ಹೆಗಡೆ ಅಲ್ಲ ಅವರಪ್ಪ ಹುಟ್ಟಿ ಬಂದ್ರೂ ಸಂವಿಧಾನ ಬದಲಾಯಿಸಲು ಆಗಲ್ಲ: ಸ್ವಪಕ್ಷದ ನಾಯಕನ ವಿರುದ್ಧ ರಾಜೂಗೌಡ ಆಕ್ರೋಶ

Public TV
2 Min Read

ಯಾದಗಿರಿ: ಸಂವಿಧಾನ ಬದಲಾವಣೆ ಮಾಡ್ತೀವಿ ಎಂಬ ಸಂಸದ ಅನಂತ್‌ ಕುಮಾರ್‌ ಹೆಗಡೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ (BJP) ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ರಾಜೂಗೌಡ (Raju Gowda) ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾದಗಿರಿ (Yagir) ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಫಲಾನುಭವಿಗಳ ಪ್ರಮುಖರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಂಸದ ಅನಂತ್‌ ಕುಮಾರ್‌ (Anantkumar Hegde) ವಿರುದ್ಧ ಏಕವಚನದಲ್ಲೇ ಕಿಡಿಕಾರಿದ್ದಾರೆ. ಇದನ್ನೂ ಓದಿ: ನಾಯಿಗಳು ಎಷ್ಟೇ ಬೊಗಳಿದರೂ ಏನು ಮಾಡಲು ಆಗಲ್ಲ, ಆನೆ ನಡೆದಿದ್ದೇ ಹಾದಿ : ಹೆಗಡೆ ಕಿಡಿ

ಈಗ ಒಬ್ಬ ಹೆಗಡೆ ಎನ್ನುವವನು ಎಲ್ಲೋ ಮಾತಾಡಿದ್ದಾನೆ. ಸಂವಿಧಾನ ಚೇಂಜ್‌ ಮಾಡ್ತೀವಿ ಅಂತಾ ಹೇಳಿದ್ದಾನೆ. ಹೆಗಡೆ ಅಲ್ಲ ಅವರಪ್ಪ ಹುಟ್ಟಿ ಬಂದ್ರೂ ಸಂವಿಧಾನಕ್ಕೆ ಏನು ಮಾಡಕಾಗಲ್ಲ. ಸಂವಿಧಾನ ಮುಟ್ಟುವುದಕ್ಕೂ ಆಗಲ್ಲ. ಚೇಂಜ್‌ ಮಾಡೋಕೂ ಆಗಲ್ಲ. ಅಂಬೇಡ್ಕರ್ ಬರೆದ ಸಂವಿಧಾನವನ್ನು ಮೋದಿ ಅವ್ರು ರಕ್ಷಣೆ ಮಾಡ್ತಿದ್ದಾರೆ. ಸಂವಿಧಾನವನ್ನು ತಲೆ ಮೇಲೆ ಇಟ್ಕೊಂಡು ಹೋಗುವಂತಹ ಕೆಲಸ ಮೋದಿ, ಬಿಜೆಪಿ ಮಾಡಿದೆ ಎಂದು ಹೇಳಿದರು.

ಒಳ ಮೀಸಲಾತಿ ವಿಚಾರದಲ್ಲೂ ರಾಜ್ಯ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ ರಾಜೂಗೌಡ, ಮೀಸಲಾತಿ ಹೆಚ್ಚಳವನ್ನು ಬಿಜೆಪಿ ಸರ್ಕಾರ ಮಾಡಿದೆ. ಎಲ್ಲೋ ನಿಂತು ಒಳ ಮೀಸಲಾತಿ ಮಾಡಿದ್ರು. ನಾನು ನಿಮ್ಮ ಪರ ನಿಂತೆ. ಆದ್ರೆ ಅದರ ಏಟು ನನಗೆ ಬಿತ್ತು ಎಂದು ಸಭೆಯಲ್ಲಿ ನೋವು ತೋಡಿಕೊಂಡರು. ಸಂವಿಧಾನ ವಿರೋಧಿ ಇದ್ರೆ ಮೀಸಲಾತಿ ಹೆಚ್ಚಳ ಯಾಕೆ ಮಾಡ್ತಿತ್ತು. ಎಸ್ಸಿ ಸಮುದಾಯಕ್ಕಿದ್ದ 15% ಮೀಸಲಾತಿಯನ್ನು 17% ಕ್ಕೆ ಹೆಚ್ಚಳ ಮಾಡಿತು. ಎಸ್ಟಿಗೆ 3% ಇದ್ದದ್ದನ್ನು 7% ಗೆ ಮೀಸಲಾತಿ ಹೆಚ್ಚಳ ಮಾಡಿತು ಎಂದರು. ಇದನ್ನೂ ಓದಿ: ಸಂವಿಧಾನ ತಿದ್ದುಪಡಿ ಹೇಳಿಕೆ – ಅನಂತಕುಮಾರ್ ಹೆಗಡೆ ಹೇಳಿಕೆಗೆ ರಾಜ್ಯ ಬಿಜೆಪಿಯಿಂದಲೇ ವಿರೋಧ

ನಮ್ಮ ಬಿಜೆಪಿಯ ಕೆಲವು ನಾಯಕರು ಕೆಲವೊಂದು ಗಾಳಿಯೊಳಗೆ ಗೆದ್ದು ಬಿಡ್ತಾರೆ. ಕೆಲವೊಂದು ಹುಚ್ಚುಚ್ಚು ಭಾಷಣ ಮಾಡಿ ಗೆದ್ದು ಬಿಡ್ತವೆ. ಗೆದ್ದು 4 ವರ್ಷದಿಂದ ಮಾಯ ಆಗ್ತಾರೆ. ಕೊನೆಯ 15 ದಿನದಲ್ಲಿ ಬಂದು ಬಾಯಿಗೆ ಬಂದಂಗೆ ಮಾತಾಡ್ತಾರೆ. ಹುಚ್ಚುಚ್ಚು ಮಾತಾಡುವಂತವರಿಗೆ ಬಿಜೆಪಿ ಏನು ಶಿಕ್ಷೆ ಕೊಡಬೇಕು ಕೊಡುತ್ತದೆ. ಬಾಯಿ ಮಾತಿನಿಂದ ಕೊಡಲ್ಲ, ಕಾದು ನೋಡಿ ಗೊತ್ತಾಗ್ತದೆ ಎಂದು ತಿರುಗೇಟು ಕೊಟ್ಟರು.

Share This Article