ಮೈತ್ರಿ ನಿಭಾಯಿಸೋದನ್ನು ಬಿಜೆಪಿ ನೋಡಿ ಕಾಂಗ್ರೆಸ್ ಕಲಿಯಬೇಕಿದೆ: ಅಖಿಲೇಶ್ ಯಾದವ್

Public TV
2 Min Read

ಲಕ್ನೋ: ಮೈತ್ರಿಯನ್ನು ಹೇಗೆ ನಿಭಾಯಿಸಬೇಕು ಅಂತ ಬಿಜೆಪಿಯವರಿಗೆ ಚೆನ್ನಾಗಿ ಗೊತ್ತಿದೆ. ಸಮ್ಮಿಶ್ರ ಸರ್ಕಾರವನ್ನು ಹೇಗೆ ಮುನ್ನಡೆಸಬೇಕು ಅನ್ನೋದನ್ನ ಬಿಜೆಪಿ ನೋಡಿ ಕಾಂಗ್ರೆಸ್ ಕಲಿತುಕೊಳ್ಳಬೇಕು ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಮುಖಂಡರಿಗೆ ಯಾವ ಪಕ್ಷದ ಮುಖಂಡರನ್ನು ಯಾವಾಗ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಅಂತ ಗೊತ್ತಿದೆ. ಮೈತ್ರಿ ಸರ್ಕಾರ ಇದ್ದಲ್ಲಿ ಏರಿಳಿತಗಳು ಸಾಮಾನ್ಯ. ಇವೆಲ್ಲದರ ನಡುವೆಯೂ ಬಿಜೆಪಿ ನೇತೃತ್ವ ವಹಿಸಿದವರು ಅದನ್ನೆಲ್ಲ ಸಂಬಾಳಿಸಿಕೊಂಡು, ಸರ್ಕಾರ ನಡೆಸುತ್ತಾರೆ. ಮೈತ್ರಿ ಮಾಡಿಕೊಂಡ ಮೇಲೆ ತನ್ನ ಕೆಲವು ಸೀಟುಗಳನ್ನು ಬಿಟ್ಟು ಕೊಟ್ಟಾದರೂ ಸರ್ಕಾರ ಉಳಿಸಿಕೊಳ್ಳಬೇಕು ಎಂಬ ನೀತಿಯನ್ನು ಬಿಜೆಪಿ ಪಾಲಿಸುತ್ತೆ. ಮಿತ್ರಪಕ್ಷಗಳ ಎಲ್ಲಾ ಒತ್ತಡಗಳನ್ನೂ ಸಹಿಸಿಕೊಂಡು ಮೈತ್ರಿ ಉಳಿಸಿಕೊಳ್ಳುವಲ್ಲಿ ಬಿಜೆಪಿ ಪಕ್ಷ ಯಶಸ್ವಿಯಾಗಿದೆ ಎಂದು ಮಾಧ್ಯಮವೊಂದರ ಸಂದರ್ಶನದಲ್ಲಿ ಅಖಿಲೇಶ್ ಹೇಳಿದ್ದಾರೆ.

ಬಿಜೆಪಿ ಮೈತ್ರಿಯನ್ನು ಹೇಗೆ ಉಳಿಸಿಕೊಳ್ಳುತ್ತದೆ ಅನ್ನೋದಕ್ಕೆ ಬಿಹಾರ ಅತ್ಯುತ್ತಮ ಉದಾಹರಣೆ. 2014ರಲ್ಲಿ ಅಲ್ಲಿ 40 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 22ರಲ್ಲಿ, ಜೆಡಿಯು ಕೇವಲ ಎರಡರಲ್ಲಿ ಗೆದ್ದಿತ್ತು. ಆದರೂ ಈ ಸಲ ಜೆಡಿಯು ಜತೆ ಸಮಾನ ಕ್ಷೇತ್ರಗಳಲ್ಲಿ (50:50) ಸ್ಪರ್ಧಿಸುವ ಒಪ್ಪಂದ ಮಾಡಿಕೊಂಡು ಮೈತ್ರಿ ಮಾಡಲು ನಿರ್ಧರಿಸಿತ್ತು. ಕಾಂಗ್ರೆಸ್‍ನವರು ಬಿಜೆಪಿಯಿಂದ ಮೈತ್ರಿ ಹೇಗೆ ಉಳಿಸಿಕೊಳ್ಳಬೇಕು, ನಿಭಾಯಿಸಬೇಕು ಅಂತ ಕಲಿಯಬೇಕು ಎಂದಿದ್ದಾರೆ.

ಕಾಂಗ್ರೆಸ್ ದೊಡ್ಡ ಪಕ್ಷ. ಅವರು ಇತರೇ ಪಕ್ಷಗಳಿಗೆ ನೆರವಾಗಬೇಕು. ಉದಾಹರಣೆಗೆ, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಹಾಗೂ ದಿಲ್ಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರಿಗೆ ನೆರವು ನೀಡಬೇಕು. ಬಿಜೆಪಿ ವಿರುದ್ಧ ಹೋರಾಡುವ ಶಕ್ತಿ ಈ ಇಬ್ಬರಿಗೂ ನಾಯಕರಿಗೆ ಇದೆ ಎಂದು ಅಖಿಲೇಶ್ ಯಾದವ್ ತಿಳಿದ್ದಾರೆ.

ಮಾಯಾವತಿ, ಅಖಿಲೇಶ್ ಯಾದವ್, ಅಜಿತ್ ಸಿಂಗ್ ಮಹಾಘಟಬಂಧನ್ ದಿಂದ ದೂರ ಉಳಿದುಕೊಂಡಿದ್ದಾರೆ. ಸದೆಹಲಿಗೆ ಗೇಟ್‍ವೇ ಎಂದು ಪರಿಗಣಿಸಲಾಗುವ ಉತ್ತರ ಪ್ರದೇಶದ ಎಲ್ಲಾ 80 ಸ್ಥಾನಗಳನ್ನು ಸ್ಪರ್ಧಿಸಲು ಕಾಂಗ್ರೆಸ್ ತನ್ನ ಶಕ್ತಿಯನ್ನು ಕೇಂದ್ರೀಕರಿಸಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಉತ್ತರ ಪ್ರದೇಶದಲ್ಲಿ ಪ್ರಾಬಲ್ಯ ಗಳಿಸಲು ಪ್ರಧಾನ ಕಾರ್ಯದರ್ಶಿಯಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ನಿಕಟ ಸಹಾಯಕ ಜ್ಯೋತಿರಾದಿತ್ಯ ಸಿಂಧಿಯಾ ನಿಯೋಜಿಸಿ, ಜನರ ಗಮನ ಸೆಳೆಯುವಂತೆ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗುವಂತೆ ನಿರ್ದೇಶಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *