ಬಿಎಸ್‍ವೈ ಪ್ರಮಾಣ ವಚನ: ಗೋವಾ, ಬಿಹಾರ, ಮೇಘಾಲಯ, ಮಣಿಪುರದಲ್ಲಿ ಬಿಜೆಪಿಗೆ ಕಂಪನ!

Public TV
2 Min Read

ಪಣಜಿ: ರಾಷ್ಟ್ರ ರಾಜಕೀಯದಲ್ಲಿ ಈಗ ಭಾರೀ ಸುದ್ದಿ ಮಾಡುತ್ತಿರುವ ಕರ್ನಾಟಕ ರಾಜಕಾರಣ ಬಿಜೆಪಿ ತಂತ್ರಕ್ಕೆ ತಿರುಗೇಟು ನೀಡಲು ಗೋವಾ ಕಾಂಗ್ರೆಸ್ ಮುಂದಾಗಿದೆ.

ಗೋವಾದಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸರಳ ಬಹುಮತ ಇಲ್ಲದ ಕಾರಣ ಬಿಜೆಪಿ ಇತರೇ ಪಕ್ಷಗಳನ್ನು ಮನವೊಲಿಸಿತ್ತು. ಇದರಿಂದಾಗಿ ಕಾಂಗ್ರೆಸ್ ಸರ್ಕಾರದ ರಚನೆ ಅವಕಾಶವನ್ನು ಕಳೆದುಕೊಂಡಿತ್ತು.

ಸದ್ಯ ಕರ್ನಾಟಕದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಕಾರಣ ಗವರ್ನರ್ ಬಹುಸಂಖ್ಯೆ ಪಡೆದ ಬಿಜೆಪಿ ಪಕ್ಷಕ್ಕೆ ಅವಕಾಶ ನೀಡಿದ್ದಾರೆ. ಅದ್ದರಿಂದ ತಮಗೂ ಸರ್ಕಾರ ರಚನೆಗೆ ಅವಕಾಶ ನೀಡಬೇಕು ಎಂದು ಮನವಿ ಸಲ್ಲಸಲು ಮುಂದಾಗಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಗೋವಾ ಕಾಂಗ್ರೆಸ್ ಪಕ್ಷದ ಮುಖಂಡ ಚೆಲ್ಲಾ ಕುಮಾರ್, ನಾಳೆಯೇ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಯ ಕುರಿತು ಮನವಿ ಸಲ್ಲಿಸಲಾಗುವುದು. ಅಲ್ಲದೇ ಒಂದು ವೇಳೆ ಗವರ್ನರ್ ಶಾಸಕರ ಸಂಖ್ಯೆಯನ್ನು ಪರಿಗಣಿಸಬೇಕಾದರೆ ಪೇರೆಡ್ ಸಹ ನಡೆಸಲಾಗುವುದು ಎಂದು ಹೇಳಿದ್ದಾರೆ. ಈ ಮೂಲಕ ಬಿಜೆಪಿಗೆ ಗೋವಾದಲ್ಲಿ ಟಾಂಗ್ ನೀಡಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ.

ಅಂದಹಾಗೇ ಗೋವಾ ವಿಧಾನಸಭಾ ಸಭೆ ಒಟ್ಟು 40 ಸ್ಥಾನಗಳನ್ನು ಹೊಂದಿದೆ. 2017 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 17, ಬಿಜೆಪಿ 13, ಎಂಎಜಿ 3, ಎಫ್‍ಪಿ 3, ಐಎನ್‍ಡಿ 3 ಹಾಗೂ ಇತರೇ ಒಂದು ಸ್ಥಾನ ಪಡೆದಿದ್ದರು. ಕಾಂಗ್ರೆಸ್ 17 ಸ್ಥಾನ ಪಡೆದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರು, 13 ಕ್ಷೇತ್ರಗಳಲ್ಲಿ ಜಯ ಪಡೆದಿದು ಎರಡನೇ ಸ್ಥಾನ ಪಡೆದಿದ್ದ ಬಿಜೆಪಿ, ಗೋವಾ ಫವಾರ್ಡ್ ಪಾರ್ಟಿ (ಜಿಎಫ್‍ಪಿ) ಮತ್ತು ಎಂಜಿಪಿ ಪಕ್ಷಗಳ ನೆರವಿನಿಂದ ಬಹುಮತ ಪಡೆದು ಸರ್ಕಾರ ರಚಿಸಿತ್ತು. ಇತರೇ 3 ಕ್ಷೇತ್ರಗಳಲ್ಲಿ ಜಯಗಳಿಸಿದ್ದ ಪಕ್ಷೇತರರು ಸಹ ಬಿಜೆಪಿಗೆ ಬೆಂಬಲ ನೀಡಿದ್ದರು. ಗೋವಾ ವಿಧಾನಸಭಾ ಮ್ಯಾಜಿಕ್ ನಂಬರ್ 20 ಸ್ಥಾನಗಳನ್ನು ಗಡಿದಾಟಿ ಬಿಜೆಪಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದೆ.

ಸದ್ಯ ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರು ಆನಾರೋಗ್ಯ ಸಂಬಂಧ ಅಮೆರಿಕಾದಲ್ಲಿ ಚಿಕಿತ್ಸೆಗೆ ತೆರಳಿದ್ದಾರೆ. ಇದರಿಂದ ರಾಜ್ಯದಲ್ಲಿ ಆಡಳಿತ ಕುಸಿತ ಕಂಡಿದೆ. ಜನರಿಗೆ ಉತ್ತಮ ಸರ್ಕಾರದ ಆಡಳಿತ ನೀಡಲು ಕಾಂಗ್ರೆಸ್ ಗೆ ಅವಕಾಶ ನೀಡಬೇಕೆಂಬ ವಾದವನ್ನು ಕೈ ಮುಂಖಡರು ಮುಂದಿಟ್ಟಿದ್ದಾರೆ.

ಕರ್ನಾಟಕ ರಾಜ್ಯಪಾಲರ ನಿರ್ಧಾರದ ಕುರಿತು ಪ್ರತಿಕ್ರಿಯೆ ನೀಡಿರುವ ಬಿಹಾರ ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ಮುಖಂಡ, ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜಸ್ವಿ ಯಾದವ್, ನಾವು ಸಹ ಬಿಹಾರ ರಾಜ್ಯಪಾಲರನ್ನು ಭೇಟಿ ಮಾಡಲಿದ್ದು, ನಮಗೂ ಸರ್ಕಾರ ರಚಿಸಲು ಅವಕಾಶ ನೀಡುವಂತೆ ಮನವಿ ಮಾಡುವುದಾಗಿ ಹೇಳಿದ್ದಾರೆ. ಕರ್ನಾಟಕದಲ್ಲಿ ನಡೆಯುತ್ತಿರುವ ಪ್ರಜಾಪ್ರಭುತ್ವದ ವಿರೋಧಿ ನೀತಿಯ ವಿರುದ್ಧ ರಾಜ್ಯಾದ್ಯಂತ ಒಂದು ದಿನದ ಪ್ರತಿಭಟನೆ ನಡೆಸಲು ಕರೆ ನೀಡಿದ್ದಾಗಿ ತಿಳಿಸಿದ್ದಾರೆ.

2015ರ ಬಿಹಾರ ವಿಧಾನಸಭೆಯ ಚುನಾವಣೆಯಲ್ಲಿ ಮಹಾಘಟ್‍ಬಂದನ್ ನಡೆದ ಬಳಿಕ ಆರ್ ಜೆಡಿ, ಕಾಂಗ್ರೆಸ್ ಹಾಗೂ ಜೆಡಿ(ಯು) ಪಕ್ಷಗಳು ಸಮ್ಮಿಶ್ರ ಸರ್ಕಾರ ರಚಿಸಿದ್ದವು, ಆದ್ರೆ ಕೆಲ ಅವಧಿಯ ಬಳಿಕ ನಿತೀಶ್ ಕುಮಾರ್ ಮೈತ್ರಿಕೂಟದಿಂದ ಹೊರಬಂದು ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚಿಸಿದ್ದರು.

ಇದರೊಂದಿಗೆ ಮಣಿಪುರ ಮತ್ತು ಮೇಘಾಲಯದಲ್ಲೂ ಕಾಂಗ್ರೆಸ್ ನಾಯಕರು ತಮಗೆ ಸರ್ಕಾರ ರಚಿಸಲು ಅನುಮತಿ ನೀಡಬೇಕೆಂದು ರಾಜ್ಯಪಾಲರಲ್ಲಿ ಮನವಿ ಮಾಡಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *