ಕೇರಳ | ಮುಳುಗಿದ ಕಾರ್ಗೋ ಶಿಪ್‌ – ಅಲೆಯ ಅಬ್ಬರಕ್ಕೆ ತೇಲಿಬಂದ ಕಂಟೇನರ್‌; ಮುಟ್ಟದಂತೆ ಜನರಿಗೆ ಸೂಚನೆ

Public TV
2 Min Read

ತಿರುನಂತಪುರಂ: ಕೇರಳದ (Kerala) ಕೊಚ್ಚಿಯ ಕರಾವಳಿಯಲ್ಲಿ ಮುಳುಗಿದ್ದ ಲೈಬೀರಿಯಾದ ಕಾರ್ಗೋ ಶಿಪ್‌ನಲ್ಲಿದ್ದ (Liberian ship) ಕೆಲವು ಕಂಟೇನರ್‌ಗಳು ಇಂದು ( ಸೋಮವಾರ) ಬೆಳಗಿನ‌ ಜಾವ ರಕ್ಕಸ ಅಲೆಗಳ ಅಬ್ಬರಕ್ಕೆ ದಡ ಸೇರಿವೆ.

ಒಟ್ಟು 5 ಕಂಟೇನರ್‌ಗಳು ಇಂದು ಪತ್ತೆಯಾಗಿವೆ. ಕಾರ್ಗೋಶಿಪ್‌ನಲ್ಲಿ ಒಟ್ಟು 623 ಕಂಟೇನರ್‌ಗಳು ಇದ್ದವು. ಇದರಲ್ಲಿ 73 ಖಾಲಿ ಕಂಟೇನರ್‌ಗಳಾಗಿದ್ದವು. ಒಟ್ಟು 25 ಕಂಟೇನರ್‌ಗಳಲ್ಲಿ ಕ್ಯಾಲ್ಸಿಯಂ ಕಾರ್ಬೈಡ್ ಸೇರಿ, ಹಾನಿಕಾರಕ ಕೆಮಿಕಲ್‌ಗಳು ಇದ್ದವು. ಇವು ಜಲಚರಗಳಿಗೆ ಹಾನಿಯುಂಟು ಮಾಡುವ ಸಾಧ್ಯತೆಯಿದೆ. ಇನ್ನೂ ಕಂಟೇನರ್ ಕಾಣಿಸಿಕೊಂಡರೆ ಅದರ ಬಳಿ ಹೋಗಬೇಡಿ, ಮುಟ್ಟಬೇಡಿ ಎಂದು ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ನೀಡಿದೆ. ಇದನ್ನೂ ಓದಿ: ಕೇರಳ | ಸರಕು ಸಾಗಣೆ ಹಡಗಿನಲ್ಲಿದ್ದ ತೈಲ ಕಂಟೇನರ್‌ಗಳು ಸಮುದ್ರಪಾಲು – ಹೆಚ್ಚಿದ ಆತಂಕ

ಕಂಟೇನರ್‌ಗಳು ಪತ್ತೆಯಾದ ಸ್ಥಳಕ್ಕೆ ಕೊಲ್ಲಂ ಜಿಲ್ಲೆಯ ಜಿಲ್ಲಾಧಿಕಾರಿ ಭೇಟಿ‌ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಏನಿದು ಘಟನೆ?
ಕಾರ್ಗೋ ಶಿಪ್ ವಿಝಿಂಜಂನಿಂದ ಕೊಚ್ಚಿಗೆ ಬರುತ್ತಿತ್ತು. ಶನಿವಾರ ಕೊಚ್ಚಿ ಕರಾವಳಿಯಿಂದ ನೈರುತ್ಯಕ್ಕೆ 38 ನಾಟಿಕಲ್ ಮೈಲುಗಳಷ್ಟು ದೂರದ ಅರಬ್ಬಿ ಸಮುದ್ರದಲ್ಲಿ (Arabian Sea) ಹಡಗು ಮುಳುಗಿತ್ತು. ಮುಳುಗುವ ಮುನ್ನ ಹಡಗು ಒಂದು ಭಾಗಕ್ಕೆ ವಾಲಿದ್ದರಿಂದ ಅದರಲ್ಲಿದ್ದ ಕಂಟೇನರ್‌ಗಳು ಸಮುದ್ರದ ಪಾಲಾಗಿದ್ದವು. ಹಡಗಿನಲ್ಲಿದ್ದ 24 ಸಿಬ್ಬಂದಿಯನ್ನು ಭಾರತದ ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ ರಕ್ಷಿಸಿದ್ದರು.

ಮುಳುಗಿದ ಹಡಗನ್ನು ಕೊಚ್ಚಿ ಬಂದರಿಗೆ ಎಳೆಯುವ ಪ್ರಯತ್ನವನ್ನು ಮಾಡಲಾಗಿತ್ತು. ಆದರೆ ಭಾರೀ ಅಲೆಗಳು ಮತ್ತು ಗಾಳಿಯ ಪರಿಣಾಮ ಬೀಸುತ್ತಿತ್ತು. ಹಾಗಾಗಿ, ಹಡಗಿನಲ್ಲಿದ್ದ ಸರಕುಗಳನ್ನು ಬೇರೆಡೆಗೆ ಸಾಗಿಸಲು ಸಾಧ್ಯವಾಗಿರಲಿಲ್ಲ. ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ಸ್ನಾನಘಟ್ಟ ಮುಳುಗಡೆ – ಪುತ್ತೂರಿಗೆ NDRF ತಂಡ ಆಗಮನ

Share This Article