ಕಾರ್ಯಕ್ರಮದಲ್ಲಿ ಸಿಎಂ ಎದುರೇ ಡಿಕೆ ಸುರೇಶ್‌, ಅಶ್ವಥ್‌ ನಾರಾಯಣ ನಡುವೆ ಜಟಾಪಟಿ

Public TV
2 Min Read

ರಾಮನಗರ: ಮುಖ್ಯಮಂತ್ರಿಗಳ ಎದುರೇ ಕಾರ್ಯಕ್ರಮದಲ್ಲೇ ಕಾಂಗ್ರೆಸ್‌ ಸಂಸದ ಡಿ.ಕೆ.ಸುರೇಶ್‌ ಹಾಗೂ ಬಿಜೆಪಿಯ ಸಚಿವರ ನಡುವೆ ಜಟಾಪಟಿಯಾಗಿದೆ. ಸಿಎಂ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ಸ್ಥಳೀಯರ ನಾಯಕರನ್ನು ಕಡೆಗಣಿಸಲಾಗಿದೆ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿ ವೇದಿಕೆಯಲ್ಲೇ ಗಲಾಟೆ ಮಾಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ರಾಮನಗರ-ಮಾಗಡಿ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಮಾಗಡಿ ಒಂದೇ ಕ್ಷೇತ್ರಕ್ಕೆ 195 ಕೋಟಿ ರೂಪಾಯಿ ಹಣದ ಅಭಿವೃದ್ಧಿ ಕಾಮಗಾರಿ ಹಾಗೂ ರಾಮನಗರ, ಕನಕಪುರ, ಚನ್ನಪಟ್ಟಣಕ್ಕೆ 95 ಕೋಟಿ ರೂಪಾಯಿ ಹಣದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. ಈ ವೇಳೆ ರಾಮನಗರದ ಜಿಲ್ಲಾಧಿಕಾರಿ ಕಚೇರಿ ಆವರಣದ ಕೆಂಪೇಗೌಡ – ಅಂಬೇಡ್ಕರ್ ಪುತ್ಥಳಿ ಅನಾವರಣಗೊಳಿಸಿದರು. ಇದನ್ನೂ ಓದಿ: ಹಿಂದೂ ದೇವಾಲಯಗಳು ಸ್ವತಂತ್ರವಾದ್ರೆ ಒಂದಿಷ್ಟು ಅಭಿವೃದ್ಧಿಗೊಳ್ಳುತ್ತದೆ: ಕೋಟ ಶ್ರೀನಿವಾಸ ಪೂಜಾರಿ

ರಾಮನಗರ ಡಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ.ಸುರೇಶ್‌, ಎಂಎಲ್‌ಸಿ ಎಸ್.ರವಿ ಬರುವ ಪಾಲ್ಗೊಳ್ಳುವ ಮುನ್ನವೇ ಡಾ.ಬಿ.ಆರ್.ಅಂಬೇಡ್ಕರ್‌ ಅವರ ಪ್ರತಿಮೆ ಅನಾವರಣಗೊಳಿಸಿದ ಬಗ್ಗೆ ಕಾಂಗ್ರೆಸ್‌ ಕಾರ್ಯಕರ್ತರು ಗಲಾಟೆ ತೆಗೆದರು.

ಸ್ಥಳೀಯ ಪ್ರತಿನಿಧಿಗಳು ಬರುವ ಮೊದಲೇ ಪ್ರತಿಮೆ ಅನಾವರಣಗೊಳಿಸಿದ ಸಿಎಂ ನಡೆಯನ್ನು ಸಂಸದ ಡಿ.ಕೆ.ಸುರೇಶ್‌ ವಿರೋಧಿಸಿದರು. ಈ ವೇಳೆ ಕಾಂಗ್ರೆಸ್‌ ಕಾರ್ಯಕರ್ತರು, ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ನಂತರ ಸಿಎಂ ಕಾರ್ಯಕ್ರಮದಲ್ಲಿ ಡಿ.ಕೆ.ಸುರೇಶ್‌ ಪರ ಜೈಕಾರ ಕೂಗುವ ಮೂಲಕ ಗದ್ದಲ ಸೃಷ್ಟಿಸಲಾಯಿತು. ಅಲ್ಲದೇ ಕಾಂಗ್ರೆಸ್‌ ಕಾರ್ಯಕರ್ತರು ಸಿಎಂಗೆ ಧಿಕ್ಕಾರ ಕೂಗಿದರು. ಇದನ್ನೂ ಓದಿ: ಪಾದಯಾತ್ರೆ ಕಾಂಗ್ರೆಸ್ಸಿನ ಅತ್ಯಂತ ಹೀನಾಯ ರಾಜಕಾರಣ: ಕಟೀಲ್

ಸಿಎಂ ವೇದಿಕೆಗೆ ಬರುತ್ತಿದಂತೆ ಕಪ್ಪು ಪಟ್ಟಿ ಪ್ರದರ್ಶಿಸಿ, ಅಂಬೇಡ್ಕರ್ ಪ್ರತಿಮೆಗೆ ಸಂಸದ ಡಿ.ಕೆ.ಸುರೇಶ್ ಅವರಿಂದ ಪುಷ್ಪಾರ್ಚನೆ ಮಾಡಿಸಿಲ್ಲ ಎಂದು ಧಿಕ್ಕಾರ ಕೂಗಿದರು. ಇದು ಸರ್ಕಾರಿ ಕಾರ್ಯಕ್ರಮವಲ್ಲ ಆರ್‌ಎಸ್‌ಎಸ್‌ ಕಾರ್ಯಕ್ರಮ ಎಂದು ಆಕ್ರೋಶ ಹೊರಹಾಕಿದರು. ಗದ್ದಲಕ್ಕೆ ಅವಕಾಶ ನೀಡಬಾರದು ಎಂದು ಕಾರ್ಯಕರ್ತರ ಮನವೊಲಿಸಲು ಪೊಲೀಸರು ಮುಂದಾದರು. ಪೊಲೀಸರ ಮಾತಿಗೂ ಜಗ್ಗದೇ ದಲಿತ ಸಂಘಟನೆಗಳ ಮುಖಂಡರು ಸಿಎಂ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ನಡೆಸಿದರನ್ನು ಸಮಾಧಾನ ಪಡಿಸಿದ ಸಂಸದ ಡಿ.ಕೆ.ಸುರೇಶ್‌, ಯಾರು ಕೂಡ ಸಭೆಗೆ ಅಗೌರವ ತರಬೇಡಿ. ನಿಮ್ಮ ನೋವನ್ನು ಮುಖ್ಯಮಂತ್ರಿಗಳಿಗೆ ತಿಳಿಸುತ್ತೇನೆ. ಇದು ಕಾಂಗ್ರೆಸ್ ಕಾರ್ಯಕ್ರಮ ಅಲ್ಲ ಎಂದು ಗೊಂದಲ ಸೃಷ್ಟಿಸಬೇಡಿ ಎಂದು ಮನವಿ ಮಾಡಿದರು. ನಂತರ ಸಿಎಂ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಿಎಂಗೆ ಸಚಿವರಾದ ಡಾ.ಕೆ.ಸುಧಾಕರ್, ಅಶ್ವಥ್‌ ನಾರಾಯಣ, ಬೈರತಿ ಬಸವರಾಜ್, ಸಂಸದ ಡಿ.ಕೆ.ಸುರೇಶ್, ಶಾಸಕಿ ಅನಿತಾ ಕುಮಾರಸ್ವಾಮಿ ಸಾಥ್ ನೀಡಿದರು.

ಈ ವೇಳೆ ಮತ್ತೆ ಮಹಿಳಾ ದಲಿತ ಸಂಘಟನೆಗಳ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಲು ಮುಂದಾದರು. ಈ ವೇಳೆ ಮಾತನಾಡಿದ ಅಶ್ವಥ್‌ ನಾರಾಯಣ, ಏಯ್ ಯಜಮಾನ ಯಾಕ್ರೋ ಜಿಲ್ಲೆಯ ಗೌರವ ತೆಗೀತಿರಾ. ನಾವೆಲ್ಲಾ ನಿಮ್ಮ ಜೊತೆಗೆ ಇದ್ದೇವೆ. ಯಾರೂ ಮಾತನಾಡಬೇಡಿ ಎಂದು ಮನವಿ ಮಾಡಿದರು. ಸಿಎಂ ಸಮ್ಮುಖದಲ್ಲೇ ಕೆಲಕಾಲ ಗಲಾಟೆ ನಡೆಯಿತು. ನಂತರ ಎಲ್ಲರ ಮನವೊಲಿಸಿ ವಾತಾವರಣ ತಿಳಿಗೊಳಿಸಿ ಕಾರ್ಯಕ್ರಮ ನಡೆಸಲಾಯಿತು.

Share This Article
Leave a Comment

Leave a Reply

Your email address will not be published. Required fields are marked *