ಕೊರೊನಾ ಅಲರ್ಟ್ ಇದ್ರೂ ಜನ ಕ್ಯಾರೇ ಅಂತಿಲ್ಲ- ಬೀಚ್ ಸ್ನಾನಕ್ಕೆ ಪ್ರವಾಸಿಗರ ದಂಡು

Public TV
1 Min Read

ಉಡುಪಿ: ರಾಜ್ಯದಲ್ಲಿ ಕೊರೊನಾ ಹಾವಳಿ ಜಾಸ್ತಿಯಾಗಿದೆ. ಜನನಿಬಿಡ ಪ್ರದೇಶದಿಂದ, ಪ್ರವಾಸಿ ತಾಣಗಳಿಂದ ಜನ ದೂರ ಇರಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಪ್ರವಾಸಿಗರು ಇದಕ್ಕೆ ಕ್ಯಾರೇ ಅಂತಿಲ್ಲ.

ಕೊರೊನಾ, ಗಿರೊನಾ ಅಂತ 24 ಗಂಟೆ ಮನೆಯೊಳಗೆ ಕೂರೊಕ್ಕಾಗುತ್ತಾ ಎಂದು ಪ್ರವಾಸಿಗರು ಹೇಳುತ್ತಿದ್ದಾರೆ. ಕೊರೊನಾ ಇರಲಿ ನಾವು ಕೇರ್ ಮಾಡಲ್ಲ, ಲೈಫ್ ಎಂಜಾಯ್ ಮಾಡೋ ಟೈಮಲ್ಲಿ ಮಾಡಬೇಕು ಎಂದು ಪ್ರವಾಸಿಗರು ಮಲ್ಪೆ ಬೀಚ್ ನತ್ತ ಬರುತ್ತಿದ್ದಾರೆ.

ರಾಜ್ಯದಲ್ಲಿ ಉರಿ ಬಿಸಿಲು ಜಾಸ್ತಿ ಆಗಿರಬೇಕಾದರೆ ಮಲ್ಪೆ ಬೀಚಿಗೆ ಬಂದು ದಿನಪೂರ್ತಿ ನೀರಲ್ಲಿ ಬಿದ್ದು ಒದ್ದಾಡಬೇಕು ಎಂದು ಪ್ಲ್ಯಾನ್ ಮಾಡ್ಕೊಂಡು ಜನ ಉಡುಪಿಗೆ ಬರುತ್ತಿದ್ದಾರೆ. ಚಿಕ್ಕಬಳ್ಳಾಪುರ, ಶಿವಮೊಗ್ಗದ ಪ್ರವಾಸಿಗರು ಉಡುಪಿಗೆ ಬಂದಿದ್ದಾರೆ. ಬಿಸಿಲ ಬೇಗೆಯನ್ನು ಕಳೆಯುವುದಕ್ಕೆ ನೂರಾರು ಪ್ರವಾಸಿಗರು ಮಲ್ಪೆ ಬೀಚಿಗೆ ಬರುತ್ತಿದ್ದು ಕೆಲ ಹೊತ್ತು ನೀರಿನಲ್ಲಿ ಇದ್ದು ದಾಹವನ್ನು ತಣಿಸಿಕೊಳ್ಳುತ್ತಿದ್ದಾರೆ.

ಶಿವಮೊಗ್ಗ ಮೂಲದ ತೌಸಿಫ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಕೊರೊನಾಗೆ ನಾವು ಭಯಪಡಬಾರದು. ವೈರಸ್ ಮನುಷ್ಯನನ್ನು ನೋಡಿ ಅದು ಭಯ ಪಡಬೇಕು. ವೈರಸ್ ಇದೆ ಎಂದು ಮನೆಯಲ್ಲಿ ಕೂತರೆ 24 ಗಂಟೆ ಕೂರಬೇಕಾಗಬಹುದು ಎಂದು ಹೇಳಿದರು.

ಮಲ್ಪೆ ಬೀಚ್ ಬಳಿಯ ಜ್ಯೂಸ್ ಅಂಗಡಿ ಮಾಲೀಕ ಉಪೇಂದ್ರ ಮಾತನಾಡಿ, ಮಾಮೂಲಿ ದಿನಗಳಲ್ಲಿ ನಮಗೆ 10 ಸಾವಿರ ರೂ. ವ್ಯಾಪಾರ ಆಗುತ್ತದೆ. ಕಳೆದ ಮೂರ್ನಾಲ್ಕು ದಿವಸಗಳಿಂದ ಒಂದರಿಂದ ಎರಡು ಸಾವಿರದಷ್ಟು ವ್ಯಾಪಾರವಾಗುತ್ತಿಲ್ಲ. ಅಂಗಡಿ ಮುಚ್ಚಿ ಮನೆಗೆ ಹೋಗುವ ಎಂದಿ ಎನಿಸುತ್ತಿದೆ. ಜಿಲ್ಲಾಡಳಿತ ಇವರಿಗೆ ಬಂದ್ ಮಾಡಬೇಕು ಎಂದು ಲಿಖಿತವಾಗಿ ನಮಗೆ ಏನೂ ಮಾಹಿತಿ ಕೊಟ್ಟಿಲ್ಲ ಎಂದರು.

ಮಲ್ಪೆ ಬೀಚ್‍ನ ಅಮ್ಯೂಸ್ಮೆಂಟ್ ಪಾರ್ಕ್ ಗಳು ವಿವಿಧ ಗೇಮ್‍ಗಳು, ಬೀಚ್ ರೈಡಿಂಗ್, ಬೀಚ್ ಕ್ರಿಕೆಟ್, ಬೀಚ್ ಶೂಟಿಂಗ್ ಎಲ್ಲವೂ ಪ್ರವಾಸಿಗರಿಲ್ಲದೆ ಬಿಕೋ ಅನ್ನುತ್ತಿದೆ. ಆದರೆ ಸಮುದ್ರಕ್ಕೆ ಈಜಿ ಹೇಳುವವರಿಗೆ ನಾವು ತಡೆಯೊಡ್ಡಲು ಆಗುತ್ತಿಲ್ಲ. ಕಿ.ಮೀಗಟ್ಟಲೆ ಸಾಗರ ಆವರಿಸಿರುವುದರಿಂದ ಪ್ರವಾಸಿಗರು ಎಲ್ಲಾದರೂ ಹೋಗಿ ನೀರಿಗೆ ಇಳಿಯುತ್ತಿದ್ದಾರೆ ಎಂದು ಲೈಫ್ ಗಾರ್ಡ್ ಸಿಬ್ಬಂದಿ ಮಾಹಿತಿ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *