ಬೆಂಗಳೂರಲ್ಲಿ ಪ್ರೇಯಸಿ, ಆಕೆಯ ಮಗನನ್ನ ಹತ್ಯೆ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ

By
1 Min Read

– ತಾಯಿ ಕೊಲೆ ನೋಡಿದ್ದ ಮಗನನ್ನು ಉಸಿರುಗಟ್ಟಿಸಿ ಕೊಂದಿದ್ದ ಆರೋಪಿ

ಬೆಂಗಳೂರು: ಪ್ರೇಯಸಿ ಮತ್ತು ಆಕೆಯ ಮಗನನ್ನು ಹತ್ಯೆ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಕೋರ್ಟ್‌ ಆದೇಶ ಹೊರಡಿಸಿದೆ.

ಜೋಡಿ ಕೊಲೆ ಆರೋಪಿ ಶೇಖಪ್ಪ ಎಂಬಾತನಿಗೆ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸಿ ಸಿಸಿಹೆಚ್ – 51 ರ ನ್ಯಾಯಧೀಶರಾದ ಸಂತೋಷ್ ಆದೇಶ ಹೊರಡಿಸಿದ್ದಾರೆ.

2023 ರ ಸೆಪ್ಟೆಂಬರ್‌ ತಿಂಗಳು ಬಾಗಲಗುಂಟೆ ಠಾಣಾ ವ್ಯಾಪ್ತಿಯ ಟಿ.ದಾರಸರಹಳ್ಳಿ ಬಳಿ ಜೋಡಿ ಕೊಲೆಯಾಗಿತ್ತು. ನವನೀತ ಹಾಗೂ ಆಕೆಯ ಹನ್ನೊಂದು ವರ್ಷದ ಮಗ ಸಾಯಿ ಸೃಜನ್ ಎಂಬಾತನನ್ನ ಆರೋಪಿ ಶೇಖಪ್ಪ ಕೊಲೆ ಮಾಡಿದ್ದ.

ಗಂಡನಿಂದ ಬೇರ್ಪಟ್ಟು ಇಬ್ಬರ ಮಕ್ಕಳ ಜೊತೆ ಮಹಿಳೆ ನವನೀತ ವಾಸವಾಗಿದ್ದರು. ಇದೇ ವೇಳೆ, ಎಲೆಕ್ಟ್ರಿಕ್ ಕೆಲಸ ಮಾಡ್ತಿದ್ದ ಶೇಖಪ್ಪನ ಪರಿಚಯವಾಗಿ ಆತ್ಮೀಯತೆ, ಸಲುಗೆ ಬೆಳೆಯಿತು. ಈ ನಡುವೆ ಮತ್ತೊಬ್ಬ ವ್ಯಕ್ತಿ ಜೊತೆ ಮಹಿಳೆ ನವನೀತ ಓಡಾಡುತ್ತಿದ್ದರು. ಇದಕ್ಕೆ ಕೋಪಗೊಂಡು ಗಲಾಟೆ ತೆಗೆದು ಮನೆಯಲ್ಲೇ ಚಾಕುವಿನಿಂದ ಚುಚ್ಚಿ ಆರೋಪಿ ಕೊಲೆ ಮಾಡಿದ್ದಾನೆ.

ಈ ನಡುವೆ ಕೊಲೆಯನ್ನ ನೋಡಿದ್ದ ಆಕೆಯ ಮಗನನ್ನ ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನ ಬಂಧಿಸಲಾಗಿತ್ತು. ಚಾರ್ಜ್‌ಶೀಟ್ ಸಲ್ಲಿಸಿದ್ದು, ನ್ಯಾಯಾಲಯದಲ್ಲಿ ಟ್ರಯಲ್ ನಡೆಸಲಾಗಿತ್ತು.

Share This Article