ಆರು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡದ ಕಾಂಗ್ರೆಸ್ ಹೈಕಮಾಂಡ್

Public TV
2 Min Read

ಬೆಂಗಳೂರು: 2018ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ 218 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಆರು ಕ್ಷೇತ್ರಗಳಲ್ಲಿ ಯಾರು ಸ್ಪರ್ಧಿಸಲಿದ್ದಾರೆ ಎಂಬುದನ್ನು ರಿವೀಲ್ ಮಾಡಿಲ್ಲ.

ಬೆಂಗಳೂರಿನ ಶಾಂತಿನಗರ, ಕಿತ್ತೂರು, ನಾಗಾಠಾಣ, ಸಿಂಧಗಿ, ರಾಯಚೂರು ಮತ್ತು ಮೇಲುಕೋಟೆ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಘೋಷಣೆ ಮಾಡಿಲ್ಲ.

1. ಶಾಂತಿನಗರ: 2008 ಮತ್ತು 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಎನ್.ಎ.ಹ್ಯಾರೀಸ್ ಗೆಲುವನ್ನು ಸಾಧಿಸಿದ್ದಾರೆ. 2013ರ ಚುನಾವಣೆಯಲ್ಲಿ ಜೆಡಿಎಸ್‍ನ ಕೆ.ವಾಸುದೇವ ಮೂರ್ತಿ 34,137 ಮತಗಳಿಸಿದ್ರೆ, ಹ್ಯಾರಿಸ್ 54,342 ಮತಗಳನ್ನು ಪಡೆದಿದ್ರು.

2. ಕಿತ್ತೂರು: ಕಾಂಗ್ರೆಸ್‍ನ ಹಾಲಿ ಶಾಸಕರಾಗಿರುವ ಬಸನಗೌಡ ಇನಾಮದಾರ ಅವರ ಟಿಕೆಟ್ ನ್ನು ಹೈಕಮಾಂಡ್ ಘೋಷಣೆ ಮಾಡಿಲ್ಲ. 2013ರ ಚುನಾವಣೆಯಲ್ಲಿ ಬಿಜೆಪಿ ಸುರೇಶ್ ಶಿವರುದ್ರಪ್ಪ ಮಾರಿಹಾಳ 35,634 ಮತ ಪಡೆದಿದ್ರೆ, ಬಸನಗೌಡ ಇನಾಮದಾರ 53,924 ವೋಟ್ ಪಡೆದು ಗೆಲವನ್ನು ತಮ್ಮದಾಗಿಸಿಕೊಂಡಿದ್ರು.

3. ನಾಗಠಾಣಾ: 2008ರಲ್ಲಿ ರಚಿತವಾದ ವಿಧಾನಸಭಾ ಕ್ಷೇತ್ರ ಇದಾಗಿದ್ದು, 2008ರಲ್ಲಿ ಬಿಜೆಪಿಯ ವಿಠಲ್ ದೋಂಡಿಬಾ ಜಯ ಸಾಧಿಸಿದ್ದರೆ, 2013ರಲ್ಲಿ ಕಾಂಗ್ರೆಸ್ ನ ರಾಜು ಆಲಗೂರ ಗೆಲು ಸಾಧಿಸಿದ್ರು. 2013ರಲ್ಲಿ ಕಾಂಗ್ರೆಸ್ ನ ರಾಜು ಆಲಗೂರು 45,570 ಮತಗಳನ್ನು ಪಡೆದಿದ್ದರೆ ಜೆಡಿಎಸ್‍ನ ದೇವಾನಂದ್ ಚವ್ಹಾನ್ 44,903 ಮತ ಪಡೆದಿದ್ರು.

4. ಸಿಂಧಗಿ: 2004, 2008 ಮತ್ತು 2013ರ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳೆ ಗೆಲವನ್ನು ಸಾಧಿಸಿದ್ದಾರೆ. ಈ ಮೂರು ಚುನಾವಣೆಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳಿಗೆ ಜೆಡಿಎಸ್ ನ ಮಲ್ಲಪ್ಪ ಮನಗೂಳಿ ಪ್ರಬಲ ಪೈಪೋಟಿಯನ್ನು ನೀಡುತ್ತಾ ಬಂದಿದ್ದಾರೆ. 2013ರ ಚುನಾವಣೆಯಲ್ಲಿ ಹಾಲಿ ಶಾಸಕ ರಮೇಶ್ ಭುಸನೂರ 37,834 ಮತ ಪಡೆದ್ರೆ, ಸಮೀಪದ ಸ್ಪರ್ಧಿ ಮಲ್ಲಪ್ಪ ಮನಗೂಳಿ 37,082 ಮತ ಪಡೆದಿದ್ದರು.

5. ರಾಯಚೂರು: ರಾಯಚೂರು ವಿಧಾನಸಭಾ ಕ್ಷೇತ್ರದಿಂದ 2013ರ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಸೈಯದ್ ಯಾಸೀನ್, ಜೆಡಿಎಸ್ ನ ಶಿವರಾಜ್ ಪಾಟೀಲ್ ಎದುರು ಸೋಲಿನ ರುಚಿಯನ್ನು ಕಂಡಿದ್ದರು. ಸೈಯದ್ ಯಾಸೀನ್ 37,392 ಮತ ಪಡೆದಿದ್ರೆ, ಶಿವರಾಜ್ ಪಾಟೀಲ್ 45,263 ಮತಗಳನ್ನು ಗಳಿಸಿ ಶಾಸಕರಾಗಿದ್ದರು.

6.ಮೇಲುಕೋಟೆ: ಈ ವಿಧಾನಸಭಾ ಕ್ಷೇತ್ರದಲ್ಲಿ ರೈತಪರ ಹೋರಾಟಗಾರ ಕೆ.ಎಸ್.ಪುಟ್ಟಣ್ಣಯ್ಯ ಶಾಸಕರಾಗಿದ್ರು. 2008ರಲ್ಲಿ ರಚಿತವಾದ ವಿಧಾನಸಭಾ ಕ್ಷೇತ್ರ ಇದಾಗಿದ್ದು, 2013ರಲ್ಲಿ ಪುಟ್ಟಣ್ಣಯ್ಯ ವಿರುದ್ಧ ಜೆಡಿಎಸ್ ಸಿಎಸ್ ಪುಟ್ಟರಾಜು ಸ್ಪರ್ಧಿಸಿ ಸೋಲನ್ನಪ್ಪಿದ್ದರು.

ಈ ಆರು ಕ್ಷೇತ್ರಗಳ ಟಿಕೆಟ್ ಮಾತ್ರ ಕಾಂಗ್ರೆಸ್ ಘೋಷಣೆ ಮಾಡಿಲ್ಲ.

Share This Article
Leave a Comment

Leave a Reply

Your email address will not be published. Required fields are marked *