#ConnectUsToMangalore ಕರಾವಳಿ ಸಂಪರ್ಕಕ್ಕೆ ಪರ್ಯಾಯ ಮಾರ್ಗ ಕಲ್ಪಿಸಿ

Public TV
4 Min Read

ಬೆಂಗಳೂರು: ಕರಾವಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳು ಬಂದ್ ಆಗಿರುವ ಹಿನ್ನೆಲೆಯಲ್ಲಿ ಪರ್ಯಾಯ ರಸ್ತೆಗಳನ್ನು ಶೀಘ್ರವೇ ಅಭಿವೃದ್ಧಿ ಪಡಿಸುವಂತೆ ಬೇಡಿಕೆ ಇಟ್ಟು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ #ConnectUsToMangalore ಬಳಸಿ ಅಭಿಯಾನ ಆರಂಭಿಸಿದ್ದಾರೆ.

ಶಿರಾಡಿ, ಸಂಪಾಜೆ ಘಾಟಿ ಬಂದ್ ಆಗಿರುವ ಕಾರಣ ಈಗ ವಾಹನಗಳು ಚಾರ್ಮಾಡಿ ಘಾಟಿ, ಕುದುರೆಮುಖ ರಸ್ತೆಯಲ್ಲಿ ಸಂಚರಿಸುತ್ತವೆ. ಚಾರ್ಮಾಡಿ ಘಾಟ್ ನಲ್ಲಿ ವಾಹನಗಳ ದಟ್ಟನೆ ಹೆಚ್ಚಾಗಿದ್ದು ಭಾರೀ ಟ್ರಾಫಿಕ್ ಜಾಮ್ ಆಗುತ್ತಿದೆ. ಹೀಗಾಗಿ ಈಗಾಗಲೇ ಇರುವ ಪರ್ಯಾಯ ರಸ್ತೆಗಳನ್ನು ಅಭಿವೃದ್ಧಿ ಪಡಿಸಿ ಮುಂದೆ ನಡೆಯಬಹುದಾದ ಅನಾಹುತಗಳನ್ನು ತಪ್ಪಿಸಿ ಎಂದು ಸರ್ಕಾರದ ಪ್ರತಿನಿಧಿಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಸುಳ್ಯ ಮತ್ತು ಕೊಡಗನ್ನು ಸಂಪರ್ಕಿಸಲು ಈಗಾಗಲೇ ಪರ್ಯಾಯ ರಸ್ತೆಗಳು ಇದೆ. ಆದರೆ ಈ ರಸ್ತೆಯಲ್ಲಿ ಸಂಚಾರ ದುಸ್ತರವಾಗಿದೆ. ಹೀಗಾಗಿ ಈ ರಸ್ತೆಗಳನ್ನೇ ಅಭಿವೃದ್ಧಿ ಪಡಿಸಿದರೆ ಈ ಸಮಸ್ಯೆಗೆ ಸ್ವಲ್ಪ ಮಟ್ಟಿನ ಪರಿಹಾರವನ್ನು ಕಂಡುಕೊಳ್ಳಬಹುದು ಎನ್ನುವ ಸಲಹೆಯನ್ನು ಜನ ನೀಡುತ್ತಿದ್ದಾರೆ. ಇದನ್ನೂ ಓದಿ: ಸರ್ಕಾರ ಮನಸ್ಸು ಮಾಡಿದ್ರೆ ಸುಳ್ಯ ಭಾಗದಿಂದ ಮಡಿಕೇರಿಗೆ ಸಂಪರ್ಕ ಕಲ್ಪಿಸಬಹುದು! ಸುಲಭ ರಸ್ತೆಗಳು ಎಲ್ಲಿವೆ? ಎಷ್ಟು ಕಿ.ಮೀ ಇದೆ?

ಬೇಡಿಕೆ ಯಾಕೆ?
1. ಕರಾವಳಿಯ ನಗರಗಳಾದ ಮಂಗಳೂರು, ಉಡುಪಿ ರಾಜ್ಯದ ಪ್ರಮುಖ ನಗರಗಳಾಗಿ ಬೆಳೆದಿವೆ. ವಿಮಾನ ಮತ್ತು ರೈಲು ಸಂಪರ್ಕ ಇದ್ದರೂ ಬಹಳಷ್ಟು ಜನ ಈಗಲೂ ರಸ್ತೆಯನ್ನೇ ಅವಲಂಬಿಸಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಅತಿ ಹೆಚ್ಚು ಸಂಖ್ಯೆಯಲ್ಲಿ ಕೆಎಸ್ಆರ್‌ಟಿಸಿ ವೋಲ್ವೋ, ರಾಜಹಂಸ ಬಸ್ಸುಗಳು ಈ ರಸ್ತೆಯಲ್ಲಿ ಸಂಚರಿಸುತ್ತಿವೆ. ಸರ್ಕಾರಿ ಬಸ್ಸಿಗೆ ಪೈಪೋಟಿ ಎನ್ನುವಂತೆ ಖಾಸಗಿ ಬಸ್ಸುಗಳು ಸಂಚರಿಸುತ್ತಿವೆ. ಅತಿ ಹೆಚ್ಚು ಆದಾಯ ತರುವ ಮಾರ್ಗಗಳು ಬಂದ್ ಆಗಿರುವ ಕಾರಣ ಸರ್ಕಾರದ ಜೊತೆ ಖಾಸಗಿ ಕಂಪೆನಿಗಳಿಗೂ ದಿನಕ್ಕೆ ಲಕ್ಷಾಂತರ ರೂ. ನಷ್ಟವಾಗುತ್ತಿದೆ.

2. ಈ ಹಿಂದೆ ಚಾರ್ಮಾಡಿ ಘಾಟಿ ಮೂಲಕ ಮಂಗಳೂರನ್ನು ಬಸ್ಸಿನಲ್ಲಿ ಪ್ರಯಾಣಿಸಿದರೆ 8, 9 ಗಂಟೆಯಲ್ಲಿ ತಲುಪಬಹುದಾಗಿತ್ತು. ಆದರೆ ಈಗ ಬೆಂಗಳೂರಿನಿಂದ ರಾತ್ರಿ 8 ಗಂಟೆಗೆ ಹೊರಟರೂ ಮಂಗಳೂರನ್ನು 9 ಗಂಟೆಯಲ್ಲಿ ತಲುಪಬಹುದು ಎನ್ನುವ ಖಾತರಿ ಇಲ್ಲ. ಅದರಲ್ಲೂ ಅಪಘಾತ, ವಾಹನಗಳು ಪಲ್ಟಿಯಾದರೆ ದಿನಗಟ್ಟಲೇ ಈ ರಸ್ತೆಯಲ್ಲಿ ಸಂಚಾರ ಬಂದ್ ಆಗುತ್ತಿದೆ.

3. ಘಾಟಿ ರಸ್ತೆಗಳು ಬಂದ್ ಆದರೆ ಜನರ ಪ್ರಯಾಣಕ್ಕೆ ಮಾತ್ರ ಹೊಡೆತ ಬೀಳುವುದಿಲ್ಲ. ವ್ಯಾಪಾರಿಗಳ ಮೇಲೂ ಭಾರೀ ಹೊಡೆತ ಬೀಳುತ್ತದೆ. ಉದಾಹರಣೆಗೆ ಸಂಪಾಜೆ ಘಾಟಿ ಬಂದ್ ಆಗಿರುವುದರಿಂದ ಮಡಿಕೇರಿ, ಸುಳ್ಯ, ಪುತ್ತೂರು ತಾಲೂಕಿನ ಹೋಟೆಲ್ ಹಣ್ಣಿನ ಅಂಗಡಿ, ಜ್ಯೂಸ್… ಇತ್ಯಾದಿಗಳನ್ನು ಮಾರಾಟ ಮಾಡುವ ವ್ಯಾಪಾರಿಗಳ ಮೇಲೂ ಪರಿಣಾಮ ಬೀರುತ್ತದೆ. ಮಳೆಗಾಲದಲ್ಲೂ ಹೇಗೂ ವ್ಯಾಪಾರ ಕಡಿಮೆ ಇರುತ್ತದೆ. ಬೇಸಿಗೆಯಲ್ಲಿ ರಸ್ತೆಗಳು ಬಂದ್ ಆದರೆ ಅವರ ಜೀವನೋಪಾಯಕ್ಕೂ ಕಷ್ಟವಾಗುತ್ತದೆ.

4. ವ್ಯಾಪಾರಕ್ಕೆ ಕಡೆ ರಸ್ತೆ ಬಂದ್ ಹೊಡೆತ ಕೊಟ್ಟರೆ ಇನ್ನೊಂದು ಕಡೆ ಘಟ್ಟ ಪ್ರದೇಶಗಳಿಗೆ ಸರಕು ಸಾಗಣೆಕೆಗೂ ಕಷ್ಟವಾಗುತ್ತದೆ. ದೇಶದ 9ನೇ ಅತಿ ದೊಡ್ಡ ಬಂದರು ಎನ್ನುವ ಹೆಗ್ಗಳಿಕೆ ಮಂಗಳೂರು ಪಾತ್ರವಾಗಿದೆ. ಈ ಬಂದರಿಗೆ ರೈಲಿಗಿಂತ ಹೆಚ್ಚಾಗಿ ಸರಕುಗಳು ರಸ್ತೆಯ ಮೂಲಕವೇ ಬರುತ್ತಿದೆ. ಬಂದರಿನ ಜೊತೆಗೆ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್(ಎಂಆರ್‌ಪಿಎಲ್) ಘಟಕ ಮಂಗಳೂರಿನಲ್ಲಿದೆ. ಉದಾಹರಣೆಗೆ ಈಗ ಕೊಡಗು ಜಿಲ್ಲೆಗೆ ಎಂಆರ್‌ಪಿಎಲ್ ನಿಂದ ತೈಲವನ್ನು ಕಳುಹಿಸುವುದೇ ದುಸ್ತರವಾಗಿದೆ. ಸಂಪಾಜೆ ಘಾಟಿ ಮೂಲಕ ಮಡಿಕೇರಿಗೆ 120 ಕಿ.ಮೀ ಕ್ರಮಿಸಿ ಟ್ಯಾಂಕರ್ ತಲುಪುತ್ತಿದ್ದರೆ ಈಗ 250ಕ್ಕೂ ಹೆಚ್ಚು ಕಿ.ಮೀ ಕ್ರಮಿಸಬೇಕಿದೆ.

5. ದಕ್ಷಿಣ ಕನ್ನಡದ ಪ್ರತಿ ತಾಲೂಕು, ಗ್ರಾಮಗಳಲ್ಲಿ ವಾರಕ್ಕೊಮ್ಮೆ ಸಂತೆ ನಡೆಯುತ್ತಿದೆ. ಘಟ್ಟ ಪ್ರದೇಶಗಳಲ್ಲಿ ಬೆಳೆದಿರುವ ತರಕಾರಿಗಳನ್ನು ರೈತರು ಇಲ್ಲಿ ತಂದು ಮಾರಾಟ ಮಾಡುತ್ತಾರೆ. ಈಗ ರಸ್ತೆ ಸಂಪರ್ಕವೇ ಬಂದ್ ಆಗಿದ್ದರಿಂದ ರೈತರ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ.

6. ಎರಡು ಘಾಟಿ ರಸ್ತೆಗಳಲ್ಲಿ ಸಂಚರಿಸುವ ವಾಹನಗಳು ಈಗ ಚಾರ್ಮಾಡಿ ಮೂಲಕವೇ ಸಂಚರಿಸುತ್ತಿದೆ. ಒಂದು ವೇಳೆ ವಾಹನಗಳ ಒತ್ತಡವನ್ನು ತಾಳಲಾರದೇ ಚಾರ್ಮಾಡಿಯ ರಸ್ತೆಯಲ್ಲೂ ಭೂ ಕುಸಿತವಾದರೆ ಸಂಪರ್ಕ ಮತ್ತಷ್ಟು ದುಸ್ತರವಾಗುತ್ತದೆ.

7. ಈಗಾಗಲೇ ಇರುವ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಸಂದರ್ಭದಲ್ಲಿ ಕೆಲವು ಕಡೆ ಮರಗಳನ್ನು ಕಡಿಯಬೇಕಾದಿತು. ಒಂದು ವೇಳೆ ಪರ್ಯಾಯ ರಸ್ತೆ ಇದ್ದು ಮತ್ತೊಂದು ರಸ್ತೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರೆ ಅದು ತಪ್ಪಾಗುತ್ತದೆ. ಆದರೆ ಇಲ್ಲಿ ಯಾವುದೇ ಪರ್ಯಾಯ ರಸ್ತೆ ಇಲ್ಲದೇ ಇರುವ ಕಾರಣ ಅರಣ್ಯನಾಶವಾಗುತ್ತದೆ ಎನ್ನುವ ಕಾರಣ ನೀಡಿದರೆ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ.

8. ರಸ್ತೆ ಸಂಪರ್ಕ ಬಂದ್ ಆದರೆ ವಿಶೇಷವಾಗಿ ಜಿಲ್ಲೆಗಳ ಗಡಿಯಲ್ಲಿರುವ ಮಂದಿ ಬಹಳ ಕಷ್ಟವನ್ನು ಅನುಭವಿಸುತ್ತಾರೆ. ಉದಾಹರಣೆಗೆ ಸಂಪಾಜೆ, ಚೆಂಬು, ಪೆರಾಜೆ ಗ್ರಾಮದ ಜನತೆ ವಾಣಿಜ್ಯ ಕೆಲಸಕ್ಕೆ ಸಂಬಂಧಿಸಿದಂತೆ ಸುಳ್ಯ ತಾಲೂಕನ್ನೇ ಅವಲಂಬಿಸಿದರೆ ಸರ್ಕಾರಿ ಕೆಲಸಕ್ಕೆ ಮಡಿಕೇರಿಗೆ ಹೋಗುವುದು ಅನಿವಾರ್ಯ. ಅದರಲ್ಲೂ ವಿದ್ಯಾರ್ಥಿಗಳಿಗೆ ಮತ್ತು ಪ್ರತಿನಿತ್ಯ ಉದ್ಯೋಗಕ್ಕೆ ತೆರಳುವ ಮಂದಿ ಪಾಡು ಹೇಳತೀರದಾಗಿದೆ.

8. ಕೊನೆಯದಾಗಿ ಯಾವುದೇ ಅಭಿವೃದ್ಧಿ ಕೆಲಸ ನಡೆಯಬೇಕಾದರೆ ಅರಣ್ಯ ನಾಶವಾಗುತ್ತದೆ. ಅದರಲ್ಲೂ ರಸ್ತೆ ಸಂಪರ್ಕದಂತಹ ವಿಚಾರಗಳು ಬಂದಾಗ ಅನಿವಾರ್ಯವಾಗಿ ಮೊದಲ ಆದ್ಯತೆಯನ್ನು ರಸ್ತೆಗೆ ನೀಡಬೇಕಾಗುತ್ತದೆ. ಅರಣ್ಯನಾಶವನ್ನು ತಡೆಗಟ್ಟಬೇಕಾದರೆ ಮೊದಲು ಅರಣ್ಯ ಇಲಾಖೆಗೆ ಖಡಕ್ ಅಧಿಕಾರಿಗಳನ್ನು ನೇಮಿಸಿ ಟಿಂಬರ್ ಮಾಫಿಯಾವನ್ನು ತಡೆಗಟ್ಟಬೇಕು. ಟಿಂಬರ್ ಮಾಫಿಯಾ ನಡೆಯಬೇಕಾದರೆ ಗ್ರಾಮಸ್ಥರ ಸಾಥ್ ಇದ್ದೇ ಇರುತ್ತದೆ. ಹೇಗೆ ವ್ಯಕ್ತಿಗಳು ಖಾಸಗಿ ಆಸ್ತಿಯನ್ನು ರಕ್ಷಣೆ ಮಾಡುತ್ತಾರೋ ಅದೇ ರೀತಿಯಾಗಿ ಅರಣ್ಯವು ನನ್ನ ಆಸ್ತಿ. ಅದನ್ನು ನಾನು ರಕ್ಷಿಸುತ್ತೇನೆ ಎಂದು ಅರಣ್ಯದ ಬುಡದಲ್ಲಿರುವ ಜನ ಪಣ ತೊಡುವುದಿಲ್ಲವೋ ಅಲ್ಲಿಯವರೆಗೂ ಈ ಮಾಫಿಯಾವನ್ನು ತಡೆಗಟ್ಟಲು ಸಾಧ್ಯವಿಲ್ಲ.

 

 

 

 

Share This Article
1 Comment

Leave a Reply

Your email address will not be published. Required fields are marked *