ಕ್ಯಾನ್ಸರ್ ಇದೆ, ಈಗ ವಿಚಾರಣೆಗೆ ಬರಲು ಸಾಧ್ಯವಿಲ್ಲ – ಪೊಲೀಸರಿಗೆ ಚಂದ್ರಶೇಖರ ಶ್ರೀ ಪತ್ರ

Public TV
1 Min Read

ಬೆಂಗಳೂರು: ವಿವಾದಾತ್ಮಕ ಹೇಳಿಕೆ ನೀಡಿ, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಪಡೆದಿದ್ದ ವಿಶ್ವ ಒಕ್ಕಲಿಗ ಸಂಸ್ಥಾನ ಮಠದ ಚಂದ್ರಶೇಖರ ಶ್ರೀಗಳು (Chandrashekar Swamiji) ಅನಾರೋಗ್ಯದ ಕಾರಣ ನೀಡಿ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಪೊಲೀಸರಿಗೆ ಪತ್ರ ಬರೆದಿದ್ದಾರೆ.

ಶ್ರಿಗಳು ಉಪ್ಪಾರಪೇಟೆ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಬರೆದ ಪತ್ರದಲ್ಲಿ, ನಾನು ಮಾರಕ ಕ್ಯಾನ್ಸರ್‌ನಿಂದ ಬಳಲುತ್ತಿದ್ದೇನೆ. ವೈದ್ಯರು 10 ದಿನಗಳ ಕಾಲ ವಿಶ್ರಾಂತಿಗೆ ಸೂಚಿಸಿದ್ದಾರೆ. ಡಿ.18ರಂದು ವಿಚಾರಣೆಗೆ ಹಾಜರಾಗಲು ಸಿದ್ಧನಿದ್ದೇನೆ. ಅಷ್ಟರೊಳಗೆ ವಿಚಾರಣೆ ನಡೆಸುವುದು ಅವಶ್ಯವೆನಿಸಿದಲ್ಲಿ ಮಠಕ್ಕೆ ಬರಬಹುದು. ಮಠಕ್ಕೆ ಬಂದು ಹೇಳಿಕೆ ದಾಖಲಿಸಿಕೊಳ್ಳಲು ಅಭ್ಯಂತರವಿಲ್ಲ. ಇಂದು (ಸೋಮವಾರ) ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಉಲ್ಲೇಖಿಸಲಾಗಿದೆ.

ಚಂದ್ರಶೇಖರ ಸ್ವಾಮೀಜಿ ಹೇಳಿದ್ದೇನು?
ನಗರದ ಫ್ರೀಡಂ ಪಾರ್ಕ್‍ನಲ್ಲಿ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ್ದ ಅವರು ಪಾಕಿಸ್ತಾನದಲ್ಲಿ ಬೇರೆಯವರಿಗೆ ಮತ ಹಾಕುವ ಅಧಿಕಾರವಿಲ್ಲ. ಅದೇ ರೀತಿ ನಮ್ಮ ಭಾರತದಲ್ಲಿಯೂ ಮುಸ್ಲಿಮರಿಗೆ (Muslims) ಮತದಾನ (Vote) ಮಾಡುವ ಹಕ್ಕಿಲ್ಲದಂತೆ ಮಾಡಿದರೆ ಅವರು ಅವರ ಪಾಡಿಗಿರುತ್ತಾರೆ. ಖಂಡಿತವಾಗಿಯೂ ಎಲ್ಲರೂ ನೆಮ್ಮದಿಯಾಗಿ ಇರಲು ಸಾಧ್ಯ ಎಂದಿದ್ದರು.

ದೇಶದಲ್ಲಿ ವಕ್ಫ್ ಮಂಡಳಿಯೇ (Waqf Board) ಇಲ್ಲದಂತೆ ಮಾಡಬೇಕು. ವಕ್ಫ್ ಮಂಡಳಿಯೇ ಇಲ್ಲದಂತೆ ಮಾಡಿದರೆ ಆಗ ಭಾರತೀಯರೆಲ್ಲರೂ ನೆಮ್ಮದಿಯಿಂದ ಇರಲು ಸಾಧ್ಯವಾಗಲಿದೆ. ರೈತರ ಜಮೀನು ಉಳಿಸಲು ಎಲ್ಲರೂ ಒಂದಾಗಿ ಹೋರಾಟ ನಡೆಸುವ ತುರ್ತು ಸಂದರ್ಭ ಎದುರಾಗಿದೆ. ಸರ್ಕಾರ ಹೋದರೂ ತೊಂದರೆ ಇಲ್ಲ. ವಕ್ಫ್ ಮಂಡಳಿ ರದ್ದು ಮಾಡುವ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದ್ದರು.

ಈ ವಿಚಾರವಾಗಿ ಸೈಯ್ಯದ್ ಅಬ್ಬಾಸ್ ಎಂಬವರು ಸ್ವಾಮೀಜಿ ಹೇಳಿಕೆಯನ್ನು ಖಂಡಿಸಿ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಬಿಎನ್‍ಎಸ್ ಸೆಕ್ಷನ್ 299 (ಯಾವುದೇ ಧರ್ಮವನ್ನು ಅಪಮಾನಗೊಳಿಸಿ ಅವರ ಧಾರ್ಮಿಕ ಭಾವನೆಗಳಿಗೆ ಆಘಾತ ಉಂಟುಮಾಡುವ ಉದ್ದೇಶದಿಂದ ಬುದ್ಧಿಪೂರ್ವಕವಾಗಿ ಮತ್ತು ದ್ವೇಷ ಭಾವನೆಯಿಂದ ಮಾಡಿದ ಕೃತ್ಯ) ಅಡಿ ಉಪ್ಪಾರಪೇಟೆ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿತ್ತು.

Share This Article