ಸುರ್ಜೇವಾಲಾಗೆ ಶಾಕ್‌ – 2 ದಿನ ಚುನಾವಣಾ ಪ್ರಚಾರಕ್ಕೆ ನಿಷೇಧ

Public TV
1 Min Read

ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ (Randeep Surjewala) ಅವರನ್ನು 2 ದಿನಗಳ ಕಾಲ ಚುನಾವಣಾ ಪ್ರಚಾರಕ್ಕೆ (Election Campaign) ನಿರ್ಬಂಧಿಸಲಾಗಿದೆ.

ನಟಿ, ಬಿಜೆಪಿ ಸಂಸದೆ ಹೇಮಾ ಮಾಲಿನಿ (Hema Malini) ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳಿಗಾಗಿ ಭಾರತೀಯ ಚುನಾವಣಾ ಆಯೋಗ (ಇಸಿಐ) ಮಂಗಳವಾರ ಈ ಕ್ರಮ ಕೈಗೊಂಡಿದೆ.

ಇಸಿಐ ಆದೇಶದ ಪ್ರಕಾರ, ಸುರ್ಜೇವಾಲಾ ಅವರು ಇಂದು ಸಂಜೆ 6 ಗಂಟೆಯಿಂದ ಮುಂದಿನ 48 ಗಂಟೆಗಳ ಕಾಲ ಚುನಾವಣಾ ರ್ಯಾಲಿಗಳು ಅಥವಾ ಸಾರ್ವಜನಿಕ ಸಭೆಗಳನ್ನು ನಡೆಸುವಂತಿಲ್ಲ. ಇದನ್ನೂ ಓದಿ: ಮಾತೃಶಕ್ತಿಗೆ ಮಾಡಿದ ಅವಮಾನ- ಸುರ್ಜೇವಾಲಾ ವಿರುದ್ಧ ಯೋಗಿ ಕಿಡಿ

ಭಾರತದ ಸಂವಿಧಾನದ 324 ನೇ ವಿಧಿಯ ಅಡಿಯಲ್ಲಿ ಯಾವುದೇ ಸಾರ್ವಜನಿಕ ಸಭೆಗಳು, ಸಾರ್ವಜನಿಕ ಮೆರವಣಿಗೆಗಳು, ಸಾರ್ವಜನಿಕ ರ್ಯಾಲಿಗಳು, ರೋಡ್‌ ಶೋಗಳು ಮತ್ತು ಸಂದರ್ಶನಗಳು, ಮಾಧ್ಯಮಗಳಲ್ಲಿ ಸಾರ್ವಜನಿಕ ಹೇಳಿಕೆಗಳನ್ನು ನಡೆಸದಂತೆ ರಣದೀಪ್ ಸುರ್ಜೆವಾಲಾ ಅವರನ್ನು ನಿರ್ಬಂಧಿಸುತ್ತದೆ ಎಂದು ಚುನಾವಣಾ ಸಮಿತಿಯು ತನ್ನ ನೋಟಿಸ್‌ನಲ್ಲಿ ತಿಳಿಸಿದೆ.

ಸುರ್ಜೇವಾಲಾ ಹೇಳಿದ್ದೇನು..?: ಕೈತಾಲ್‌ನ ಫರಾಲ್ ಗ್ರಾಮದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಸುರ್ಜೇವಾಲಾ ಅವರು, ಮಥುರಾದ ಬಿಜೆಪಿ ಸಂಸದೆ ಹಾಗೂ ಹಿರಿಯ ನಟಿ ಹೇಮಾ ಮಾಲಿನಿ ಕುರಿತಾಗಿ ಕೆಟ್ಟ ಹಾಗೂ ಅಶ್ಲೀಲ ಹೇಳಿಕೆ ನೀಡಿದ್ದರು. ನಾವು ಶಾಸಕರು/ಸಂಸದರನ್ನು ಯಾಕೆ ಆಯ್ಕೆ ಮಾಡುತ್ತೇವೆ? ಅವರು ನಮ್ಮ ದನಿಯನ್ನು ಅಲ್ಲಿ ಕೇಳಬೇಕು ಎನ್ನುವುದು ಇದರ ಹಿಂದಿನ ಉದ್ದೇಶ. ನಮ್ಮ ಮನವಿಗಳು ಅಲ್ಲಿ ಸಲ್ಲಿಕೆಯಾಗಬೇಕು. ಆದರೆ ಹೇಮಾ ಮಾಲಿನಿ ಅವರನ್ನು ನೆಕ್ಕೋಕೆ ಸಂಸದರನ್ನಾಗಿ ಮಾಡಿದ್ದಾರೆ ಎಂದಿದ್ದರು.

ಸುರ್ಜೇವಾಲಾ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಯಿತು. ಈ ಬೆನ್ನಲ್ಲೇ ಸುರ್ಜೆವಾಲಾ ಅವರ ಸ್ತ್ರೀ ದ್ವೇಷಿ ಹೇಳಿಕೆಯ ವಿರುದ್ಧ ಬಿಜೆಪಿ ಕಿಡಿಕಾರಿದೆ. ಬಳಿಕ ಈ ವಿಚಾರದಲ್ಲಿ ಸ್ಪಷ್ಟನೆ ನೀಡಿದ ಸುರ್ಜೇವಾಲಾ ಅವರು ಬಿಜೆಪಿ (BJP) ಮೇಲೆ ದೊಡ್ಡ ಆರೋಪ ಮಾಡಿದ್ದರು.

Share This Article