ಅಯೋಧ್ಯೆ ಮಸೀದಿ ನಿರ್ಮಾಣ ಕಾರ್ಯ 2023ಕ್ಕೆ ಪೂರ್ಣ ಸಾಧ್ಯತೆ – ಟ್ರಸ್ಟ್‌

Public TV
2 Min Read

ಲಕ್ನೋ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಮಸೀದಿಯ (Ayodhya Mosque) ಕಾಮಗಾರಿಯು 2023ರ ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಈ ಸಂಬಂಧ ಟ್ರಸ್ಟ್‌ ಮಾಹಿತಿ ನೀಡಿದೆ.

ರಾಮ ಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ (Supreme Court) ತೀರ್ಪಿನಂತೆ ಅಯೋಧ್ಯೆಯಲ್ಲಿ ಮಸೀದಿ ನಿರ್ಮಿಸಲಾಗುತ್ತಿದೆ. ಪ್ರಸ್ತಾವಿತ ಮಸೀದಿ, ಆಸ್ಪತ್ರೆ, ಸಮುದಾಯ ಅಡುಗೆ ಕೋಣೆ, ಗ್ರಂಥಾಲಯ ಮತ್ತು ಸಂಶೋಧನಾ ಕೇಂದ್ರದ ನಕ್ಷೆಗೆ ಈ ತಿಂಗಳ ಅಂತ್ಯದೊಳಗೆ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆ ಸಿಗಲಿದೆ ಎಂದು ನಾವು ಭಾವಿಸಿದ್ದೇವೆ. ಶೀಘ್ರದಲ್ಲೇ ನಾವು ಮಸೀದಿಯ ನಿರ್ಮಾಣವನ್ನು ಪ್ರಾರಂಭಿಸುತ್ತೇವೆ ಎಂದು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಟ್ರಸ್ಟ್ ಕಾರ್ಯದರ್ಶಿ ಅಥರ್ ಹುಸೇನ್ ತಿಳಿಸಿದ್ದಾರೆ. ಇದನ್ನೂ ಓದಿ: ಇಸ್ಲಾಮಿಕ್ ಶಿಕ್ಷಣ ಕೇಂದ್ರದಲ್ಲಿ ಸಂಸ್ಕೃತ, ಉಪನಿಷತ್ ಕಲಿಕೆ- ಕೇಂದ್ರದ ನಡೆಗೆ ನೆಟ್ಟಿಗರ ಮೆಚ್ಚುಗೆ

ಧನ್ನಿಪುರ ಅಯೋಧ್ಯೆ ಮಸೀದಿಯ ನಿರ್ಮಾಣವು ಡಿಸೆಂಬರ್ 2023 ರ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಐದು ಎಕರೆ ವಿಸ್ತೀರ್ಣದಲ್ಲಿ ಮಸೀದಿ ನಿರ್ಮಾಣವಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸುದೀರ್ಘ ಕಾಲದ ಅಯೋಧ್ಯೆ ವಿವಾದದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್, ಬಾಬರಿ ಮಸೀದಿ ಇದ್ದ 2.77 ಎಕರೆ ಜಾಗದಲ್ಲಿ ರಾಮಮಂದಿರವನ್ನು (Rama Mandir) ನಿರ್ಮಿಸಲು ಆದೇಶಿಸಿತು. ಉತ್ತರ ಪ್ರದೇಶದಲ್ಲೇ ಬೇರೆಡೆ ಮಸೀದಿ ನಿರ್ಮಿಸಲು ಐದು ಎಕರೆ ಜಾಗವನ್ನು ಮಂಜೂರು ಮಾಡುವಂತೆ ಆದೇಶಿಸಿತ್ತು. ಇದನ್ನೂ ಓದಿ: ಲಿವರ್‌ಪೂಲ್‌ ತಂಡವನ್ನು ಖರೀದಿಸಲು ಮುಂದಾದ ಅಂಬಾನಿ

ಅಯೋಧ್ಯೆ ರಾಮಮಂದಿರ ದೇವಾಲಯದ ಭೂಮಿಪೂಜೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 2020 ರಲ್ಲಿ ನೆರವೇರಿಸಿದರು. ದೇವಾಲಯದ ಟ್ರಸ್ಟ್ ಪ್ರಕಾರ, ಜನವರಿ 2024 ರ ವೇಳೆಗೆ ರಾಮಮಂದಿರ ಭಕ್ತರ ದರ್ಶನಕ್ಕೆ ತೆರೆಯುವ ಸಾಧ್ಯತೆಯಿದೆ.

ಮಸೀದಿ ನಿರ್ಮಾಣಕ್ಕಾಗಿ ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ರಚಿಸಿರುವ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಟ್ರಸ್ಟ್ ಆಸ್ಪತ್ರೆ, ಸಮುದಾಯ ಅಡುಗೆ ಮನೆ, ಗ್ರಂಥಾಲಯ ಮತ್ತು ಸಂಶೋಧನಾ ಸಂಸ್ಥೆಯನ್ನು ನಿರ್ಮಿಸಲು ನಿರ್ಧರಿಸಿದೆ. ಆಸ್ಪತ್ರೆಯು ಆರಂಭದಲ್ಲಿ 100 ಹಾಸಿಗೆಗಳ ಸಾಮರ್ಥ್ಯ ಹೊಂದಿದ್ದು, ನಂತರ ಅದನ್ನು 200ಕ್ಕೆ ಹಾಸಿಗೆ ವ್ಯವಸ್ಥೆಗೆ ನವೀಕರಿಸಲಾಗುವುದು. ಸಮುದಾಯ ಅಡುಗೆಮನೆಯು ಆರಂಭದಲ್ಲಿ ಪ್ರತಿದಿನ 1,000 ಜನರಿಗೆ ಆಹಾರ ಪೂರೈಸುವ ವ್ಯವಸ್ಥೆ ಹೊಂದಿರುತ್ತದೆ ಎಂದು ಹುಸೇನ್‌ ಹೇಳಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *