ಮೈಸೂರಿನಲ್ಲಿ ಬಿಜೆಪಿ ಕಾರ್ಯಕಾರಿಣಿ: ಬಿಎಸ್‍ವೈ, ಈಶ್ವರಪ್ಪ ಪ್ಲಾನ್ ಏನು? ಇನ್‍ಸೈಡ್ ಸ್ಟೋರಿ

Public TV
2 Min Read

ಬೆಂಗಳೂರು: ಶನಿವಾರ ಮೈಸೂರಿನಲ್ಲಿ ನಡೆಯಲಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಕುತೂಹಲ ಹುಟ್ಟುಹಾಕಿದೆ. ಮೈಸೂರಿನ ರಾಜೇಂದ್ರ ಕಲಾಮಂದಿರದಲ್ಲಿ ಎರಡು ದಿನಗಳ ಕಾಲ ರಾಜ್ಯ ಬಿಜೆಪಿ ಕಾರ್ಯಕಾರಿಣಿ ನಡೆಯಲಿದ್ದು, ಅಸಮಾಧಾನ ಸ್ಫೋಟಗೊಳ್ಳುವ ಸಾಧ್ಯತೆಯೂ ಹೆಚ್ಚಿದೆ.

ಈ ನಡುವೆ ಅತೃಪ್ತ ನಾಯಕರಿಗೆ ಅಧ್ಯಕ್ಷೀಯ ಭಾಷಣದಲ್ಲಿ ತಿರುಗೇಟು ನೀಡಲು ಯಡಿಯೂರಪ್ಪ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ಪಕ್ಷದ ವೇದಿಕೆಯಲ್ಲಿ ಅತೃಪ್ತರ ಕಾಮೆಂಟ್ಸ್ ಗೆ ತಿರುಗೇಟು ನೀಡಲಿರುವ ಯಡಿಯೂರಪ್ಪ, ಹಿರಿಯ ನಾಯಕರ ಸಮ್ಮುಖದಲ್ಲಿ ಪ್ರತಿಕ್ರಿಯೆ ನೀಡಲು ಬಯಸಿದ್ದಾರೆ ಅಂತಾ ಮೂಲಗಳು ತಿಳಿಸಿವೆ. ಅಲ್ಲದೆ ಪಕ್ಷದ ಯಾವುದೇ ನಾಯಕರು ಪ್ರಸ್ತಾಪಿಸುವ ವಿಚಾರಗಳಿಗೆ ಉತ್ತರ ನೀಡಲು ಸಮಯವಕಾಶ ಮೀಸಲಿಡಲು ಬಿಎಸ್‍ವೈ ತೀರ್ಮಾನಿಸಿದ್ದು, ಅಮಿತ್ ಷಾ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯ ಸಂಪೂರ್ಣ ವಿವರಗಳನ್ನು ಅಧ್ಯಕ್ಷೀಯ ಭಾಷಣದಲ್ಲಿ ಪ್ರಸ್ತಾಪ ಮಾಡಿ ಕಾರ್ಯಕರ್ತರಲ್ಲಿ ಇರುವ ಗೊಂದಲಗಳಿಗೆ ಉತ್ತರ ನೀಡಲು ಯಡಿಯೂರಪ್ಪ ಸಿದ್ಧವಾಗಿದ್ದಾರೆ ಎನ್ನಲಾಗಿದೆ.

ಈಶ್ವರಪ್ಪ ಸೈಡ್‍ಲೈನ್: ಬಿಜೆಪಿಯಲ್ಲಿ ಬಂಡೆದ್ದ ಭಿನ್ನಮತ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಈಶ್ವರಪ್ಪರನ್ನ ಫುಲ್ ಸೈಡ್ ಲೈನ್ ಮಾಡುವ ಪ್ಲಾನ್ ನಡೆದಿದ್ಯಾ ಅನ್ನೋ ಪ್ರಶ್ನೆಗಳು ಎದ್ದಿವೆ. ಮೈಸೂರಿನಲ್ಲಿ ನಡೆಯಲಿರುವ ಕಾರ್ಯಕಾರಿಣಿ ಸಭೆಯಲ್ಲಿ ವಿವಿಧ ಗೋಷ್ಠಿ ನಡೆಯಲಿವೆ. ಆದ್ರೆ ಗೋಷ್ಠಿಯಲ್ಲಿ ಕೆಎಸ್ ಈಶ್ವರಪ್ಪ ಹೆಸರೇ ಇಲ್ಲವಾಗಿದೆ.

ವಿಧಾನ ಸಭೆ ಪ್ರತಿಪಕ್ಷ ನಾಯಕ ಶೆಟ್ಟರ್ ಗೆ ಅವಕಾಶ ನೀಡಿದ್ರೆ, ಪರಿಷತ್ ಪ್ರತಿಪಕ್ಷ ನಾಯಕ ಈಶ್ವರಪ್ಪಗೆ ಅವಕಾಶ ಇಲ್ಲ. ಹಾಗಾಗಿ ಇದು ತಿರುಗಿಬಿದ್ದಿರುವ ಈಶ್ವರಪ್ಪಗೆ ಬಿಎಸ್‍ವೈ ಟಾಂಗ್ ನೀತಿದ್ದಾರೆ ಎನ್ನಲಾಗ್ತಿದೆ. ಅಲ್ಲದೆ ಈಶ್ವರಪ್ಪಗೆ ಮುಖಭಂಗ ಮಾಡಲು ಪ್ಲಾನ್ ನಡೆದಿದೆ ಎನ್ನಲಾಗಿದೆ.

ಆದರೆ ಬಿಎಸ್‍ವೈಗೆ ಟಾಂಗ್ ಕೊಡಲು ಈಶ್ವರಪ್ಪ ಆಂಡ್ ಬಿ.ಎಲ್.ಸಂತೋಷ್ ಬಣ ನಿರ್ಧರಿಸಿದೆ. ಸಂತೋಷ್ ವಿರುದ್ಧ ಬಿಎಸ್ ವೈ ಮಾತನಾಡಿರುವ ವಿಚಾರವನ್ನ ಕಾರ್ಯಕಾರಿಣಿಯಲ್ಲಿ ಪ್ರಸ್ತಾಪಿಸಲು ಈಶ್ವರಪ್ಪ ಬಣದ ಮುಖಂಡರು ನಿರ್ಧಾರ ಮಾಡಿದ್ದಾರೆ. ಈ ಮೂಲಕ ಬಿಎಸ್‍ವೈ ರನ್ನ ಇಕ್ಕಟ್ಟಿಗೆ ಸಿಲುಕಿಸಲು ಮಾಸ್ಟರ್ ಪ್ಲ್ಯಾನ್ ನಡೆದಿದೆ. ಅಲ್ಲದೆ ಈಶ್ವರಪ್ಪ ಕೂಡ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದ್ದು, ಭಾಗವಹಿಸ್ತಾರಾ ಅನ್ನೋದ್ರ ಬಗ್ಗೆ ಕುತೂಹಲ ಹೆಚ್ಚಿದೆ.

ಪ್ರತಿಕ್ರಿಯೆಗೆ ನಕಾರ: ಈ ನಡುವೆ ರಾಜ್ಯ ಬಿಜೆಪಿ ಭಿನ್ನಮತ ವಿಚಾರ, ಮೈಸೂರಿನ ಕಾರ್ಯಕಾರಿಣಿ ಗೊಂದಲ ವಿಚಾರವಾಗಿ ಪ್ರತಿಕ್ರಿಯಿಸಲು ಬಿಎಸ್‍ವೈ ನಕಾರ ವ್ಯಕ್ತಪಡಿಸಿದ್ದಾರೆ. ಅಮಿತ್ ಶಾ ಗೌಪ್ಯ ವೀಕ್ಷಕರನ್ನ ಕಳುಹಿಸಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಲು ಬಿಎಸ್ ವೈ ನಕಾರ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ತುಟಿ ಬಿಚ್ಚದೇ ತಲೆಯಾಡಿಸಿ ಬಿಎಸ್‍ವೈ ಹೊರು ಹೋದರು.

Share This Article
Leave a Comment

Leave a Reply

Your email address will not be published. Required fields are marked *