ರಾಯಚೂರಿನಲ್ಲಿ ಮಹಾ ಸಂಗಮ- 5 ವರ್ಷಗಳಲ್ಲಿ ಬಡವರಿಗೆ ಮೋದಿ ಮಾಡಿದ್ದೇನು-ರಾಗಾ ಪ್ರಶ್ನೆ

Public TV
2 Min Read

-ಒಂದೇ ವೇದಿಕೆಯಲ್ಲಿ ಹೆಚ್‍ಡಿಡಿ, ಚಂದ್ರಬಾಬು ನಾಯ್ಡು, ರಾಹುಲ್

ರಾಯಚೂರು: ಲೋಕಸಭಾ ಚುನಾವಣೆ ನಿಮಿತ್ತ ರಾಯಚೂರು ನಗರಕ್ಕೆ ಆಗಮಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೈತ್ರಿ ಅಭ್ಯರ್ಥಿ ಬಿ.ವಿ.ನಾಯಕ್ ಪರ ಮತಯಾಚಿಸಿದರು. ಈ ವೇಳೆ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ಮೋದಿ ಹೋದಲ್ಲೆಲ್ಲಾ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ. 2014ರಲ್ಲಿ ಚುನಾವಣೆ ವೇಳೆ ನನಗೆ ವೋಟ್ ಹಾಕಿ, ನಿಮಗೆ 15 ಲಕ್ಷ ನಿಮ್ಮ ಖಾತೆಗೆ ಹಾಕ್ತೀನಿ ಎಂದು ಸುಳ್ಳು ಹೇಳಿದ್ದರು. ಇದುವರೆಗೆ ಯಾರದ್ದಾದ್ರೂ ಖಾತೆಗೆ 15 ಲಕ್ಷ ಬಂದಿದೆಯಾ ನೀವೇ ಹೇಳಿ ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದರು. ಪಂಜಾಬ್, ರಾಜಸ್ಥಾನ, ಛತ್ತೀಸ್‍ಗಡ್ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದು ಎರಡು ದಿನದಲ್ಲಿ ರೈತರ ಸಾಲಮನ್ನಾ ಮಾಡಿದ್ದೇವೆ. ಸಾಲಮನ್ನಾ ಹೊರಟ ನಮಗೆ ಹಣ ಎಲ್ಲಿಂದ ಬಂದು ಎಂದು ಕೇಳುತ್ತಾರೆ. ಚೋಕ್ಸಿ, ನೀರವ್ ಮೋದಿ ಇವರಿಗೆಲ್ಲ ನೀವು ಹೇಗೆ ಹಣ ನೀಡಿದ್ದೀರಿ ಎಂದು ಹೇಳಬೇಕು ಅಂದ್ರು.

ದೇಶ ಬಿಟ್ಟು ಓಡಿ ಹೋಗಿರುವ ನೀರವ್ ಮೋದಿ, ವಿಜಯ್ ಮಲ್ಯ, ಚೋಕ್ಸಿ ಅವರ ಜೇಬಿನಿಂದ ಹಣ ತೆಗೆದು ಕಾಂಗ್ರೆಸ್ ರೈತರ ಖಾತೆಗೆ ಹಣ ಹಾಕುತ್ತೇವೆ. ಪ್ರಧಾನಿಗಳು ಎಲ್ಲೇ ಹೋದ್ರೂ ರಾಷ್ಟ್ರದ ಭದ್ರತೆಯ ಬಗ್ಗೆ ಮಾತನಾಡುತ್ತಾರೆ. ಹಾಗಾಗಿ ನಾನು ಇಂದು ಪ್ರಶ್ನೆಯನ್ನು ಕೇಳಲು ಇಷ್ಟಪಡುತ್ತೇನೆ. ರಫೇಲ್ ಹಗರಣದಲ್ಲಿ ಅನಿಲ್ ಅಂಬಾನಿ ಜೇಬಿನಲ್ಲಿ 30 ಸಾವಿರ ಕೋಟಿ ಹಾಕಿದ್ದು ಯಾಕೆ ಎಂಬುವುದಕ್ಕೆ ಉತ್ತರ ನೀಡಬೇಕು. ಎಲ್ಲೇ ಹೋದರೂ ಐದು ವರ್ಷಗಳಲ್ಲಿ ತಮ್ಮ ಕೆಲಸಗಳನ್ನು ಹೇಳಲ್ಲ. ಒಂದು ವೇಳೆ ರಫೇಲ್ ಯುದ್ಧ ವಿಮಾನಗಳ ತಯಾರಿಕೆಯನ್ನ ಕರ್ನಾಟಕದ ಹೆಚ್‍ಎಎಲ್ ಗೆ ನೀಡಿದ್ದರೆ, ಇಲ್ಲಿಯ ಲಕ್ಷಾಂತರ ಯುವಕರಿಗೆ ಉದ್ಯೋಗ ಸಿಗುತ್ತಿತ್ತು. ಸಾವಿರಾರು ಕೋಟಿ ಹಣವನ್ನು ಪಡೆದವರು ಇಂದು ವಿದೇಶದಲ್ಲಿದ್ದಾರೆ. ಭಾರತದ ಓರ್ವ ರೈತ 20 ಸಾವಿರ ರೂ. ಸಾಲ ಮರುಪಾವತಿ ಮಾಡದಿದ್ದರೆ, ಆತನನ್ನು ಜೈಲಿಗೆ ಹಾಕ್ತಾರೆ. ಬಿಜೆಪಿ ಸರ್ಕಾರ ಕೇವಲ ಶ್ರೀಮಂತ ವರ್ಗದವರಿಗಾಗಿ ಕೆಲಸ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.

ಕರ್ನಾಟಕಕ್ಕೆ ಬಂದಾಗ ಮೈತ್ರಿ ಸರ್ಕಾರ ರೈತರ ಸಾಲಮನ್ನಾ ಮಾಡಿಲ್ಲ ಎಂದು ಪದೇ ಪದೇ ಸುಳ್ಳು ಹೇಳುತ್ತಿದ್ದಾರೆ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ರೈತರ ಸಾಲಮನ್ನಾ ಮಾಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಖಾಲಿ ಇರುವ ಸರ್ಕಾರದ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತೇವೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ಮೂಲಕ ಬಡವರ ಹೊಟ್ಟೆಯನ್ನು ತುಂಬಿಸಿದೆ. ಮೋದಿ ಸರ್ಕಾರ ಬಡವರಿಗಾಗಿ ಏನು ಮಾಡಿದೆ ಎಂಬುದನ್ನು ಜನತಗೆ ತಿಳಿಸಬೇಕೆಂದು ರಾಹುಲ್ ಗಾಂಧಿ ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಸೇರಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಭಾಗಿಯಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *