ಸಿನಿಮಾಗಳ ಒಳಾಂಗಣ ಕೆಲಸಕ್ಕೆ ಅನುಮತಿ ಕೊಟ್ಟ ಸರ್ಕಾರ

Public TV
1 Min Read

– ಚಿತ್ರೀಕರಣ ಹೊರತುಪಡಿಸಿ ಎಲ್ಲಾ ಕೆಲಸ ಮಾಡಬಹುದು

ಬೆಂಗಳೂರು: ಇತ್ತೀಚೆಗಷ್ಟೆ ಧಾರಾವಾಹಿಗಳ ಒಳಾಂಗಣ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಟ್ಟಿದ್ದ ಸರ್ಕಾರ ಇದೀಗ ಸಿನಿಮಾಗಳ ಒಳಾಂಗಣ ಕೆಲಸಕ್ಕೆ ಅನುಮತಿ ಕೊಟ್ಟಿದೆ.

ಸಿನಿಮಾಗಳ ಒಳಾಂಗಣ ಕೆಲಸಕ್ಕೆ ಮಾತ್ರ ಸರ್ಕಾರ ಅನುಮತಿ ನೀಡಿದೆ. ಈ ಬಗ್ಗೆ ಮಾತನಾಡಿದ ಸಚಿವ ಆರ್.ಅಶೋಕ್ ಅವರು, ಸರ್ಕಾರ ಸಿನಿಮಾಗಳ ಒಳಾಂಗಣ ಕೆಲಸಕ್ಕೆ ಅನುಮತಿ ಕೊಟ್ಟಿದೆ. ಶೂಟಿಂಗ್ ಬೇಡ ಬದಲಿಗೆ ಪೋಸ್ಟ್ ಪ್ರೊಡಕ್ಷನ್, ಪ್ರೀ ಪ್ರೊಡಕ್ಷನ್ ಕೆಲಸಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಎಡಿಟಿಂಗ್, ಮಿಕ್ಸಿಂಗ್, ಗ್ರಾಫಿಕ್ಸ್ ಈ ರೀತಿಯ ಕೆಲಸ ಮಾಡಿಕೊಳ್ಳಬಹುದು ಎಂದು ತಿಳಿಸಿದರು.

ಚಿತ್ರೀಕರಣ ಹೊರತುಪಡಿಸಿ ಎಲ್ಲಾ ಕೆಲಸಗಳನ್ನ ಮಾಡಬಹುದು. ಇವತ್ತಿನಿಂದಲೇ ಕೆಲಸ ಮಾಡಬಹುದು. 80 ಸಿನಿಮಾಗಳು ರಿಲೀಸ್ ಹಂತದಲ್ಲಿದೆ. ಹೀಗಾಗಿ ಸಿನಿಮಾ ಒಳಾಂಗಣ ಕೆಲಸಗಳಿಗೆ ಅವಕಾಶ ನೀಡಲಾಗಿದೆ. 10 ಜನರೊಳಗೆ ಅಂತರ ಕಾಪಾಡಿಕೊಳ್ಳಬೇಕು. ಜೊತೆಗೆ ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯವಾಗಿರಬೇಕು ಎಂದು ಎಚ್ಚರಿಕೆ ನೀಡಿದರು.

ಕಳೆದ 4 ದಿನಗಳ ಹಿಂದೆ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ ಸಿನಿಮಾ ಒಳಾಂಗಣ ಕೆಲಸಗಳ ಅನುಮತಿ ಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ನಂತರ ಅಶೋಕ್ ಎರಡು ದಿನಗಳ ಹಿಂದೆ ಸಿಎಂ ಯಡಿಯೂರಪ್ಪ ಅವರಿಗೆ ಈ ಬಗ್ಗೆ ತಿಳಿಸಿದ್ದರು.

ಸಿನಿಮಾ ಒಳಾಂಗಣ ಚಟುವಟಿಕೆಗಳಿಗೆ ಸರ್ಕಾರ ಅನುಮತಿ ಕೊಟ್ಟ ಹಿನ್ನೆಲೆಯಲ್ಲಿ ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕ ಸಂಘ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ. ನಿರ್ಮಾಪಕ ಸಂಘದ ಅಧ್ಯಕ್ಷ ಪ್ರವೀಣ್, ನಿರ್ಮಾಪಕ ಕೆ.ಮಂಜು ಮತ್ತು ವಾಣಿಜ್ಯ ಮಂಡಳಿ ಸಿಬ್ಬಂದಿ ಇತರರು ಕಂದಾಯ ಸಚಿವರನ್ನು ಭೇಟಿ ಮಾಡಿ ಧನ್ಯವಾದ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *