ವೈದ್ಯೆ ಆತ್ಮಹತ್ಯೆ ಕೇಸ್‌ – ರೇಪ್‌ ಆರೋಪಿ ಇನ್ಸ್‌ಪೆಕ್ಟರ್‌ ಪೊಲೀಸರಿಗೆ ಶರಣು

Public TV
2 Min Read

ಮುಂಬೈ: ಮಹಾರಾಷ್ಟ್ರದ ಸತಾರದಲ್ಲಿ ನಡೆದಿದ್ದ ವೈದ್ಯೆಯ ಆತ್ಮಹತ್ಯೆ ಪ್ರಕರಣದ ಆರೋಪಿ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಗೋಪಾಲ್ ಬದ್ನೆ ಶನಿವಾರ ಸಂಜೆ (ಅ.26) ಫಾಲ್ಟನ್ ಗ್ರಾಮೀಣ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.

ಪ್ರಕರಣದ ಮತ್ತೊಬ್ಬ ಆರೋಪಿಯಾದ ಸಾಫ್ಟ್‌ವೇರ್ ಎಂಜಿನಿಯರ್ ಪ್ರಶಾಂತ್ ಬಂಕರ್‌ನನ್ನು ಪುಣೆಯಲ್ಲಿ ಬಂಧಿಸಲಾಗಿತ್ತು. ಸಂತ್ರಸ್ತೆಗೆ ಮಾನಸಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಈತನನ್ನು ಸತಾರ ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಇದನ್ನೂ ಓದಿ: ಪೊಲೀಸ್‌ ಅಧಿಕಾರಿಯಿಂದ 5 ತಿಂಗಳಲ್ಲಿ 4 ಬಾರಿ ರೇಪ್‌ – ಅಂಗೈನಲ್ಲಿ ಡೆತ್‌ ನೋಟ್‌ ಬರೆದು ಮಹಾರಾಷ್ಟ್ರ ವೈದ್ಯೆ ಆತ್ಮಹತ್ಯೆ

ಸತಾರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯೆಯ ಮೃತದೇಹ ಫಾಲ್ಟನ್ ಪಟ್ಟಣದ ಹೋಟೆಲ್ ಒಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅವರ ಅಂಗೈಯಲ್ಲಿ ಡೆತ್‌ನೋಟ್‌ ಬರೆದು, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಬದ್ನೆ ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಸಾಫ್ಟ್‌ವೇರ್ ಎಂಜಿನಿಯರ್ ಬಂಕರ್ ಮಾನಸಿಕವಾಗಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದರು.

ಡೆತ್‌ನೋಟ್‌ ಆಧರಿಸಿ ಫಾಲ್ಟನ್‌ ಪೊಲೀಸ್‌ ಠಾಣೆಯಲ್ಲಿ ಇಬ್ಬರ ವಿರುದ್ಧ ಅತ್ಯಾಚಾರ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ಓರ್ವ ಆರೋಪಿ ಬಂಕರ್ ವೈದ್ಯೆ ವಾಸಿಸುತ್ತಿದ್ದ ಮನೆಯ ಮಾಲೀಕನ ಮಗನಾಗಿದ್ದಾನೆ. ಇನ್ನೂ, ತನಿಖೆಯ ಸಮಯದಲ್ಲಿ ಸಬ್ ಇನ್ಸ್‌ಪೆಕ್ಟರ್ ಬದ್ನೆ ವಿರುದ್ಧ ಆರೋಪ ಕೇಳಿಬರುತ್ತಿದ್ದಂತೆ ಆತನನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ವೈದ್ಯೆಗೆ ಮರಣೋತ್ತರ ಪರೀಕ್ಷೆಯ ವರದಿಗಳನ್ನು ಬದಲಾಯಿಸುವಂತೆ ರಾಜಕಾರಣಿಗಳು ಒತ್ತಡ ಹೇರುತ್ತಿದ್ದರು. ಪಿಎಸ್‌ಐ ವಿರುದ್ಧ ಹಲವು ಬಾರಿ ದೂರು ನೀಡಿದ್ದಳು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಪ್ರಕರಣದ ಆರೋಪಿಗಳಿಗೆ ಮರಣದಂಡನೆ ವಿಧಿಸಬೇಕು ಎಂದು ಮೃತ ವೈದ್ಯೆಯ ಸಂಬಂಧಿಕರು ಒತ್ತಾಯಿಸಿದ್ದಾರೆ. ವೈದ್ಯೆಯ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದವರನ್ನು ಪ್ರಕರಣದಲ್ಲಿ ಆರೋಪಿಯನ್ನಾಗಿ ಪರಿಗಣಿಸಬೇಕು ಎಂದು ಬಿಜೆಪಿ ಶಾಸಕ ಸುರೇಶ್ ದಾಸ್ ಒತ್ತಾಯಿಸಿದ್ದಾರೆ.

ವೈದ್ಯೆ ಎಂಡಿ (ಡಾಕ್ಟರ್ ಆಫ್ ಮೆಡಿಸಿನ್) ಕೋರ್ಸ್ ಮಾಡಲು ಬಯಸಿದ್ದಳು. ಅದಕ್ಕಾಗಿ ತಯಾರಿ ನಡೆಸುತ್ತಿದ್ದಳು. ಎಂಬಿಬಿಎಸ್ ಕೋರ್ಸ್‌ಗಾಗಿ ತೆಗೆದುಕೊಂಡಿದ್ದ 3 ಲಕ್ಷ ರೂ. ಸಾಲವನ್ನು ಇನ್ನೂ ಮರುಪಾವತಿಸಿರಲಿಲ್ಲ ಎಂದು ಕುಟುಂಬಸ್ಥರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ವೈದ್ಯೆ ಆತ್ಮಹತ್ಯೆ ಕೇಸ್ – 5 ತಿಂಗಳಿಂದ ಮಾನಸಿಕವಾಗಿ ಕಿರುಕುಳ ನೀಡಿದ್ದ ಟೆಕ್ಕಿ ಅರೆಸ್ಟ್

Share This Article