ಡಿಕೆಶಿ ಹವಾ ಏನಿದ್ರೂ ಕನಕಪುರದಲ್ಲಿ ಮಾತ್ರ- ಬಿಜೆಪಿ ಸೇರ್ಪಡೆ ಬಳಿಕ ಚಂದ್ರಶೇಖರ್ ಹೇಳಿಕೆ

Public TV
2 Min Read

ಬೆಂಗಳೂರು: ಸಚಿವ ಡಿಕೆ ಶಿವಕುಮಾರ್ ಅವರ ಪ್ರಭಾವ ಏನಿದ್ದರೂ ಕನಕಪುರದಲ್ಲಿ ಮಾತ್ರ. ರಾಮನಗರದಲ್ಲಿ ಅವರ ಪ್ರಭಾವ ಇದ್ದಿದ್ದರೆ ಪಕ್ಷದ ಅಭ್ಯರ್ಥಿಗಳು ಸೋಲುತ್ತಿರಲಿಲ್ಲ ಎಂದು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾದ ಮುಖಂಡ ಚಂದ್ರಶೇಖರ್ ಅವರು ಹೇಳಿದ್ದಾರೆ.

ಮೈತ್ರಿ ಸರ್ಕಾರದ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಕಿತ್ತಾಟ ಬಿಜೆಪಿಗೆ ವರದಾನವಾಗಿ ಪರಿಣಾಮಿಸಿದ್ದು, ಸ್ಥಳೀಯ ಕಾರ್ಯಕರ್ತರ ಮೈತ್ರಿ ವಿರೋಧದಿಂದ ಉಂಟಾಗಿರುವ ಅತೃಪ್ತರಿಗೆ ಬಿಜೆಪಿ ಮುಖಂಡರು ಗಾಳ ಬೀಸಿದ್ದಾರೆ. ಮೊದಲ ಹಂತದಲ್ಲಿ ರಾಮನಗರದಲ್ಲಿ ಆಪರೇಷನ್ ಸಕ್ಸಸ್ ಆಗಿದ್ದು, ಸಿಎಂ ಲಿಂಗಪ್ಪ ಪುತ್ರ ಚಂದ್ರಶೇಖರ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಬಿಜೆಪಿ ಸೇರ್ಪಡೆ ಬಳಿಕ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಚಂದ್ರಶೇಖರ್, ಕಳೆದ 28 ವರ್ಷಗಳಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸೇವೆ ಸಲ್ಲಿಸಿದ್ದೆ. ಪ್ರತಿ ಚುನಾವಣೆಯಲ್ಲೂ ಪಕ್ಷ ಸೂಚಿಸಿದ ಅಭ್ಯರ್ಥಿಯ ಗೆಲುವಿಗೆ ಶ್ರಮ ವಹಿಸುತ್ತಿದ್ದೆ. ಆದರೆ ಕ್ಷೇತ್ರದಲ್ಲಿ ಜೆಡಿಎಸ್, ಕಾಂಗ್ರೆಸ್ ಮಾಡಿಕೊಂಡಿರುವ ಒಳಒಪ್ಪಂದದಿಂದ ಪಕ್ಷದಲ್ಲಿ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದೆ. ಅದ್ದರಿಂದ ನಾನು ಕಾರ್ಯಕರ್ತರ ಒತ್ತಡ ಮೇಲೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ ಎಂದು ತಿಳಿಸಿದರು.

ಇದೇ ವೇಳೆ ಸಚಿವ ಡಿಕೆ ಶಿವಕುಮಾರ್ ಅವರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಸಚಿವ ಡಿಕೆ ಶಿವಕುಮಾರ್ ಅವರ ಭಯ ಇಲ್ಲ, ರಾಮನಗರದಲ್ಲಿ ಭಯದ ಪ್ರಶ್ನೆಯೇ ಇಲ್ಲ. ಡಿಕೆಶಿ ಪ್ರಭಾವ ಏನಿದ್ದರೂ ಕನಕಪುರದಲ್ಲಿ ಮಾತ್ರ. ರಾಮನಗರ, ಚನ್ನಪಟ್ಟಣ, ಮಾಗಡಿಯಲ್ಲಿ ಅವರ ಪ್ರಭಾವ ಇದ್ದಿದ್ದರೆ ಕಾಂಗ್ರೆಸ್ ಅಭ್ಯರ್ಥಿಗಳು ಸೋತು ಜೆಡಿಎಸ್ ಅಭ್ಯರ್ಥಿಗಳು ಗೆಲ್ಲುತ್ತಿರಲಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ತೊರೆಯುವ ಕುರಿತು ನಮ್ಮ ತಂದೆಯವರೊಂದಿಗೆ ನಾನು ಚರ್ಚೆ ನಡೆಸಿದ್ದೇನೆ. ನನ್ನ ತಂದೆಯ ರಾಜಕಾರಣವೇ ಬೇರೆ, ನನ್ನ ರಾಜಕಾರಣವೇ ಬೇರೆ. ಇಂತಹ ಸಂದರ್ಭದಲ್ಲಿ ಹಲವು ಉದಾಹರಣೆಗಳನ್ನು ನೀಡಲು ಸಿದ್ಧವಿದ್ದು, ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಬೆಳವಣಿಗೆ ಕಾರ್ಯನಿರ್ವಹಿಸುತ್ತೇನೆ ಎಂದರು.

ಯಾವುದೇ ಬೇಡಿಕೆ ಇಲ್ಲ: ಬಿಜೆಪಿ ಪಕ್ಷದ ಸೇರ್ಪಡೆ ವೇಳೆ ಯಾವುದೇ ಬೇಡಿಕೆಯನ್ನು ನಾನು ಇಟ್ಟಿಲ್ಲ ಎಂದು ಸ್ಪಷ್ಟಪಡಿಸಿದ ಚಂದ್ರಶೇಖರ್ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಒಳ ಮೈತ್ರಿ ವಿರುದ್ಧ ನಾನು ಈ ತೀರ್ಮಾನ ತೆಗೆದುಕೊಂಡಿದ್ದೇನೆ. ಈ ನಿರ್ಧಾರಕ್ಕೆ ಕ್ಷೇತ್ರ ಜನರು, ಮತದಾರರು ಹಾಗೂ ಸ್ನೇಹಿತರು ಬೆಂಬಲ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪನವರು ನಮ್ಮ ನಾಯಕರು. ನನಗೆ ಬೆಂಬಲ ನೀಡಿ ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್ ನೀಡಿದರೆ ಸಮರ್ಥವಾಗಿ ಸ್ಪರ್ಧೆಯನ್ನು ಎದುರಿಸಿ ಗೆದ್ದು ಬರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *