ಕೋವಿಡ್ ಸಂಪೂರ್ಣವಾಗಿ ಹೋಗಿಲ್ಲ, ಇನ್ನೂ ಹಲವು ಅಲೆಗಳು ಬರಬಹುದು: ಸುಧಾಕರ್

Public TV
3 Min Read

ಬೆಂಗಳೂರು: ಕೋವಿಡ್ ಸಂಪೂರ್ಣವಾಗಿ ಹೋಗಿಲ್ಲ. ಆದರೆ ಲಸಿಕಾಕರಣದಿಂದ ನಿಯಂತ್ರಣ ಮಾಡಲಾಗಿದೆ. ಕೊರೊನಾ ನಿಯಂತ್ರಣದಲ್ಲಿ ಸಾಗಬೇಕಾದ ಹಾದಿ ಇನ್ನೂ ದೂರವಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಸಂಸ್ಥೆಯಲ್ಲಿ, 12 ರಿಂದ 14 ವರ್ಷದೊಳಗಿನ ಅರ್ಹ ಮಕ್ಕಳಿಗೆ ಕೋರ್ಬಿವ್ಯಾಕ್ಸ್ ಲಸಿಕೆ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕೆ ಲಸಿಕಾಕರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಈ ಲಸಿಕೆ ಮೂಲಕ ಪೋಷಕರ ಆತಂಕ ದೂರ ಮಾಡುತ್ತಿದೆ. 12 ರಿಂದ 14 ವರ್ಷ ಮಕ್ಕಳು ಈ ಲಸಿಕೆ ತೆಗೆದುಕೊಂಡರೆ ಕೊರೊನಾ ವಿರುದ್ಧ ಹೋರಾಡಲು ಶಕ್ತಿ ಪಡೆಯಬಹುದು. ರಾಜ್ಯದಲ್ಲಿ 20 ಲಕ್ಷ ಮಕ್ಕಳಿಗೆ ಈ ಲಸಿಕೆ ನೀಡಲಾಗುವುದು. ಸರ್ಕಾರದ ಕ್ರಮಗಳಿಗೆ ಪೋಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಹಿಜಬ್ ವಿವಾದ, ತುರ್ತು ವಿಚಾರಣೆ ನಿರಾಕರಿಸಿದ ಸುಪ್ರೀಂಕೋರ್ಟ್ – ಹೋಳಿ ರಜೆ ಬಳಿಕ ವಿಚಾರಣೆ

ಕೋವಿಡ್ ಲಸಿಕೆ ಪಡೆದವರು ಕೂಡ ಮುಂಜಾಗೃತಾ ಕ್ರಮಗಳನ್ನು ಮರೆಯುವ ಹಾಗಿಲ್ಲ. ಕೋವಿಡ್ ಸಂಪೂರ್ಣವಾಗಿ ಹೋಗಿಲ್ಲ. ಆದರೆ ಲಸಿಕಾಕರಣದಿಂದ ನಿಯಂತ್ರಣಕ್ಕೆ ಬಂದಿದೆ. ಈ ವಿಚಾರದಲ್ಲಿ ಸಾಗಬೇಕಾದ ಹಾದಿ ದೂರವಿದೆ. ಇನ್ನೂ ಹಲವು ಅಲೆಗಳು ಬರಬಹುದು ಎಂಬ ಆತಂಕವಿದೆ. ಲಸಿಕಾಕರಣದಿಂದ ಅದೆಲ್ಲವನ್ನೂ ದೂರ ಮಾಡಬಹುದು. ಮಾಸ್ಕ್, ಭೌತಿಕ ಅಂತರದ ಮೂಲಕ ಮುಂಜಾಗೃತಾ ಕ್ರಮಗಳನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದರು.

ರಾಜ್ಯದಲ್ಲಿ 10 ಕೋಟಿಗೂ ಅಧಿಕ ಡೋಸ್ ಲಸಿಕೆ ನೀಡಲಾಗಿದೆ. ಭಾರತದಲ್ಲಿ 180 ಕೋಟಿಗೂ ಹೆಚ್ಚು ಡೋಸ್ ನೀಡಲಾಗಿದೆ. ಈ ಸಾಧನೆ ವಿಶ್ವಮಟ್ಟದಲ್ಲೇ ದೊಡ್ಡದು. ಈ ಹಿಂದೆ ಯಾವುದೇ ಲಸಿಕೆ ಕೊಟ್ಟಿದ್ದರೂ ಅದು ಕೇವಲ 4 ರಿಂದ 5 ಕೋಟಿ ಡೋಸ್ ಅಷ್ಟೇ ಇದೆ. ಆದರೆ ಕೊರೊನಾ ಲಸಿಕೆಯನ್ನು ಕಳೆದ 1 ವರ್ಷದಲ್ಲಿ 180 ಕೋಟಿ ಡೋಸ್ ನೀಡಲಾಗಿದೆ. ಭಾರತ ಕೊರೊನಾ ವಿರುದ್ಧದ ಹೋರಾಟದಲ್ಲಿ ವಿಶ್ವ ನಾಯಕನಾಗಿದೆ ಎಂದರು. ಇದನ್ನೂ ಓದಿ: ಅಗ್ಗದ ದರದಲ್ಲಿ ರಷ್ಯಾದ ಕಚ್ಚಾ ತೈಲ ಖರೀದಿಗೆ ಮುಂದಾದ ಭಾರತ- ಅಮೆರಿಕ ಹೇಳಿದ್ದೇನು?

0-12 ವರ್ಷದ ಒಳಗಿನ ಮಕ್ಕಳಿಗೂ ಮುಂದಿನ ದಿನಗಳಲ್ಲಿ ಲಸಿಕೆ ದೊರೆಯಲಿದೆ. ಎಲ್ಲವೂ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಸಂಶೋಧನೆಯಾಗಿ, ಅಧ್ಯಯನವಾಗಿ, ಪರವಾನಗಿ ತೆಗೆದುಕೊಂಡು ಜನರಿಗೆ ನೀಡಲಾಗುತ್ತಿದೆ. ಚೀನಾದ ಕೆಲ ನಗರಗಳಲ್ಲಿ ಮತ್ತು ಕೆಲ ದೇಶಗಳಲ್ಲಿ ಕೋವಿಡ್ ಹೆಚ್ಚಾದ ಬಗ್ಗೆ ಗಮನ ನೀಡಲಾಗಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಕೋವಿಡ್ ಹೆಚ್ಚಾಗುತ್ತಿರುವ ದೇಶ, ನಗರಗಳ ಬಗ್ಗೆ ಮಾಹಿತಿ ಪಡೆಯುತ್ತಿವೆ ಎಂದು ತಿಳಿಸಿದರು.

ಯುದ್ಧ ಪೀಡಿತ ಉಕ್ರೇನ್ ನಿಂದ ವಾಪಸ್ಸಾದ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಜೊತೆ ವಿಚಾರ ವಿನಿಮಯ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಸೂಕ್ತ ನ್ಯಾಯ ಮತ್ತು ಶಿಕ್ಷಣಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು. ಇದನ್ನೂ ಓದಿ: ಬೆಳ್ಳಂಬೆಳಗ್ಗೆ 18 ಸರ್ಕಾರಿ ಅಧಿಕಾರಿಗಳ ವಿರುದ್ಧ ದಾಳಿ- ಎಸಿಬಿಯಿಂದ ಪ್ರಾಥಮಿಕ ಮಾಹಿತಿ ರಿಲೀಸ್‌

ಮಕ್ಕಳಿಗೆ ಹಾಗೂ ಹಿರಿಯ ನಾಗರಿಕರಿಗೆ ಲಸಿಕೆ:
ಮಾರ್ಚ್ 16 ರಿಂದ, 12-14 ವಯೋಮಾನದ ಮಕ್ಕಳಿಗೆ ಕೋವಿಡ್ ಲಸಿಕಾಕರಣ ಆರಂಭವಾಗಿದೆ. ಇದರ ಜೊತೆಗೆ 60 ವರ್ಷ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕೆ ಲಸಿಕೆ ನೀಡಲಾಗುತ್ತಿದೆ. 2010ರ ಮಾರ್ಚ್ 15 ರಂದು ಜನಿಸಿದ ಹಾಗೂ ಅದಕ್ಕೂ ಮುನ್ನ ಜನಿಸಿದ ಮಕ್ಕಳು ಇದಕ್ಕೆ ಅರ್ಹರಾಗುತ್ತಾರೆ. ಇದು ಕೋರ್ಬಿವ್ಯಾಕ್ಸ್ ಲಸಿಕೆಯಾಗಿದ್ದು, ಮೊದಲ ಡೋಸ್ ನೀಡಿದ 28 ದಿನಗಳ ನಂತರ ಎರಡನೇ ಡೋಸ್ ನೀಡಲಾಗುತ್ತದೆ.

ರಾಜ್ಯದಲ್ಲಿ 12-14ರ ವಯೋಮಾನದ 20 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿಯನ್ನು ಆರೋಗ್ಯ ಇಲಾಖೆ ಹೊಂದಿದೆ. ಇಷ್ಟೇ ಅಲ್ಲದೆ, 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ಎರಡನೇ ಡೋಸ್ ಪಡೆದ 39 ವಾರ ಅಥವಾ 9 ತಿಂಗಳ ಬಳಿಕ ಅವರಿಗೆ ಮುನ್ನೆಚ್ಚರಿಕೆ ಡೋಸ್ ನೀಡಲಾಗುತ್ತದೆ. ಈ ವಯೋಮಾನದ 76.58 ಲಕ್ಷ ಮಂದಿಗೆ ಲಸಿಕೆ ನೀಡುವ ಗುರಿ ಎಂದು ಮಾಹಿತಿ ಹಂಚಿಕೊಂಡರು.

Share This Article
Leave a Comment

Leave a Reply

Your email address will not be published. Required fields are marked *