ಸ್ಕೇಟಿಂಗ್‌ ಮಾಡುತ್ತಿದ್ದಾಗ ವಾಹನ ಡಿಕ್ಕಿ – ಹಿರಿಯ ಪೊಲೀಸ್‌ ಅಧಿಕಾರಿಯ 10 ವರ್ಷದ ಪುತ್ರ ಸಾವು

Public TV
1 Min Read

ಲಕ್ನೋ: ಇಲ್ಲಿನ ರಸ್ತೆಯೊಂದರಲ್ಲಿ ಸ್ಕೇಟಿಂಗ್‌ ಅಭ್ಯಾಸ ಮಾಡುತ್ತಿದ್ದಾಗ ವೇಗವಾಗಿ ಬಂದ ಎಸ್‌ಯುವಿ ಡಿಕ್ಕಿ ಹೊಡೆದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರ 10 ವರ್ಷದ ಮಗ ಸಾವಿಗೀಡಾಗಿರುವ ಘಟನೆ ನಡೆದಿದೆ.

ಮಗುವಿಗೆ ಡಿಕ್ಕಿ ಹೊಡೆದ ನಂತರ ವಾಹನ ವೇಗವಾಗಿ ಹೋಗಿದ್ದು, ಪ್ರಕರಣವನ್ನು ಭೇದಿಸಲು ಐದು ತಂಡಗಳನ್ನು ರಚಿಸಲಾಗಿದೆ. ಪ್ರಕರಣದಲ್ಲಿ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ. ಇದನ್ನೂ ಓದಿ: 2 ತಿಂಗಳ ಬಳಿಕ ಕೆನಡಿಯನ್ನರಿಗೆ ಇ-ವೀಸಾ ಸೇವೆಗಳ ಪುನರಾರಂಭಕ್ಕೆ ಭಾರತದ ನಿರ್ಧಾರ

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ವೇತಾ ಶ್ರೀವಾಸ್ತವ್ ಅವರ ಪುತ್ರ ನಮಿಶ್ ಮಂಗಳವಾರ ಮುಂಜಾನೆ 5:30 ರ ಸುಮಾರಿಗೆ ನಗರದ ಉನ್ನತ ಮಟ್ಟದ ಗೋಮತಿ ನಗರ ವಿಸ್ತರಣೆ ಪ್ರದೇಶದ ಉದ್ಯಾನದ ಬಳಿ ಸ್ಕೇಟಿಂಗ್ ಮಾಡುತ್ತಿದ್ದಾಗ ವೇಗವಾಗಿ ಬಂದ ಬಿಳಿ ಬಣ್ಣದ ಎಸ್‌ಯುವಿ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಾಲಕನ ವೇಗವಾಗಿ ವಾಹನ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನಮಿಶ್‌ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿ; ನಾಲ್ವರು ಸರ್ಕಾರಿ ಅಧಿಕಾರಿಗಳು ಸೇವೆಯಿಂದ ವಜಾ

ಎಸ್‌ಯುವಿಯನ್ನು ಪತ್ತೆಹಚ್ಚಲು ಮತ್ತು ಚಾಲಕನನ್ನು ಗುರುತಿಸಲು ಐದು ತಂಡಗಳನ್ನು ರಚಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಆಶಿಶ್ ಶ್ರೀವಾಸ್ತವ್‌ ಹೇಳಿದ್ದಾರೆ. ಘಟನೆ ನಡೆದ ಜನೇಶ್ವರ ಮಿಶ್ರಾ ಪಾರ್ಕ್ ಬಳಿಯ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಎಸ್‌ಯುವಿಯನ್ನು ಪತ್ತೆಹಚ್ಚಲಾಗಿದ್ದು, ಸಾರ್ಥಕ್ ಸಿಂಗ್ ಮತ್ತು ದೇವಶ್ರೀ ವರ್ಮಾ ಹೆಸರಿನ ಇಬ್ಬರನ್ನು ಬಂಧಿಸಲಾಗಿದೆ. ಮೃತ ಬಾಲಕನ ಪೋಷಕರಾದ ಶ್ವೇತಾ ಶ್ರೀವಾಸ್ತವ್ ಅವರನ್ನು ಈ ಹಿಂದೆ ಗೋಮತಿ ನಗರ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾಗಿತ್ತು. ನಂತರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ವಿಶೇಷ ತನಿಖಾ ತಂಡಕ್ಕೆ ವರ್ಗಾಯಿಸಲಾಗಿತ್ತು.

Share This Article