ಬೆಂಗಳೂರು: ಕೊರೊನಾ ಸೋಂಕಿತ ರೋಗಿ ನಂಬರ್ 465 ಆರೋಗ್ಯಾಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ವಿದೇಶಕ್ಕೂ ಹೋಗದಿದ್ರೂ, ಸೋಂಕಿತರನ್ನು ಭೇಟಿ ಮಾಡದಿದ್ರೂ ಕೊರೊನಾ ಪತ್ತೆಯಾಗಿದೆ. ಇದೀಗ ಇದೇ ಸೋಂಕಿತ ಮಹಿಳೆಯಿಂದ ಕುಟುಂಬದ ಮೂರು ಜನರಿಗೆ ಸೋಂಕು ತಗುಲಿರೋದು ದೃಢಪಟ್ಟಿದೆ.
ರೋಗಿ 465ನಿಂದ ಅಕ್ಕ, ಮಗ, ಅಳಿಯನಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ರೋಗಿ ನಂ. 498 ಅಕ್ಕ, ರೋಗಿ ನಂ. 499 ಮಗ, ರೋಗಿ ನಂ. 500 ಅಳಿಯ ಇವರೆಲ್ಲರೂ ಒಂದೇ ಕುಟುಂಬದವರಾಗಿದ್ದಾರೆ.
ರೋಗಿ ನಂಬರ್ 465: 45 ವರ್ಷದ ಹಂಪಿ ನಗರದ ನಿವಾಸಿಯಾಗಿರುವ ಮಹಿಳೆ ವಿದೇಶ ಪ್ರಯಾಣ ಬೆಳೆಸಿಲ್ಲ ಮತ್ತು ಯಾವ ಸೋಂಕಿತರ ಸಂಪರ್ಕದಲ್ಲಿಯೂ ಬಂದಿಲ್ಲ. ಕಳೆದ 15 ದಿನಗಳಿಂದ ಮಹಿಳೆಗೆ ಶೀತ, ಜ್ವರ ಮತ್ತು ನ್ಯುಮೋನಿಯಾ ಲಕ್ಷಣಗಳು ಕಂಡು ಬಂದಿದ್ದವು. ವೈದ್ಯಕೀಯ ಪರೀಕ್ಷೆ ನಡೆಸಿದಾಗ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಮಹಿಳೆಯನ್ನು ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಐಸೋಲೇಶನ್ ಮಾಡಲಾಗ್ತಿದೆ.
ಈ ಮೂವರು ಬೆಂಗಳೂರಿನ ಹಂಪಿ ನಗರದ ನಿವಾಸಿಗಳು. ದೀಪಾಂಜಲಿ ನಗರ, ರಾಜಾಜಿ ನಗರಗಳಲ್ಲಿ ಓಡಾಟ ನಡೆಸಿದ್ದಾರೆ. ಮಹಿಳೆ ದೀಪಾಂಜಲಿ ನಗರದ ಅನ್ಣನ ಮನೆಯಲ್ಲಿ ಕಾಲ ಕಳೆಯುತ್ತಿದ್ದರು. ಹಾಗಾಗಿ ಅಣ್ಣನ ಕುಟುಂಬಸ್ಥರಿಗೂ ಸೋಂಕು ತಗುಲಿರುವ ಸಾಧ್ಯತೆಗಳಿವೆ.
ರೋಗಿ ನಂಬರ್ 465ರ ಟ್ರಾವೆಲ್ ಹಿಸ್ಟರಿ: ಏಪ್ರಿಲ್ 2ರಂದು ಕೊರೊನಾ ಸೋಂಕಿತ ಮಹಿಳೆಯ ಪತಿ ಕಿಡ್ನಿ ವೈಫಲ್ಯ, ನ್ಯುಮೋನಿಯಾದಿಂದ ಸಾವನ್ನಪ್ಪಿದ್ದರು. ಟಿ.ಆರ್ ಮಿಲ್‍ನಲ್ಲಿ ಮೃತ ಗಂಡನ ಅಂತ್ಯ ಸಂಸ್ಕಾರದಲ್ಲಿಯೂ ಭಾಗಿಯಾಗಿದ್ರು. 10 ದಿನಗಳ ಬಳಿಕ ಮಹಿಳೆಗೆ ಕೆಮ್ಮು, ಶೀತ, ಜ್ವರ, ನ್ಯೂಮೋನಿಯಾ ಲಕ್ಷಣ ಕಾಣಿಸಿಕೊಂಡಿದ್ದವು. ರಾಜಾಜಿನಗರದ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಫೀವರ್ ಕ್ಲಿನಿಕ್‍ನಲ್ಲಿ ಪರೀಕ್ಷಿಸಿದಾ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ.
ಮಹಿಳೆಯ ಸಂಪರ್ಕದಲ್ಲಿದ್ದ 10 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಇನ್ನು ಮಹಿಳೆಯ ಸಂಪೂರ್ಣ ಟ್ರಾವೆಲ್ ಹಿಸ್ಟರಿಯಲ್ಲಿ ಆರೋಗ್ಯಾಧಿಕಾರಿಗಳು ಕಲೆ ಹಾಕುತ್ತಿದ್ದಾರೆ.