1 ಲಕ್ಷ ದಾಟಿದ ಕೊರೊನಾ ಪ್ರಕರಣ – ಇದುವರೆಗೆ 3,412 ಸಾವು!

Public TV
2 Min Read

– ಭಾರತ ಸೇರಿ 7 ರಾಷ್ಟ್ರಗಳಿಗೆ ಕುವೈತ್ ನಿರ್ಬಂಧ
– ಭಾರತ ಪ್ರವಾಸ ಬಂದಿದ್ದ ಯುಎಸ್ ಪ್ರಜೆಗೂ ಕೊರೊನಾ
– ಭೂತಾನ್‍ನಲ್ಲಿ ವೈದ್ಯಕೀಯ ತಪಾಸಣೆ ವೇಳೆ ಪತ್ತೆ

ಬೆಂಗಳೂರು: ವಿಶ್ವಾದ್ಯಂತ ಕೊರೊನಾ ವೈರಸ್ ಸೋಂಕು ತಗುಲಿದವರ ಸಂಖ್ಯೆ 1 ಲಕ್ಷದ ಗಡಿ ದಾಟಿದೆ. ನಿನ್ನೆಯವರೆಗಿನ ಲೆಕ್ಕಾಚಾರದಲ್ಲಿ ಇಡೀ ವಿಶ್ವಾದ್ಯಂತ ಒಟ್ಟು 1,00,774 ಮಂದಿಗೆ ಸೋಂಕು ತಗುಲಿದೆ. ಸೋಂಕಿನಿಂದಾಗಿ ಇದುವರೆಗೆ 3412 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 55,997 ಮಂದಿ ರೋಗ ಮುಕ್ತರಾಗಿದ್ದು, 41,365 ಮಂದಿಗೆ ಈಗಲೂ ಚಿಕಿತ್ಸೆ ಮುಂದುವರಿದಿದೆ.

ಭಾರತದಲ್ಲಿ ಕೊರೊನಾ ಬಾಧಿತರ ಸಂಖ್ಯೆ 31ಕ್ಕೇರಿದೆ. ಥಾಯ್ಲೆಂಡ್, ಮಲೇಷ್ಯಾ ಪ್ರವಾಸ ಮುಗಿಸಿಕೊಂಡು ವಾಪಸ್ ಬಂದ 25 ವರ್ಷದ ಯುವಕನಿಗೆ ಕೊರೊನಾ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.

ಇದೇ ವೇಳೆ ಕುವೈತ್ ಭಾರತದಿಂದ ಬರುವ ವಿಮಾನಗಳಿಗೆ ನಿರ್ಬಂಧ ವಿಧಿಸಿದೆ. ಭಾರತ ಸೇರಿ ಒಟ್ಟು 7 ರಾಷ್ಟ್ರಗಳಿಗೆ ಇಂದಿನಿಂದ 1 ವಾರಗಳ ಕಾಲ ಈ ನಿರ್ಬಂಧ ಅನ್ವಯವಾಗಲಿದೆ. ಕೇರಳದ ಕರಿಪುರ್ ವಿಮಾನ ನಿಲ್ದಾಣದಿಂದ ಇಂದು ಬೆಳಗ್ಗೆ ಹೊರಡಬೇಕಿದ್ದ ವಿಮಾನವನ್ನು ರದ್ದುಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕುವೈತ್‍ಗೆ ಹೋಗಲು ಬಂದ ಪ್ರಯಾಣಿಕರನ್ನು ವಾಪಸ್ ಕಳಿಸಲಾಯಿತು.

ಹೋಟೆಲಲ್ಲೇ ಕಣ್ಗಾವಲು!: ಇಟಲಿಯಿಂದ ಅಮೃತಸರಕ್ಕೆ ಬಂದ 13 ಪ್ರವಾಸಿಗಳು ಈಗಲೂ ಹೋಟೆಲ್ ರೂಮ್‍ಗಳಲ್ಲಿ ತಂಗಿದ್ದಾರೆ. ಅವರನ್ನು ಹೋಟೆಲ್‍ನಿಂದ ಹೊರಗೆ ಬರಲು ಅವಕಾಶ ನೀಡುತ್ತಿಲ್ಲ. ಇವರ ಸ್ಯಾಂಪಲ್‍ಗಳನ್ನು ಪರೀಕ್ಷೆಗೆಂದು ಕಳಿಸಲಾಗಿದ್ದು, ಲ್ಯಾಬ್ ವರದಿ ಬಂದ ಬಳಿಕ ಮುಂದೇನು ಎಂಬ ನಿರ್ಧಾರವನ್ನು ಕೈಗೊಳ್ಳಲಾಗುವುದು. ಭಾರತದ ನೆರೆಯ ರಾಷ್ಟ್ರ ಭೂತಾನ್‍ನಲ್ಲಿ ನಿನ್ನೆ ಪ್ರವಾಸ ಬಂದಿದ್ದ ಅಮೆರಿಕ ಪ್ರಜೆಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ. ಈ ವ್ಯಕ್ತಿ 10 ದಿನಗಳಲ್ಲಿ ಭಾರತದ ಹಲವೆಡೆ ಸಂಚಾರ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಯುಎಇಯಲ್ಲಿ ಭಾರತೀಯ ಪ್ರಜೆ ಸೇರಿ 19 ಜನರಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ಯುಎಇಯಲ್ಲಿ ಒಟ್ಟು 45 ಜನಕ್ಕೆ ಸೋಂಕು ತಗುಲಿದೆ. ಇವರಿಗೆ ಚಿಕಿತ್ಸೆ ಮುಂದುವರಿದಿದೆ. ಭಾರತ, ಸೌದಿ ಅರೇಬಿಯಾ, ಇರಾನ್, ಮೊರಕ್ಕೋ, ಚೀನಾ, ಥಾಯ್ಲೆಂಡ್ ಮುಂತಾದ ಕಡೆಗಳಿಂದ ಬಂದವರಲ್ಲಿ ವೈರಸ್ ದೃಢಪಟ್ಟಿದೆ. ಇವರೆಲ್ಲರಿಗೂ ಪ್ರತ್ಯೇಕ ಚಿಕಿತ್ಸೆ ಮುಂದುವರಿದಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *