ರದೇಶದಲ್ಲಿರುವವರಿಗೆ ಕುಡಿಯುವ ನೀರು ಅಗತ್ಯ ವಸ್ತುಗಳ ಪೂರೈಕೆ ಹಾಗೂ ಮೆಡಿಶಿನ್‍ಗಳನ್ನು ತಲುಪಿಸುವ ಕಾರ್ಯ ಮಾಡಲಾಗುವುದು. ವೃದ್ದ ವ್ಯಕ್ತಿಗೆ ಯಾವ ಮೂಲದಿಂದ ಸೋಂಕು ತಗಲಿದೆ ಎಂಬುದರ ಬಗ್ಗೆ ಪತ್ತೆ ಹಚ್ಚುವ ಕಾರ್ಯ ಮಾಡಲಾಗುತ್ತಿದೆ. ಸೋಂಕಿತ ವ್ಯಕ್ತಿ ಬೇರೆ ಎಲ್ಲೆಯೂ ಹೋಗಿರುವ ಬಗ್ಗೆ ಉದಾಹರಣೆಗಳು ಇರುವುದಿಲ್ಲ. ಹೊರಗಡೆಯಿಂದ ಬಂದವರಿಂದ ಸೋಂಕು ತಗಲಿರಬಹುದೆಂದು ಊಹಿಸಲಾಗಿದೆ. ಪತ್ತೆಯಾಗುವವರೆಗೆ ಅನಾವಶ್ಯಕವಾಗಿ ನಿರ್ಬಂಧಿತ ಪ್ರದೇಶದ ಒಳಗಡೆ ಪ್ರವೇಶಿಸದಂತೆ ನೋಡಿಕೊಳ್ಳಲಾಗುವುದೆಂದು ಜಗಲಾಸರ ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್ ದೇಸಾಯಿ ಮಾತನಾಡಿ ಸೋಂಕಿತ ವ್ಯಕ್ತಿಯ ಮಗ ಮತ್ತು ಮಗಳು ಕಳೆದ 10 ದಿನಗಳಿಂದ ಬೆಂಗಳೂರಿನಿಂದ ಬಂದಿದ್ದು, ಲಕ್ಷಣಗಳು ಕಂಡುಬರದೇ ಇದ್ದರೂ ಸಹ ಅವರಿಬ್ಬರ ಸ್ಯಾಂಪಲ್‍ಗಳು ಸೇರಿ ಮನೆಯಲ್ಲಿದ್ದ ಇತರೆ 3 ಜನರ ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಸೋಂಕಿತನು ಈ ಹಿಂದೆ ಬೇರೆ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿರುವುದಾಗಿ ತಿಳಿದುಬಂದಿದೆ. ಸೋಂಕಿತ ವ್ಯಕ್ತಿಯ ಸುತ್ತಮುತ್ತಲಿನ ಮನೆಯವರ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *