ಕೊಪ್ಪಳ: ಜಿಲ್ಲೆಯ ಅಂಜನಾದ್ರಿಯಲ್ಲಿ (Anjanadri) ಮತ್ತೆ ಪೂಜೆ ವಿವಾದ ಶುರುವಾಗಿದೆ. ಆಂಜನೇಯ ಸ್ವಾಮಿ (Anjaneya Swamy) ದರ್ಶನಕ್ಕೆ ಬಂದ ನೂತನ ಡಿಸಿ ಸುರೇಶ್ (DC Suresh) ಅವರು ಹೊರಗಿನ ಅರ್ಚಕನಿಂದ ಪೂಜೆ ಮಾಡಿಸಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.
ಕೊಪ್ಪಳ ನೂತನ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಅವರು ಮೊದಲ ಬಾರಿಗೆ ಅಂಜನಾದ್ರಿಗೆ ಭೇಟಿ ನೀಡಿದ್ದು, ಈ ವೇಳೆ ಆಂಜನೇಯ ಸ್ವಾಮಿ ದರ್ಶನ ಮಾಡುವಾಗ ಹೊರಗಿನಿಂದ ಅರ್ಚಕನನ್ನು ಕರೆತಂದು ಪೂಜೆ ನೆರವೇರಿಸಿದ್ದಾರೆ. ಸೌಜನ್ಯಕ್ಕಾದರೂ ಪ್ರಧಾನ ಅರ್ಚಕ ವಿದ್ಯಾದಾಸ ಬಾಬಾರನ್ನು ಮಾತನಾಡಿಸಬೇಕಿತ್ತು. ಆದರೆ ಮಾತಾಡಿಸದೇ ಹಾಗೇ ಹೋಗಿದ್ದಾರೆ. ಜಿಲ್ಲಾಧಿಕಾರಿಯ ಈ ನಡೆ ಆಂಜನೇಯಸ್ವಾಮಿ ಭಕ್ತರ ಅಸಮಾಧಾನಕ್ಕೆ ಕಾರಣವಾಗಿದೆ.ಇದನ್ನೂ ಓದಿ: ಯಾರ ಕೈಗೂ ಸಿಗದೇ ಸರಳವಾಗಿ ಹುಟ್ಟುಹಬ್ಬ ಆಚರಿಸಿದ ರಿಷಬ್ ಶೆಟ್ಟಿ
ಸುಪ್ರೀಂ ಕೋರ್ಟ್ ವಿದ್ಯಾದಾಸ ಬಾಬಾ ಅವರಿಗೆ ಪೂಜೆಯ ಹಕ್ಕು ನೀಡಿದೆ. ಆದರೆ, ಕಳೆದ ಹಲವು ತಿಂಗಳಿನಿಂದ ಅಧಿಕಾರಿಗಳು ಬಾಬಾಗೆ ಕಿರುಕುಳ ನೀಡುತ್ತಾ ಧಾರ್ಮಿಕ ಕಾರ್ಯಗಳಿಗೆ ಅಡಚಣೆ ಉಂಟು ಮಾಡುತ್ತಿದ್ದಾರೆ ಎಂಬ ಆರೋಪವಿದೆ. ಈಗ ಡಿಸಿ ಕೂಡ ಇದೇ ವರ್ತನೆ ತೋರಿದ್ದಾರೆ.
ಪೂಜಾ ಕಾರ್ಯಗಳ ಚಿತ್ರೀಕರಣದ ವೇಳೆಯೂ ಆಡಳಿತ ಅಧಿಕಾರಿ ಎಂ.ಹೆಚ್.ಪ್ರಕಾಶರಾವ್ ವಿದ್ಯಾದಾಸ ಬಾಬಾರನ್ನು ತಡೆದಿದ್ದಾರೆ. ಇಷ್ಟೆಲ್ಲಾ ಆದರೂ ಡಿಸಿ ಸುರೇಶ್ ಮಾತ್ರ ನನಗೂ ಇದಕ್ಕೂ ಸಂಬಂಧ ಇಲ್ಲ ಎನ್ನುವಂತೆ ದೇವರ ದರ್ಶನ ಪಡೆದು ಹೋಗಿದ್ದಾರೆ. ಭಕ್ತರಿಗೆ ಮಂಗಳಾರತಿ ನಿಷೇಧಿಸಿರುವ ಜಿಲ್ಲಾಡಳಿತ ಅಧಿಕಾರಿಗಳಿಗೆ ಮಾತ್ರ ಮಂಗಳಾರತಿ, ವಿಶೇಷ ಅರ್ಚಕರ ಸೌಲಭ್ಯ ಕಲ್ಪಿಸುತ್ತಿದೆ. ಇದು ಸರ್ವಾಧಿಕಾರಿ ಧೋರಣೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಶಾಲೆ ಬಳಿ ಇದ್ದ ನೇರಳೆ ತಿಂದು 7 ವಿದ್ಯಾರ್ಥಿಗಳು ಅಸ್ವಸ್ಥ – ಆಸ್ಪತ್ರೆಗೆ ದಾಖಲು