RRನಗರ ಗ್ರೇಡ್ ಸೆಪರೇಟರ್ ಕಾಮಗಾರಿಗಳಿಗೆ ಶಂಕುಸ್ಥಾಪನೆ: ಕಾಲಮಿತಿಯಲ್ಲಿ ಪೂರ್ಣ- ಸಿಎಂ ಭರವಸೆ

Public TV
2 Min Read

ಬೆಂಗಳೂರು: ಅಭಿವೃದ್ಧಿಗೆ ಕೈಗೊಂಡಿರುವ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಂದು ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಆರ್.ಆರ್.ನಗರ ಆರ್ಚ್ ಬಳಿ ಗ್ರೇಡ್ ಸಪರೇಟರ್ ಕಾಮಗಾರಿಗೆ ಬೊಮ್ಮಾಯಿ ಅವರು ಶಂಕುಸ್ಥಾಪನೆ ಮಾಡಿದರು. ಹೊಸಕೇರಹಳ್ಳಿ ಮತ್ತು ಕೆಂಚೇನಹಳ್ಳಿ ಕೆರೆಗಳಲ್ಲಿ ಒಳಚರಂಡಿ ತ್ಯಾಜ್ಯ ನೀರನ್ನು ತಿರುಗಿಸುವ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಇದನ್ನೂ ಓದಿ: ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಬಾಲಕಾರ್ಮಿಕ ಪದ್ಧತಿಯನ್ನು ಹೋಗಲಾಡಿಸೋಣ: ನ್ಯಾಯಾಧೀಶ 

ವಾಹನ ದಟ್ಟಣೆ ಸಮಸ್ಯೆಗೆ ಪರಿಹಾರ
ಆರ್.ಆರ್.ನಗರ ಬಹಳ ಪ್ರಮುಖವಾದ, ಜನದಟ್ಟಣೆ ಹಾಗೂ ವಾಹನದಟ್ಟಣೆ ಇರುವ ಜಂಕ್ಷನ್. ಕೆಂಗೇರಿಯಿಂದ ಬೆಂಗಳೂರಿನ ಟೌನ್‍ಹಾಲ್ ವರೆಗೆ ಸಂಚಾರ ದಟ್ಟಣೆ ಇದೆ. ಗ್ರೇಡ್ ಸಪರೇಟರ್ ಕೆಲಸದಿಂದ ಕೇವಲ ಆರ್.ಆರ್.ನಗರಕ್ಕೆ ಮಾತ್ರವಲ್ಲದೇ ಬೆಂಗಳೂರಿನ ವಾಹನ ದಟ್ಟಣೆಯ ಸಮಸ್ಯೆಗೆ ಪರಿಹಾರ ಕೊಡುವ ಕೆಲಸವನ್ನು ಮಾಡಲಾಗಿದೆ.

ಬೆಂಗಳೂರು-ಮೈಸೂರು ರಸ್ತೆ ಎಂಟು ಪಥದ ರಸ್ತೆಯನ್ನಾಗಿ ಮಾಡುವ ಕಾಮಗಾರಿ 4-5 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಈ ಜಂಕ್ಷನ್ ಮುಗಿದರೆ ಬೆಂಗಳೂರಿನ ಒಳಗೆ ಪ್ರವೇಶ ಮಾಡಿದರೆ ನೇರವಾಗಿ ಟೌನ್‍ಹಾಲ್ ವರೆಗೆ ಯಾವುದೇ ಆತಂಕವಿಲ್ಲದೇ ಹೋಗಬಹುದಾಗಿದೆ. ಇದು ಅತೀ ಉದ್ದನೆಯ ಸಿಗ್ನಲ್ ಫ್ರೀ ಕಾರಿಡಾರ್ ಆಗಲಿದೆ. ಅತ್ಯುತ್ತಮವಾಗಿ ಯೋಜಿತವಾದ ಕಾರ್ಯಕ್ರಮವಾಗಿದೆ ಎಂದರು.

ಬೆಂಗಳೂರಿನ ಅಭಿವೃದ್ಧಿಗೆ ವಿಶೇಷ ಒತ್ತು
ಉತ್ತರಹಳ್ಳಿಯಿಂದ ದಕ್ಷಿಣದವರೆಗೂ ಸಂಪರ್ಕ ಕಲ್ಪಿಸುವ ರಾಜರಾಜೇಶ್ವರಿ ನಗರ ಬೃಹತ್ ಪ್ರಮಾಣದಲ್ಲಿ ಬೆಳೆದು ಅತ್ಯಂತ ಪ್ರತಿಷ್ಠಿತ ಬಡಾವಣೆ ಎನಿಸಿದೆ. ನಿಗದಿತ ಸಮಯದಲ್ಲಿ, ಉತ್ತಮ ಗುಣಮಟ್ಟದ ಕಾಮಗಾರಿಯಾಗಬೇಕು. ನಮ್ಮೆಲ್ಲರ ಯೋಜನೆ ಮೀರಿ ಬೆಂಗಳೂರು ಬೆಳೆಯುತ್ತಿದೆ. ಅದಕ್ಕಾಗಿ ರಸ್ತೆಗಳು ಸಂಚಾರದ ಬಗ್ಗೆ ವಿಶೇಷ ಯೋಜನೆ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ:  ಅನುಮತಿ ಪಡೆಯದೇ ಜಾಹೀರಾತು: ಇಬ್ಬರು ಅಭ್ಯರ್ಥಿಗಳ ವಿರುದ್ಧ FIR ದಾಖಲು 

ಸ್ಯಾಟಿಲೈಟ್ ಟೌನ್ ರಿಂಗ್ ರೋಡ್‍ಗೂ ಸಹ ಪ್ರಧಾನಮಂತ್ರಿಗಳು ಜೂನ್ 21 ರಂದು ಅಡಿಗಲ್ಲು ಹಾಕುತ್ತಿದ್ದಾರೆ. ಪೆರಿಫೆರಲ್ ರಿಂಗ್ ರೋಡ್, ಸಬ್ ಅರ್ಬನ್ ರೈಲು ಕಾಮಗಾರಿಗಳಿಗೆ ಅಡಿಗಲ್ಲು ಹಾಕಲಾಗುತ್ತಿದೆ. ಇದರಿಂದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಬಹುದಾಗಿದೆ. ಈ ಬಾರಿಯ ಬಜೆಟ್‍ನಲ್ಲಿ ಪ್ರತಿ ವಾರ್ಡಿಗೆ ಒಂದು ‘ನಮ್ಮ ಕ್ಲಿನಿಕ್’ ಸ್ಥಾಪನೆ, ಬೆಂಗಳೂರಿನ ಶಾಲೆಗಳ ಸಮಗ್ರ ಅಭಿವೃದ್ಧಿ, ನಗರದ ಆರೋಗ್ಯ ಸೇವೆಗಳಿಗೆ ವಿಶೇಷ ಇಲಾಖೆ ರೂಪಿಸಿ ನಿರ್ವಹಿಸಲು ಯೋಜನೆ, ಕೆರೆ, ಉದ್ಯಾನ, ಕೊಳಚೆ ಪ್ರದೇಶದ ಜನರಿಗೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಸಚಿವರಾದ ವಿ.ಸೋಮಣ್ಣ, ಆರ್.ಅಶೋಕ್, ಮುನಿರತ್ನ ಮತ್ತು ಇತರರು ಉಪಸ್ಥಿತರಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *