ಯಾವುದೇ ಲಕ್ಷಣಗಳಿಲ್ಲದಿದ್ದರೂ ಕೊರೊನಾ ಬರುತ್ತೆ: ಸಂಸದ ಜಿ.ಎಂ ಸಿದ್ದೇಶ್ವರ್ ಪುತ್ರಿ

Public TV
3 Min Read

– ಕೋವಿಡ್ 19ನಿಂದ ಭಯಪಡೋ ಅಗತ್ಯವಿಲ್ಲ
– ಹೊರದೇಶದಿಂದ ಬಂದವರು ಪ್ಲೀಸ್ ಟೆಸ್ಟ್ ಮಾಡಿಸ್ಕೊಳ್ಳಿ
– ಆಸ್ಪತ್ರೆಯಲ್ಲಿದ್ದ ಸಂದರ್ಭ ವಿವರಿಸಿದ ಅಶ್ವಿನಿ

ದಾವಣಗೆರೆ: ಜಿಲ್ಲೆಯ ಸಂಸದ ಜಿ.ಎಂ ಸಿದ್ದೇಶ್ವರ್ ಪುತ್ರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಇದೀಗ ಗುಣಮುಖರಾಗಿ ತಾನು ಗೆದ್ದ ಕಥೆಯನ್ನು ಬಿಚ್ಚಿಟ್ಟಿದ್ದಾರೆ.

ಈ ಸಂಬಂಧ ವಿಡಿಯೋ ಮಾಡಿರುವ ಅಶ್ವಿನಿ, ಗಯಾನಾ ದೇಶದಿಂದ ಮಾರ್ಚ್ 20ರಂದು ಭಾರತಕ್ಕೆ ಬಂದಿದ್ದೇನೆ. ಗಯಾನದಲ್ಲಿ ಚುನಾವಣೆಯ ಪ್ರಯುಕ್ತ ಜನಾಂಗೀಯ ಹಿಂಸೆ ನಡೆಯುತ್ತಾ ಇರೋ ಕಾರಣದಿಂದ ಮಕ್ಕಳ ಜೊತೆ ಭಾರತಕ್ಕೆ ಬರಬೇಕಾದ ಅನಿವಾರ್ಯ ಸ್ಥಿತಿ ಬಂತು. ಇಲ್ಲಿ ಬಂದು ಹೋಂ ಕ್ವಾರಂಟೈನ್ ಆಗಿ ಇದ್ದೆವು. ಯಾರ ಜೊತೆಯೂ ಸಂಪರ್ಕದಲ್ಲಿ ಇರಲಿಲ್ಲ ಎಂದಿದ್ದಾರೆ.

ಎರಡು ದಿನದ ಬಳಿಕ ತಂದೆ ಕೋವಿಡ್ 19 ಟೆಸ್ಟ್ ಮಾಡಿಸಿದ್ರು. ಈ ವೇಳೆ ವರದಿಯಲ್ಲಿ ನನ್ನದು ಪಾಸಿಟಿವ್, ಮಕ್ಕಳದ್ದು ನೆಗೆಟಿವ್ ಬಂತು. ಅದಾದ ಬಳಿಕ ದಾವಣಗೆರೆ ಜಿಲ್ಲಾಧಿಕಾರಿ ಮತ್ತು ಎಸ್‍ಪಿ ಜೊತೆ ತಂದೆ ಮಾತಾಡಿ ಪ್ರೋಟೋಕಾಲ್ ಪ್ರಕಾರ ಅಂಬುಲೆನ್ಸ್ ನಲ್ಲಿ ಕರೆದುಕೊಂಡು ಬಂದು ಎಸ್‍ಎಸ್ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಅಲ್ಲಿ ಐಸೋಲೇಷನ್ ವಾರ್ಡಿನಲ್ಲಿದ್ದೆ. ಅಲ್ಲಿ ನನ್ನನ್ನು ಪ್ರತಿಯೊಬ್ಬರೂ ತುಂಬಾನೆ ಚೆನ್ನಾಗಿ ನೋಡಿಕೊಂಡರು ಅಂತ ತಿಳಿಸಿದ್ದಾರೆ.

ಕೋವಿಡ್ 19 ಬಂದ ತಕ್ಷಣ ಏನೋ ಒಂದು ದೊಡ್ಡ ರೋಗ ಬಂದಿದೆ ಎಂದು ಭಯಪಡುವ ಅವಶ್ಯಕತೆ ಇಲ್ಲ. ನನಗೆ ಯಾವುದೇ ರೀತಿಯ ಲಕ್ಷಣಗಳು ಇರಲಿಲ್ಲ. ಆದರೆ ಆಸ್ಪತ್ರೆಗೆ ದಾಖಲಾದ ಬಳಿಕ ಅವರು ಕೊಟ್ಟ ಔಷಧಿಗಳ ಕಾರಣವೋ ಗೊತ್ತಿಲ್ಲ. ಆದರೆ ಯಾವುದೇ ರೀತಿಯ ನೆಗಡಿ, ಜ್ವರ, ಕೆಮ್ಮು ಏನೂ ಇರಲಿಲ್ಲ. ಹೀಗಾಗಿ ಏನೂ ಲಕ್ಷಣಗಳಿಲ್ಲದೆ ಎಷ್ಟೋ ಜನ ಮನೆಯಲ್ಲಿ ಎಲ್ಲಾ ಕಡೆ ಓಡಾಡಿಕೊಂಡಿದ್ದು, ಬೇರೆಯವರಿಗೆ ಹಬ್ಬಿಸುತ್ತಿದ್ದೀರಾ ಎಂಬುದನ್ನು ನಾವು ಇಲ್ಲಿ ಗಮನದಲ್ಲಿಟ್ಟುಕೊಳ್ಳಬೇಕು. ಈ ಕಾಯಿಲೆ ಬೇಗ ಹರಡುತ್ತೆ. ಆದರೆ ನಿಮಗೇನೂ ತೊಂದರೆ ಮಾಡಲ್ಲ. ಹೀಗಾಗಿ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

ಆಸ್ಪತ್ರೆಯಲ್ಲಿ 14 ದಿನ ಒಬ್ಬರೇ ಇರುವುದರಿಂದ ಬಹಳಷ್ಟು ಬೇಜಾರಾಗುತ್ತೆ. ಈ ಸಂದರ್ಭದಲ್ಲಿ ನನಗೆ ಬೆನ್ನೆಲುಬಾಗಿ ನಿಂತಿದ್ದು ನನ್ನ ಕುಟುಂಬ. ಪ್ರತಿ ದಿನ ಫೋನ್ ಮಾಡಿ ನನ್ನ ವಿಚಾರಿಸಿಕೊಳ್ಳುತ್ತಿದ್ದರು. ಅಲ್ಲದೆ ಗೆಳೆಯರು ಕೂಡ ಫೋನ್ ಮಾಡಿ ನಗಿಸುತ್ತಿದ್ದರು. ಇಷ್ಟು ಮಾತ್ರವಲ್ಲದೆ ನಾನು ಯೋಗ, ಪ್ರಾಣಯಾಮ ಮಾಡುತ್ತಿದ್ದೆ. ಇದರಿಂದ ಬಹಳಷ್ಟು ಉಪಯೋಗವಾಗುತ್ತೆ. ಹೀಗಾಗಿ ಪ್ರತಿಯೊಬ್ಬರೂ ಮನೆಯಲ್ಲಿ ಪ್ರಾಣಯಾಮ ಮಾಡಿ ಎಂದು ಸಲಹೆಯಿತ್ತಿದ್ದಾರೆ.

ಆಸ್ಪತ್ರೆಯಲ್ಲಿ ಸಮಯ ಕಳೆಯಲು ಪುಸ್ತಕ, ಮ್ಯೂಸಿಕ್ ಕೇಳೋದು ಹಾಗೆಯೇ ಮೊಬೈಲ್ ನಲ್ಲೇ ಸಿನಿಮಾಗಳನ್ನು ನೋಡಿಕೊಂಡು ಸಮಯ ಕಳೆಯಬೇಕಾಗುತ್ತೆ. ಈ 14 ದಿನ ನಮ್ಮ ಸಂಬಂಧಿಕರು ಬಂದು ಭೇಟಿಯಾಗಲು ಸಾಧ್ಯವಿಲ್ಲ. ದೇಶದ ಪ್ರಧಾನ ಮಂತ್ರಿ ಹಾಗೂ ರಾಜ್ಯದ ಮುಖ್ಯಮಂತ್ರಿಯವರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಆಸ್ಪತ್ರೆಯಲ್ಲಿರುವ ರೋಗಗಳಿಗೆ ಕೂಡ ಮಾನಸಿಕ ತೊಂದರೆ ಇದ್ದರೆ ಅಂತವರಿಗೆ ನಿಮ್ಹಾನ್ಸ್ ನಿಂದ ವೈದ್ಯರು ಕಾಲ್ ಮಾಡಿ ಮಾತಾಡ್ತಾರೆ. ಅಲ್ಲದೆ ಕುಟುಂಬದ ಸದಸ್ಯರಿಗೂ ತೊಂದರೆ ಇದ್ದರೆ ಮಾತಾಡಿಸ್ತಾರೆ ಎಂದು ವಿವರಿಸಿದ್ದಾರೆ.

ದೈಹಿಕ ಶಕ್ತಿ ಎಷ್ಟು ಮುಖ್ಯವೋ ಕೊರೊನಾ ವೈರಸ್ ಜೊತೆ ಹೋರಾಡಿ ಗೆಲ್ಲಲು ಮಾನಸಿಕ ಸ್ಥೈರ್ಯ ಕೂಡ ಅಷ್ಟೇ ಮುಖ್ಯವಾಗುತ್ತದೆ. ಹೀಗಾಗಿ ನಾವು ಯಾವತ್ತೂ ಶಾಂತರಾಗಿರಬೇಕು, ಗಾಬರಿಗೊಳಗಾಗಬಾರದು. ಒಟ್ಟಿನಲ್ಲಿ ಇದರಿಂದ ಏನೂ ತೊಂದರೆನೇ ಇಲ್ಲ. 14 ದಿನ ಯಾರನ್ನೂ ಬೇಟಿಯಾಗಲು ಸಾಧ್ಯವಿಲ್ಲ ಅನ್ನೋ ಬೇಜಾರು ಬಿಟ್ಟರೆ ಇನ್ನೇನೂ ಇರಲ್ಲ ಎಂದು ತಿಳಿಸಿದ್ದಾರೆ.

ನಮ್ಮ ಸರ್ಕಾರ ಒಳ್ಳೊಳ್ಳೆಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿರುವುದರಿಂದ ಯಾರೇ ಹೊರದೇಶದಿಂದ ಬಂದವರು ದಯವಿಟ್ಟು ಟೆಸ್ಟ್ ಮಾಡಿಸಿಕೊಳ್ಳಿ. ಕೊರೊನಾ ಲಕ್ಷಣಗಳು ಇರಲೇಬೇಕು ಅಂತ ಏನಿಲ್ಲ. ಇಲ್ಲದಿದ್ದರೂ ಪಾಸಿಟಿವ್ ಬರುತ್ತೆ. ಮನೆಯಲ್ಲಿ ವಯಸ್ಸಾದವರಿದ್ದರೆ ದಯವಿಟ್ಟು ಅವರಿಂದ ದೂರ ಇರಿ. ನಿಮಗೆ ಏನು ಲಕ್ಷಣಗಳಿಲ್ಲದಿದ್ದರೂ ಇದರಿಂದ ಅವರಿಗೆ ಅಪಾಯವಿರುತ್ತೆ. ದಯವಿಟ್ಟು ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಒಂದು ವೇಳೆ ಕೊರೊನಾ ಪಾಸಿಟಿವ್ ಬಂದರೂ ಹೆದರುವ ಅವಶ್ಯಕತೆ ಇಲ್ಲ ಎಂದು ಹೇಳುತ್ತಾ ದಾವಣಗೆರೆ ಡಿಸಿ, ಪೊಲೀಸ್ ಸಿಬ್ಬಂದಿ, ವೈದ್ಯರು, ನರ್ಸ್ ಎಲ್ಲರಿಗೂ ಧನ್ಯವಾದ ಹಾಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *