ಮಂಡ್ಯ: ಲೋಕಸಭಾ ಉಪಚುನಾವಣೆಯ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸಭೆಯಲ್ಲಿ ಕೈ ಕಾರ್ಯಕರ್ತರೇ ಬಿಜೆಪಿಗೆ ಜೈಕಾರ ಕೂಗುವ ಮೂಲಕ ಜೆಡಿಎಸ್ ಮೈತ್ರಿಗೆ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.
ಲೋಕಸಭಾ ಉಪ ಚುನಾವಣಾ ನಿಮಿತ್ತ ಕಾಂಗ್ರೆಸ್ಸಿನ ಮಾಜಿ ಶಾಸಕ ರಮೇಶ್ ಬಾಬು ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಹಮ್ಮಿಕೊಂಡಿದ್ದರು. ಸಭೆಯಲ್ಲಿ ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡರಿಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಿಕೊಂಡರು. ಈ ವೇಳೆ ಏಕಾಏಕಿ ಕೈ ಕಾರ್ಯಕರ್ತರು ರಮೇಶ್ ಬಾಬು ವಿರುದ್ಧ ಮುಗಿಬಿದ್ದು, ಜೆಡಿಎಸ್ ಜೊತೆಗಿನ ಮೈತ್ರಿಯನ್ನು ತೀವ್ರವಾಗಿ ವಿರೋಧಿಸಿ, ಸಭೆಯಲ್ಲೇ ಬಿಜೆಪಿ ಪರ ಘೋಷಣೆಯನ್ನು ಕೂಗಿದರು.
ಸಭೆಗೆ ಆಗಮಿಸಿದ್ದ ಕೈ ಮುಖಂಡರು, ಸ್ಥಳೀಯ ಕಾರ್ಯಕರ್ತರನ್ನು ಸಮಾಧಾನಕ್ಕೆ ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಕೈ ಕಾರ್ಯಕರ್ತರು ವಾಗ್ವಾದ ತಾರಕಕ್ಕೇರುತ್ತಿದ್ದಂತೆ ಎಚ್ಚೆತ್ತ ಮುಖಂಡರು ಪೊಲೀಸರು ಮೊರೆ ಹೋದರು. ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಪರಿಸ್ಥಿತಿ ಶಾಂತ ರೂಪಕ್ಕೆ ತಿರುಗಿತು.
ಮೊದಲಿನಿಂದಲೂ ಕಿತ್ತಾಡಿಕೊಂಡು ಬಂದಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಒಂದಾಗಿ ಚುನಾವಣೆಯನ್ನು ಎದುರಿಸುವ ಮನಸ್ಥಿತಿಯಲ್ಲಿ ಇರಲಿಲ್ಲ. ಅಲ್ಲದೇ ಸ್ಥಳೀಯವಾರು ಕೈ ಕಾರ್ಯಕರ್ತರಲ್ಲಿ ಜೆಡಿಎಸ್ ಜೊತೆ ಮೈತ್ರಿಗೆ ತೀವ್ರ ವಿರೋಧ ವ್ಯಕ್ತವಾಗಿದ್ದು ಇಂದು ನಾಯಕರ ನಡೆಸಿದ ಸಭೆಯಲ್ಲಿ ಬಹಿರಂಗವಾಗಿಯೇ ಅಸಮಾಧಾನ ಸ್ಫೋಟಗೊಂಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv