ಚಾಲಕನನ್ನ ಉಳಿಸಲು ಬ್ರಿಡ್ಜ್ ನಿಂದ ನೇತಾಡ್ತಿದ್ದ ವಾಹನವನ್ನ ಬರಿಗೈಯಲ್ಲೇ ಹಿಡಿದು ನಿಂತ ಪೊಲೀಸ್ ಅಧಿಕಾರಿ

Public TV
1 Min Read

ಲಂಡನ್: ಇಂಗ್ಲೆಂಡಿನ ಪೊಲೀಸ್ ಅಧಿಕಾರಿಯೊಬ್ಬರು ಚಾಲಕನ ಪ್ರಾಣ ಉಳಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ಗಳಿಸಿದ್ದಾರೆ.

ಶುಕ್ರವಾರದಂದು ಬೆಳಗ್ಗಿನ ಜಾವ ಅಧಿಕಾರಿ ಮಾರ್ಟಿನ್ ಗಸ್ತು ತಿರುಗುತ್ತಿದ್ದ ವೇಳೆ ವೆಸ್ಟ್ ಯಾರ್ಕ್ ಶೈರ್ ನ ಎ1 ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತವಾಗಿರೋ ಬಗ್ಗೆ ಕರೆ ಬಂದಿತ್ತು. ಕೂಡಲೇ ಮಾರ್ಟಿನ್ ಘಟನಾ ಸ್ಥಳ ತಲುಪಿದ್ದು, ಅಪಘಾತದಿಂದಾಗಿ ವಾಹನವೊಂದು ತಲೆಕೆಳಗಾಗಿ ಬ್ರಿಡ್ಜ್ ನಿಂದ ನೇತಾಡುತ್ತಿದ್ದುದನ್ನು ನೋಡಿದ್ದರು. ಚಾಲಕ ಒಳಗಡೆಯೇ ಸಿಲುಕಿದ್ದು, ಗಾಳಿಗೆ ವಾಹನ ಕೂಡ ಅಲುಗಾಡುತ್ತಿತ್ತು.

ನಂತರ ಮಾರ್ಟಿನ್ ತಡ ಮಾಡದೇ ತನ್ನ ಸಹೋದ್ಯೋಗಿಗಳಿಗೆ ರಸ್ತೆ ಬಂದ್ ಮಾಡಲು ಹೇಳಿ ವಾಹನದ ಹಿಂದಿನ ಟೈರ್ ಹಿಡಿದು ನಿಂತರು. ವಾಹನದ ಸಮೇತ ತಾವೂ ಬ್ರಿಡ್ಜ್‍ನಿಂದ ಕೆಳಗೆ ಬೀಳಬಹುದಾದ ಭಯವಿದ್ದರೂ ಪೊಲೀಸ್ ಅಧಿಕಾರಿ ಸಮಾಧಾನದಿಂದಲೇ ಒಳಗಿದ್ದ ವ್ಯಕ್ತಿಗೆ ಧೈರ್ಯ ತುಂಬಿದ್ದರು.

ಬಳಿಕ ಅಗ್ನಿಶಾಮಕ ಸಿಬ್ಬಂದಿ ಹಾಗೂ ರಕ್ಷಣಾಪಡೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಚಾಲಕನನ್ನು ರಕ್ಷಿಸಿದ್ದಾರೆ. 2 ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಚಾಲಕನ ಕಾಲಿಗೆ ಗಾಯಗಳಾಗಿವೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಾನು ಘಟನಾ ಸ್ಥಳಕ್ಕೆ ಹೋದಾಗ ಲಾರಿ ಚಾಲಕರೊಬ್ಬರು ವಾಹನದೊಳಗೆ ವ್ಯಕ್ತಿಯೊಬ್ಬರು ಸಿಲುಕಿದ್ದಾರೆ ಎಂದು ಹೇಳಿದ್ರು. ನಾನು ಅವರಿಗೆ ಗಾಬರಿಯಾಗಬೇಡಿ, ನಿಮ್ಮನ್ನು ಹೊರಗೆ ತರುತ್ತೇವೆಂದು ಹೇಳಿದೆ. ಏನೇ ಆದ್ರೂ ಅಲ್ಲಿಂದ ಕದಲಬೇಡಿ ಎಂದು ಹೇಳಿದ್ದೆ. ನಂತರ ವಾಹನದ ಹಿಂದಿನ ಚಕ್ರ ಹಿಡಿದುಕೊಂಡು ಹಿಂದಕ್ಕೆ ಎಳೆದೆ. ಇದರಿಂದ ವಾಹನ ಸಮತೋಲನದಲ್ಲಿರಲು ಸಹಾಯವಾಯ್ತು. ಸುಮಾರು 15 ನಿಮಿಷಗಳ ಕಾಲ ನಾನು ಹಾಗೇ ಹಿಡಿದುಕೊಂಡಿದ್ದೆ ಎಂದು ಮಾರ್ಟಿನ್ ಹೇಳಿದ್ದಾರೆ.

ಮಾರ್ಟಿನ್ ಈ ಘಟನೆಯ ಫೋಟೋವನ್ನು ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದು, ಜನ ಇವರ ಧೈರ್ಯ ನೋಡಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *