ಚಂಡೀಗಢ: ಪೋಷಕರ ಕಣ್ಮುಂದೆಯೇ ಮಗಳನ್ನು ದಾರುಣವಾಗಿ ಮರ್ಯಾದಾ ಹತ್ಯೆ ಮಾಡಿರುವ ಘಟನೆ ಜಜ್ಜರ್ ಸುರ್ಹೆತಿ ಗ್ರಾಮದಲ್ಲಿ ನಡೆದಿದೆ.
ವಂದನಾ (21) ಪೋಷಕರ ಮುಂದೆಯೇ ಹತ್ಯೆಯಾದ ದುರ್ದೈವಿ ಮಗಳು. ಈಕೆಯ ಚಿಕ್ಕಪ್ಪನಾದ ಜಸ್ವಂತ್ (40) ವಂದನಾ ತಂದೆ ವೇದ್‍ಪಾಲ್ (48) ಮತ್ತು ತಾಯಿ ಮೋನಿ ದೇವಿಯ ಮುಂದೆಯೇ ದಾರುಣವಾಗಿ ಕೊಲೆ ಮಾಡಿದ್ದಾನೆ. ಈ ಕೊಲೆಗೆ ಪೋಷಕರೇ ಪ್ರತ್ಯಕ್ಷ ಸಾಕ್ಷಿಗಳಾಗಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ವೇದ್‍ಪಾಲ್ ಸೇನೆಯಲ್ಲಿ ನಿವೃತ್ತಿಯಾದ ಬಳಿಕ ದೆಹಲಿಯಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಆಗಿ ಕೆಲಸ ಮಾಡುತ್ತಿದ್ದನು. ಈಕೆಯ ಮಗಳೇ ವಂದನಾ. ಈಕೆ ಒಬ್ಬ ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದು, ಧಾಕ್ಲಾ ಗ್ರಾಮದ ನಿವಾಸಿ ರಾಹುಲ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇಬ್ಬರು ಜಾಟ್ ಸಮುದಾಯಕ್ಕೆ ಸೇರಿದವರಾಗಿದ್ದು ಇವರ ಪ್ರೀತಿಯ ವಿಚಾರ ವಂದನಾ ಕುಟುಂಬದವರಿಗೆ ತಿಳಿದಿತ್ತು. ನಂತರ ವಂದನಾಗೆ ಅವನನ್ನು ಭೇಟಿಯಾಗಬಾರದು ಎಂದು ಎಚ್ಚರಿಸಿದ್ದಾರೆ. ಆದರೆ ಪೋಷಕರ ಮಾತನ್ನು ಲೆಕ್ಕಿಸದೇ ಮತ್ತೆ ಹುಡುಗನನ್ನು ಭೇಟಿ ಮಾಡಿದ್ದಾಳೆ.
ಅ.25 ರಾತ್ರಿ ವಂದನಾ ಚಿಕ್ಕಪ್ಪ, ಅಪ್ಪ ಅಮ್ಮ ಎಲ್ಲರೂ ಮತ್ತೆ ಅವನನ್ನು ಭೇಟಿಯಾಗಬೇಡ ಎಂದು ಹೇಳಿದ್ದಾರೆ. ಆದರೆ ವಂದನಾ ಇದಕ್ಕೆ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಚಿಕ್ಕಪ್ಪ ಸುಮಾರು ರಾತ್ರಿ 1.30 ಕ್ಕೆ ಕೊಲೆ ಮಾಡಿದ್ದಾನೆ. ಆರಂಭದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳುತ್ತಿದ್ದರು. ಆದರೆ ಗ್ರಾಮಸ್ಥರು ಇದೊಂದು ಮರ್ಯಾದಾ ಕೊಲೆ ಪ್ರಕರಣ ಎಂಬ ಶಂಕೆಯನ್ನು ವ್ಯಕ್ತಪಡಿಸಿದ್ದರು ಎಂದು ಜಜ್ಜರ್ ಪೊಲೀಸರು ತಿಳಿಸಿದರು.
ಸಬ್ ಇನ್ಸ್ ಪೆಕ್ಟರ್ ಸತ್‍ಬೀರ್ ಸಿಂಗ್ ಅವರು, ಮಗಳನ್ನು ಕೊಲೆ ಮಾಡಲು ಪೋಷಕರೇ ಒಪ್ಪಿಗೆ ನೀಡಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಮಗಳನ್ನು ಕಳೆದುಕೊಂಡ ದುಃಖ ವ್ಯಕ್ತ ಪಡಿಸುತ್ತಿದ್ದರು ಎಂದು ಹೇಳಿದ್ದಾರೆ.
ಈ ಪ್ರಕರಣವನ್ನು ಕೊಲೆ ಆರೋಪಡಿ ಮೂವರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ಪೋಷಕರನ್ನು ಬಂಧಿಸಿ ಗುರುವಾರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದೇವು. ಆದರೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದ್ದು, ಆದೇಶ ನೀಡಿದೆ. ಪರಾರಿಯಾಗಿರುವ ಆರೋಪಿ ಚಿಕ್ಕಪ್ಪನಿಗೆ ಬಲೆ ಬೀಸಿದ್ದೇವೆ ಎಂದು ಸಿಂಗ್ ಹೇಳಿದ್ದಾರೆ.