ಮ್ಯಾಕ್ರನ್ ಹೊಗಳಿದ ಬೆನ್ನಲ್ಲೇ ಯುಪಿಐ ಪರಿಚಯಿಸಿದ್ದೇ ನಾವು ಎಂದ ಕಾಂಗ್ರೆಸ್‌

3 Min Read

ನವದೆಹಲಿ:ಕೃತಕ ಬುದ್ಧಿಮತ್ತೆ ಶೃಂಗಸಭೆಯಲ್ಲಿ ಭಾರತದ ಯುಪಿಐ (UPI) ವ್ಯವಸ್ಥೆಯನ್ನು ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ (Emmanuel Macron) ಹಾಡಿ ಹೊಗಳಿದ ಬೆನ್ನಲ್ಲೇ ಈಗ ಕಾಂಗ್ರೆಸ್‌ ನಾಯಕ ಪವನ್ ಖೇರಾ (Pawan Khera) ಡಿಜಿಟಲ್ ಪೇಮೆಂಟ್‌ಗೆ ಶಿಫಾರಸು ಮಾಡಿದ್ದೇ ನಾವು ಎಂದು ಹೇಳಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಅವರು, ಗ್ರೂಪ್ ಪ್ರಾಜೆಕ್ಟ್‌ನಲ್ಲಿ ಒಬ್ಬ ಸಹಪಾಠಿ ಇರುತ್ತಾನೆ. ಆತ ಯಾವುದೇ ಕೆಲಸ ಮಾಡುವುದಿಲ್ಲ. ಆದರೆ ಆತ ಎಲ್ಲಾ ಕ್ರೆಡಿಟ್ ತೆಗೆದುಕೊಳ್ಳುತ್ತಾನೆ ಎಂದು ಎಕ್ಸ್‌ನಲ್ಲಿ ಬರೆದು ಮೋದಿಗೆ (Narendra Modi) ಟಾಂಗ್‌ ಕೊಟ್ಟಿದ್ದಾರೆ.

ಪ್ರಮುಖ ವಿಚಾರಗಳ ಬಗ್ಗೆ ಯೋಚಿಸುವ ಸಾಮರ್ಥ್ಯವಿಲ್ಲದ ಮೋದಿ ರಿಬ್ಬನ್‌ಗಳನ್ನು ಕತ್ತರಿಸುವುದು, ಹಾಸ್ಯಾಸ್ಪದ ಸಂಕ್ಷಿಪ್ತ ರೂಪಗಳಲ್ಲಿ ಮಾತನಾಡುವುದು, ಕಾಂಗ್ರೆಸ್‌ ದೂರಿ ಕ್ರೆಡಿಟ್ ಕದಿಯುವುದರಲ್ಲಿ ಸಂತೋಷಪಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ಪೋಸ್ಟ್‌ನಲ್ಲಿ ಏನಿದೆ?
ಯುಪಿಐ ಆರಂಭಿಕ ಪರಿಕಲ್ಪನೆಯು 2012–2013ರಲ್ಲಿ ಆಗಿನ ವಿಶಿಷ್ಟ ಗುರುತಿನ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ನಂದನ್ ನಿಲೇಕಣಿ ನೇತೃತ್ವದ ನಡೆಯಿತು. ಯುಪಿಎ ಸರ್ಕಾರ ನೇಮಿಸಿದ ಸಮಿತಿಯು ಡಿಸೆಂಬರ್ 2013 ರಲ್ಲಿ ಮೊಬೈಲ್ ಆಧಾರಿತ ಡಿಜಿಟಲ್ ಪಾವತಿ ಮೂಲಸೌಕರ್ಯವನ್ನು ಶಿಫಾರಸು ಮಾಡಿತ್ತು. ಇದನ್ನೂ ಓದಿ: ಜಾಗತಿಕ AI ಶೃಂಗದಲ್ಲಿ ಶರ್ಟ್‌ ಬಿಚ್ಚಿ ಪ್ರತಿಭಟಿಸಿದ ಯುವ ಕಾಂಗ್ರೆಸ್‌ ಕಾರ್ಯಕರ್ತರು

2010 ರಲ್ಲಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ(NPCI) ಅಭಿವೃದ್ಧಿಪಡಿಸಿದ ತಕ್ಷಣದ ಪಾವತಿ ಸೇವೆಯು ಇದಕ್ಕೆ ತಾಂತ್ರಿಕ ಬೆನ್ನೆಲುಬು ಹಾಕಿತ್ತು. ಎನ್‌ಪಿಸಿಐ 2013-2014 ರಲ್ಲಿ UPI ಆಗುವ ಕೋರ್ ಆರ್ಕಿಟೆಕ್ಚರ್ ಅನ್ನು ವಿನ್ಯಾಸಗೊಳಿಸಲು ಪ್ರಾರಂಭಿಸಿತು ಎಂದು ಬರೆದಿದ್ದಾರೆ.

ಮ್ಯಾಕ್ರನ್‌ ಹೇಳಿದ್ದೇನು?
ಹತ್ತು ವರ್ಷಗಳ ಹಿಂದೆ ಮುಂಬೈನ ಬೀದಿ ಬದಿಯ ವ್ಯಾಪಾರಿಯೊಬ್ಬರು ಬ್ಯಾಂಕ್ ಖಾತೆ ತೆರೆಯಲು ಸಾಧ್ಯವಾಗುತ್ತಿರಲಿಲ್ಲ. ವಿಳಾಸವಿರಲಿಲ್ಲ, ದಾಖಲೆಗಳು ಇರಲಿಲ್ಲ. ಆದರೆ ಇಂದು ಅದೇ ವ್ಯಾಪಾರಿ ತಮ್ಮ ಫೋನ್‌ನ್‌ ಮೂಲಕ ಹಣವನ್ನು ಸ್ವೀಕರಿಸುತ್ತಿದ್ದಾರೆ. ಭಾರತವು ಬೇರೆ ಯಾವುದೇ ರಾಷ್ಟ್ರವು ಸಾಧಿಸಲಾಗದಂತಹ ಸಾಧನೆ ಮಾಡಿದ್ದು 1.4 ಶತಕೋಟಿ ಜನರಿಗೆ ಡಿಜಿಟಲ್ ಗುರುತನ್ನು ನೀಡಿದೆ ಎಂದು ಡಿಜಿಟಲ್ ಪಾವತಿ ವ್ಯವಸ್ಥೆಯಾದ ಯುಪಿಐ(Unified Payments Interface) ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಪವನ್‌ ಖೇರಾ ಹೇಳಿಕೆಗೆ ನೆಟ್ಟಿಗರು ಈ ಹಿಂದೆ ರಾಜ್ಯಸಭೆಯಲ್ಲಿ ಚಿದಂಬರಂ ಮಾಡಿದ ಭಾಷಣದ ವಿಡಿಯೋವನ್ನು ಅಪ್ಲೋಡ್‌ ಮಾಡಿ ತಿರುಗೇಟು ನೀಡುತ್ತಿದ್ದಾರೆ. ಈ ಭಾಷಣದಲ್ಲಿ ಚಿದಂಬರಂ ಹಳ್ಳಿಯಲ್ಲಿರುವ ಸಣ್ಣ ವ್ಯಾಪಾರಿಗಳು ಡಿಜಿಟಲ್‌ ಮೂಲಕ ಹಣವನ್ನು ಕಳುಹಿಸಲು ಸಾಧ್ಯವೇ? ಅಷ್ಟೊಂದು ಮೂಲಸೌಕರ್ಯ ಇದೆಯೇ ಎಂದು ಪ್ರಶ್ನಿಸಿದ್ದರು.

Share This Article