ಗುತ್ತಿಗೆದಾರ ಸಚಿನ್ ಅತ್ಮಹತ್ಯೆ ಕೇಸ್‌ – ಇಬ್ಬರು ಹೆಡ್‌ಕಾನ್‌ಸ್ಟೇಬಲ್‌ ಸಸ್ಪೆಂಡ್‌

Public TV
2 Min Read

ಬೀದರ್‌: ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣಕ್ಕೆ (Contractor Sachin Panchal Suicide Case) ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ ಬೀದರ್ (Bidar) ಗಾಂಧಿಗಂಜ್ ಪೊಲೀಸ್ ಠಾಣೆಯ ಇಬ್ಬರು ಹೆಡ್ ಕಾನ್‌ಸ್ಟೇಬಲ್‌ಗಳನ್ನು (Head Constable) ಸಸ್ಪೆಂಡ್ ಮಾಡಲಾಗಿದೆ.

ಶ್ಯಾಮಲಾ ಮತ್ತು ರಾಜೇಶ್‌ ಅವರನ್ನು ಎಸ್‌ಪಿ ಎಸ್‌ಪಿ ಪ್ರದೀಪ್ ಗುಂಟಿ ಅಮಾನತುಗೊಳಿಸಿ (Suspend) ಆದೇಶ ಹೊರಡಿಸಿದ್ದಾರೆ.

ಗುರುವಾರ (ಡಿ.26) ಡೆತ್‌ನೋಟ್ ಬರೆದು ಗುತ್ತಿಗೆದಾರ ಸಚಿನ್ ಪಾಂಚಾಳ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಡೆತ್‌ನೋಟ್ (Death Note) ನೋಡಿ ಗಾಬರಿಯಾದ ಕುಟುಂಬಸ್ಥರು ಬೀದರ್‌ನ ಗಾಂಧಿಗಂಜ್ ಪೊಲೀಸ್ ಠಾಣೆಗೆ ಧಾವಿಸಿದ್ದರು. ಇದನ್ನೂ ಓದಿ: ಭಾರತದ 130 ಟನ್ ಚಿನ್ನ ಅಡ ಇಟ್ಟ ಭೀಕರ ಪರಿಸ್ಥಿತಿಯಲ್ಲಿ ದೇಶಕ್ಕಾಗಿ ಸಿಂಗ್ ಕೆಲಸ ಮಾಡಿದ್ರು: ಹೆಚ್‌ಡಿಡಿ ಸ್ಮರಣೆ

ಪ್ರಿಯಾಂಕ್‌ ಖರ್ಗೆ ಆಪ್ತ ರಾಜು ಕಪನೂರು
ಪ್ರಿಯಾಂಕ್‌ ಖರ್ಗೆ ಆಪ್ತ ರಾಜು ಕಪನೂರು

ಸಚಿನ್‌ ಪತ್ತೆ ಮಾಡುವಂತೆ ದೂರು ನೀಡಿದ್ದರೂ ಹೆಡ್ ಕಾನ್‌ಸ್ಟೇಬಲ್‌ ಸರಿಯಾಗಿ ಸ್ಪಂದಿಸಿರಲಿಲ್ಲ. ಹೀಗಾಗಿ ಪೊಲೀಸರು ದೂರು ದಾಖಲಿಸಿಕೊಳ್ಳದೇ ನಿರ್ಲಕ್ಷ್ಯಿಸಿದ್ದಕ್ಕೆ ನಮ್ಮಣ್ಣ ಸಾವನ್ನಪ್ಪಿದ್ದಾನೆ ಎಂದು ಎಸ್‌ಪಿ ಮುಂದೆ ಅಳಲು ತೋಡಿಕೊಂಡಿದ್ದರು.

ಕರ್ತವ್ಯಲೋಪ ಆರೋಪ ಹಿನ್ನೆಲೆಯಲ್ಲಿ ಕಾನ್‌ಸ್ಟೇಬಲ್‌ಗಳನ್ನು ಅಮಾನತು ಮಾಡಲಾಗಿದೆ ಎಂದು ಪಬ್ಲಿಕ್ ಟಿವಿಗೆ ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಮಾಹಿತಿ ನೀಡಿದ್ದಾರೆ.

ಏನಿದು ಪ್ರಕರಣ?
ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಆಪ್ತ ರಾಜು ಕಪನೂರು ಸೇರಿದಂತೆ ಎಳು ಜನರ ಮೇಲೆ ಗಂಭೀರ ಆರೋಪ ಮಾಡಿ ಯುವ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಗುರುವಾರ ಬೀದರ್ ನಗರ ಬಸವೇಶ್ವರ ವೃತ್ತದ ಬಳಿಯ ರೈಲ್ವೇ ಹಳಿಗೆ ತಲೆ ಕೊಟ್ಟಿದ್ದರು.

ಡೆತ್​ ನೋಟ್​ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ಕಲಬುರಗಿ ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್‌ ರಾಜು ಕಪನೂರು ವಿರುದ್ಧ ಕೆಲ ಗಂಭೀರ ಆರೋಪಗಳನ್ನು ಮಾಡಿದ್ದರು. 5 ಲಕ್ಷ ರೂ. ಹೆಚ್ಚು ಹಣ ಪಡೆದು ಟೆಂಡರ್ ನೀಡದೇ ವಂಚನೆ ಮಾಡಲಾಗಿದೆ.  ಅಷ್ಟೇ ಅಲ್ಲದೇ  1 ಕೋಟಿ ರೂ. ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ರಾಜು ಕಪನೂರು ವಿರುದ್ಧ ಆರೋಪಿಸಲಾಗಿದೆ. ಡೆತ್ ನೋಟ್​ನಲ್ಲಿ ಕಲಬುರಗಿಯ ಮಾಜಿ ಕಾರ್ಪೊರೇಟ್ ರವಿ ಕಪನೂರು, ನಂದಕುಮಾರ್ ನಾಗಭುಜಂಗೆ, ಗೋರಖನಾಥ್ ಸೇರಿ 6 ಜನರ ವಿರುದ್ಧ ಜೀವ ಬೆದರಿಕೆ ಆರೋಪ ಮಾಡಲಾಗಿದೆ.

 

Share This Article