ಕೇರಳ ಪ್ರವಾಹ ಪರಿಹಾರ ನಿಧಿಗೆ ಕಾಂಗ್ರೆಸ್ ಶಾಸಕ ಹಾಗೂ ಸಂಸದರಿಂದ ಒಂದು ತಿಂಗಳ ಸಂಬಳ ದೇಣಿಗೆ

Public TV
2 Min Read

ನವದೆಹಲಿ: ದೇಶದ ಎಲ್ಲಾ ಕಾಂಗ್ರೆಸ್ ಶಾಸಕರು ಹಾಗೂ ಸಂಸದರ ಒಂದು ತಿಂಗಳ ವೇತನವನ್ನು ಕೇರಳ ಪ್ರವಾಹ ಪರಿಹಾರ ನಿಧಿಗೆ ನೀಡಲು ಮುಂದಾಗಿದ್ದಾರೆ.

ಕಂಡು ಕೇಳರಿಯದ ಪ್ರವಾಹದಿಂದಾಗಿ ಕೇರಳ ತತ್ತರಿಸಿ ಹೋಗಿದ್ದು, ಬಹುತೇಕ ನಿವಾಸಿಗಳು ಸಂತ್ರಸ್ತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೇರಳ ಪ್ರವಾಹ ಪರಿಹಾರ ನಿಧಿಗೆ ದೇಣಿಗೆ ನೀಡಲು ಕಾಂಗ್ರೆಸ್ ಮುಂದಾಗಿದ್ದು, ತನ್ನೆಲ್ಲಾ ಶಾಸಕರು ಹಾಗೂ ಸಂಸದರ ಒಂದು ತಿಂಗಳ ವೇತನವನ್ನು ಪರಿಹಾರವಾಗಿ ನೀಡುವಂತೆ ಖುದ್ದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಸೂಚನೆ ನೀಡಿದ್ದಾರೆ.

ಕೇರಳ ಪ್ರವಾಹ ಕುರಿತು ಶನಿವಾರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಸಾಮಾನ್ಯ ಸಭೆಯಲ್ಲಿ ಪಕ್ಷದ ಕಾರ್ಯದರ್ಶಿಗಳು, ರಾಜ್ಯ ಉಸ್ತುವಾರಿ ನಾಯಕರುಗಳು, ರಾಜ್ಯ ಘಟಕದ ಅಧ್ಯಕ್ಷರು ಹಾಗೂ ಶಾಸಕಾಂಗ ನಾಯಕರುಗಳೊಂದಿಗೆ ಚರ್ಚಿಸಿ ಈ ನಿರ್ಧಾರ ತೆಗೆದುಕೊಂಡಿದೆ. ಈ ವೇಳೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿಯವರು, ಕೇಂದ್ರ ಸರ್ಕಾರ ಕೂಡಲೇ ಕೇರಳ ರಾಜ್ಯವನ್ನು ‘ರಾಷ್ಟ್ರೀಯ ವಿಪತ್ತು ರಾಜ್ಯ’ವೆಂದು ಘೋಷಿಸಲು ಆಗ್ರಹಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನ ಮುಖ್ಯ ವಕ್ತಾರ ರಣದೀಪ್ ಸಿಂಗ್ ಸುರ್ಜಿವಾಲಾ, ಕೇರಳದ ಪ್ರವಾಹದಿಂದಾಗಿ ಇಲ್ಲಿಯವರೆಗೂ 180 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ ಸುಮಾರು 3 ಸಾವಿರಕ್ಕೂ ಹೆಚ್ಚಿನ ಮೌಲ್ಯದ ಆಸ್ತಿ-ಪಾಸ್ತಿ ನಷ್ಟ ಉಂಟಾಗಿದೆ. ಈ ಕುರಿತು ಕೇಂದ್ರ ಸರ್ಕಾರ ಕೇರಳಕ್ಕೆ ಅಗತ್ಯ ನೆರವು ನೀಡಲು ಮುಂದಾಗಬೇಕು. ಮೋದಿ ಸರ್ಕಾರವು ಪರಿಹಾರ ನೀಡುವ ವಿಚಾರದಲ್ಲಿ ತಾರತಮ್ಯ ಧೋರಣೆಯನ್ನು ಮಾಡದೇ, ಕೇರಳ, ಕರ್ನಾಟಕ ಹಾಗೂ ಮತ್ತಿತರ ಪ್ರವಾಹ ಪೀಡಿತ ರಾಜ್ಯಗಳಿಗೆ ಅಗತ್ಯ ನೆರವು ನೀಡುವಂತೆ ಒತ್ತಾಯಿಸಿದ್ದಾರೆ.

ಎಐಸಿಸಿ ಮೂಲಕ ಕೇರಳ ರಾಜ್ಯಕ್ಕೆ ಪರಿಹಾರ ನೀಡುವ ಸಲುವಾಗಿ ಎಲ್ಲಾ ಲೋಕಸಭೆ, ರಾಜ್ಯಸಭೆ ಸದಸ್ಯರು, ಶಾಸಕರು, ವಿಧಾನಪರಿಷತ್ ಸದಸ್ಯರುಗಳ ಒಂದು ತಿಂಗಳ ವೇತನ ನೀಡುವಂತೆ ಸೂಚಿಸಲಾಗಿದ್ದು, ಪಂಜಾಬ್ ಹಾಗೂ ಕರ್ನಾಟಕ ರಾಜ್ಯ ಸರ್ಕಾರಗಳು ಈಗಾಗಲೇ ಈಗಾಗಲೇ 10 ಕೋಟಿ ರೂಪಾಯಿ ಪರಿಹಾರವನ್ನು ಬಿಡುಗಡೆಮಾಡಿದೆ ಎಂದು ತಿಳಿಸಿದ್ದಾರೆ.

ಕೇರಳ ಹೊರತು ಪಡಿಸಿ ಕರ್ನಾಟಕದ ಕೆಲವು ಭಾಗಗಳಲ್ಲೂ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಈ ಕುರಿತು ಬೇಕಾಗುವ ಅಗತ್ಯ ನೆರವುಗಳನ್ನು ನೀಡಲು ರಾಜ್ಯ ನಾಯಕರುಗಳಿಗೆ ಸೂಚನೆ ನೀಡಲಾಗಿದೆ. ಕೇರಳ ರಾಜ್ಯಕ್ಕೆ ಪರಿಹಾರ ಸಾಮಾಗ್ರಿಗಳನ್ನು ಸಾಗಿಸುವ ಸಲುವಾಗಿ ಪಾಂಡಿಚೇರಿ ಹೊರತು ಪಡಿಸಿ ಕರ್ನಾಟಕ ಹಾಗೂ ತಮಿನಾಡು ಸೇರಿದಂತೆ ಎಲ್ಲಾ ರಾಜ್ಯಗಳಲ್ಲಿ ವಿಶೇಷ ಪರಿಹಾರ ಸಮಿತಿಯನ್ನು ರಚಿಸಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *