ಲೋಕಸಭೆಯಲ್ಲಿ ಪರಿಕ್ಕರ್ ಆಡಿಯೋ ಗದ್ದಲ-ಮೋದಿ ಸರ್ಕಾರವನ್ನ ಬೆನ್ನತ್ತಿದ್ದ ರಫೇಲ್ ಹಗರಣ!

Public TV
2 Min Read

-ಕಾಂಗ್ರೆಸ್ ಕೈಯಲ್ಲಿ ಹೊಸ ಅಸ್ತ್ರ!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನ ರಫೇಲ್ ಹಗರಣ ಭೂತ ಬೆನ್ನತ್ತಿದ್ದಂತೆ ಕಾಣುತ್ತಿದೆ. ಗೋವಾ ಸಿಎಂ ಮನೋಹರ್ ತಮ್ಮ ಸಂಪುಟದ ಸಹೋದ್ಯೋಗಿ ವಿಶ್ವಜಿತ್ ರಾಣೆ ಜೊತೆ ಆಡಿದ್ದಾರೆ ಎನ್ನಲಾದ ಮಾತುಗಳು ಕಾಂಗ್ರೆಸ್ ದೊಡ್ಡ ಅಸ್ತ್ರವನ್ನೇ ಒದಗಿಸಿವೆ.

ರಫೇಲ್ ವಿಮಾನ ಖರೀದಿ ಕುರಿತ ಗೌಪ್ಯ ಮಾಹಿತಿಗಳು ನನ್ನ ಫ್ಲ್ಯಾಟ್‍ನ ಬೆಡ್‍ರೂಮ್ ನಲ್ಲಿದೆ. ಹೀಗಾಗಿ ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮನೋಹರ್ ಪರಿಕ್ಕರ್, ಸಚಿವ ವಿಶ್ವಜಿತ್ ರಾಣೆ ಬಳಿ ಹೇಳಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ವಿಶ್ವಜಿತ್ ರಾಣೆ, ಮೂರನೇ ವ್ಯಕ್ತಿಯೊಂದಿಗೆ ಮೊಬೈಲ್‍ನಲ್ಲಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋವನ್ನು ಕಾಂಗ್ರೆಸ್ ರಿಲೀಸ್ ಮಾಡಿದೆ. ಈ ಕುರಿತಂತೆ ಮಾತನಾಡಿದ ಎಐಸಿಸಿ ವಕ್ತಾರ ರಂದೀಪ್ ಸುರ್ಜೇವಾಲಾ, ಈ ಪ್ರಕರಣದಲ್ಲಿ ಸತ್ಯ ಏನೆಂಬುದು ಜನರಿಗೆ ಗೊತ್ತಾಗಬೇಕು. ಪ್ರಧಾನಿ ಈ ಬಗ್ಗೆ ಮಾತನಾಡ್ಬೇಕು ಎಂದು ಆಗ್ರಹಿಸಿದ್ದಾರೆ.

ಇದು ಸುಳ್ಳು ಸುದ್ದಿ.. ಕಾಂಗ್ರೆಸ್‍ನವರು ಸುಳ್ಳನ್ನು ಸತ್ಯ ಮಾಡಲು ಹೊರಟಿದ್ದಾರೆ ಎಂದು ಗೋವಾ ಸಿಎಂ ಮನೋಹರ್ ಪರಿಕ್ಕರ್ ಮತ್ತು ವಿಶ್ವಜಿತ್ ರಾಣೆ ಹೇಳಿದ್ದಾರೆ. ಹಾಗಾದರೆ ಲೀಕ್ ಆಡಿಯೋ ಸಂಭಾಷಣೆ ಹೀಗಿದೆ.
ವಿಶ್ವಜಿತ್ ರಾಣೆ – ರಫೇಲ್ ವಿವಾದ ಕುರಿತಂತೆ ನನ್ನ ಬೆಡ್‍ರೂಮ್‍ನಲ್ಲಿ ಎಲ್ಲಾ ಮಾಹಿತಿಗಳಿವೆ ಎಂದು ಮನೋಹರ್ ಪರಿಕ್ಕರ್ ನನ್ನ ಬಳಿ ಹೇಳಿದ್ದಾರೆ.
ಅಪರಿಚಿತ ವ್ಯಕ್ತಿ – ಏನನ್ನು ಹೇಳುತ್ತಿದ್ದೀರಾ ನೀವು..?
ವಿಶ್ವಜಿತ್ ರಾಣೆ – ಹೌದು.. ನಾನು ಹೇಳ್ತಿರೋದು ನಿಜ.
ಅಪರಿಚಿತ ವ್ಯಕ್ತಿ – ಓ.. ಮೈ ಗಾಡ್..!
ವಿಶ್ವಜಿತ್ ರಾಣೆ – ನಿಮಗೆ ಇದರ ಬಗ್ಗೆ ಸ್ಟೋರಿ ಮಾಡ್ಬೇಕು ಅಂತಾ ಇದ್ಯಾ..? ನಿನಗೆ ನನ್ನ ನಂಬಿಕೆ ಇಲ್ಲ ಅಂದ್ರೆ ಸಂಪುಟದಲ್ಲಿ ನಿನಗೆ ಆಪ್ತರಾಗಿದ್ದವರನ್ನು ಈ ಬಗ್ಗೆ ಕೇಳಿ ನೋಡು?

ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಆಡಿದ್ದಾರೆನ್ನಲಾದ ಆಡಿಯೋ ಬಿಡುಗಡೆಗೆ ಲೋಕಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೋರಿದರು. ಸ್ಪೀಕರ್ ಸುಮಿತ್ರಾ ಮಹಜನ್ ನಿರಾಕರಿಸಿದ್ರು. ಪ್ರಧಾನಿ ಮೋದಿಗೆ ಸಂಸತ್ತಿಗೆ ಬಂದು ಎದುರಿಸೋ ತಾಕತ್ತಿಲ್ಲ. ಅವರು ಕೋಣೆಯಲ್ಲಿ ಅಡಗಿಕೊಂಡಿದ್ದಾರೆ. ರಕ್ಷಣಾ ಸಚಿವರು ಅಣ್ಣಾ ಡಿಎಂಕೆ ಸಂಸದರ ಹಿಂದೆ ಅಡಗಿಕೊಂಡಿದ್ದಾರೆ ಅಂತ ರಾಹುಲ್ ವಾಗ್ದಾಳಿ ನಡೆಸಿದರು.

ರಫೇಲ್ ಡೀಲ್ ಬಗ್ಗೆ ಜೆಪಿಸಿ (Joint Parliamentary Committee) ತನಿಖೆ ಮಾಡಿಸಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ, ಕಾಂಗ್ರೆಸ್ ಅಧ್ಯಕ್ಷರು ಚರ್ಚೆಯ ದಾರಿ ತಪ್ಪಿಸಲು ಯತ್ನಿಸುತ್ತಿದ್ದಾರೆ. ಈ ಹಿಂದೆಯೂ, ಫ್ರಾನ್ಸ್ ಅಧ್ಯಕ್ಷರು ತಮಗೆ ಮಾಹಿತಿ ನೀಡಿದ್ದು, ರಫೇಲ್ ಡೀಲ್‍ನಲ್ಲಿ ಅವ್ಯವಹಾರ ನಡೆದಿರುವುದಾಗಿ ಖುದ್ದಾಗಿ ತಿಳಿಸಿದ್ದರು ಎಂದು ರಾಹುಲ್ ದೇಶದ ದಿಕ್ಕು ತಪ್ಪಿಸಿದ್ದರು ಎಂದು ಜೇಟ್ಲಿ ತಿರುಗೇಟು ನೀಡಿದರು. ಈ ನಡುವೆ ರಫೇಲ್ ಡೀಲ್ ಕುರಿತ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಯಶವಂತ ಸಿನ್ಹಾ, ಅರುಣ್ ಶೌರಿ, ಪ್ರಶಾಂತ್ ಭೂಷಣ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.

ಸಂಸತ್ತಿನ ಉಭಯ ಸದನಗಳಲ್ಲಿಯೂ ಮೇಕೆದಾಟು ಡ್ಯಾಂ ವಿರೋಧಿಸಿ ಎಐಎಡಿಎಂಕೆ ಸಂಸದರು ಗದ್ದಲ ಎಬ್ಬಿಸಿದರು. ಲೋಕಸಭೆಯಲ್ಲಂತೂ ಪೇಪರ್‍ಗಳನ್ನು ಪೀಸ್ ಪೀಸ್ ಮಾಡಿ ಸ್ಪೀಕರ್ ಚೇರ್ ನತ್ತ ಎಸೆದ್ರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸ್ಪೀಕರ್, 24 ಸಂಸದರನ್ನು 5 ದಿನಗಳ ಕಾಲ ಕಲಾಪದಿಂದ ಅಮಾನತು ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *