ದಸರಾ ಉದ್ಘಾಟನಾ ಸಮಾರಂಭದಲ್ಲೂ ದೋಸ್ತಿ ಪಕ್ಷದ ಮುನಿಸು ಬಹಿರಂಗ!

Public TV
2 Min Read

ಮೈಸೂರು: ನಾಡಹಬ್ಬ ದಸರಾ ಉದ್ಘಾಟನಾ ಸಮಾರಂಭದಲ್ಲಿ ದೋಸ್ತಿ ಪಕ್ಷದಲ್ಲಿನ ಮುನಿಸು ಮತ್ತೊಮ್ಮೆ ಎದ್ದು ಕಾಣಿಸಿದೆ. ಮೈಸೂರು – ಚಾಮರಾಜನಗರದ ಯಾವೊಬ್ಬ ಕಾಂಗ್ರೆಸ್ ಜನಪ್ರತಿನಿಧಿಯೂ ಸಮಾರಂಭಕ್ಕೆ ಬಂದಿರಲಿಲ್ಲ.

ಹೌದು, ಮೈಸೂರು ದಸರಾ ರಂಗೆರುತ್ತಿದ್ದು, ಕಾರ್ಯಕ್ರಮದಲ್ಲಿ ಜೆಡಿಎಸ್ ಸಚಿವರು, ಶಾಸಕರ ಓಡಾಟ ಜೋರಾಗಿದೆ. ಆದರೆ ಕಾಂಗ್ರೆಸ್ಸಿನ ಕೆಲ ನಾಯಕರು ಮುನಿಸಿಕೊಂಡಿದ್ದು, ಯಾರೊಬ್ಬರೂ ದಸರಾದಲ್ಲಿ ಕಾಣಿಸಿಕೊಂಡಿಲ್ಲ.

ಯಾರು ಗೈರು?:
ದಸರಾ ಉದ್ಘಾಟನಾ ಸಮಾರಂಭಕ್ಕೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವ ಪುಟ್ಟರಂಗಶೆಟ್ಟಿ, ಶಾಸಕರಾದ ತನ್ವೀರ್ ಸೇಠ್, ಡಾ.ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು ಸೇರಿದಂತೆ ಮೈಸೂರು ಮತ್ತು ಚಾಮರಾಜನಗರದ ಕಾಂಗ್ರೆಸ್ಸಿನ ಎಲ್ಲಾ ಶಾಸಕರು ಗೈರಾಗಿದ್ದರು. ಸಂಸದ ಆರ್.ಧ್ರುವನಾರಾಯಣ್, ಸಮ್ಮಿಶ್ರ ಸರ್ಕಾರದ ಅಂಗ ಪಕ್ಷ ಬಿಎಸ್‍ಪಿಯ ಸಚಿವ ಎನ್.ಮಹೇಶ್ ಸಹ ದಸರಾ ಕಾರ್ಯಕ್ರಮದಿಂದ ದೂರ ಉಳಿದಿದ್ದರು. ಇದನ್ನು ಓದಿ: ಅವ್ರ ದರ್ಬಾರ್ ದಸರಾದಲ್ಲಿ ನಡಿಲಿ: ಸಚಿವ ಜಿ.ಟಿ.ದೇವೇಗೌಡ ವಿರುದ್ಧ ಪುಟ್ಟರಂಗಶೆಟ್ಟಿ ಕಿಡಿ

ಸಮಾರಂಭದ ವೇದಿಕೆಯಲ್ಲಿ ಜೆಡಿಎಸ್‍ನ ಬಹುತೇಕ ಶಾಸಕರು ಹಾಗೂ ಬಿಜೆಪಿ ಶಾಸಕರು ಭಾಗಿಯಾಗಿದ್ದರು. ಇತ್ತ ಎಲ್ಲ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಚಿವರಾದ ಜಿ.ಟಿ.ದೇವೇಗೌಡ ಹಾಗೂ ಸಾ.ರಾ.ಮಹೇಶ್ ಅವರೇ ಕಾಣಿಸಿಕೊಳ್ಳುತ್ತಿದ್ದು, ಕಾಂಗ್ರೆಸ್ಸಿನ ನಾಯಕರು ಗೈರಾಗಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಒಟ್ಟಿನಲ್ಲಿ ಈ ಬಾರಿಯ ದಸರಾದಲ್ಲಿ ಜೆಡಿಎಸ್ ನಾಯಕರು ರಂಗು ಪಡೆದಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಕಾಂಗ್ರೆಸ್ ಶಾಸಕರನ್ನು ಕಡೆಗಣಿಸಲಾಗುತ್ತಿದೆ ಎಂದು ಶಾಸಕ ತನ್ವೀರ್ ಸೇಠ್ ಅವರು, ಈ ಹಿಂದೆ ಆರೋಪಿಸಿದ್ದರು. ಈ ಮಾತಿಗೆ ಪೂರಕ ಎಂಬಂತೆ ಇವತ್ತಿನ ಉದ್ಘಾಟನಾ ಸಮಾರಂಭದ ವೇದಿಕೆಯನ್ನು ನೋಡಿದಾಗ ದೋಸ್ತಿ ಪಕ್ಷದ ನಡುವೆ ಎಲ್ಲವೂ ಸರಿ ಇಲ್ಲ ಎನ್ನುವುದು ಸ್ಪಷ್ಟವಾಗಿ ಕಾಣಿಸುತಿತ್ತು. ಇದನ್ನು ಓದಿ: ಸಿಎಂ ಹೊಗಳಿ ವೇದಿಕೆಯಲ್ಲೇ ಎರಡು ಮನವಿ ಇಟ್ಟ ಪ್ರತಾಪ್ ಸಿಂಹ

ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಇಂದು ವೈಭವದ ಚಾಲನೆ ಕಂಡಿರುವ ನಾಡ ಹಬ್ಬ ದಸರಾ ಅತ್ಯಂತ ಯಶಸ್ವಿಯಾಗಿ ಸಾಗಲಿ. ದೈವೀ ಆರಾಧನೆಯ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ನಾಡಿನ ಶ್ರೀಮಂತ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಜಗದಗಲ ತಲುಪಿಸಲಿ ಎಂದು ಹಾರೈಸುತ್ತೇನೆ. ನಾಡಿನ ಜನತೆಗೆ ನವರಾತ್ರಿಯ ಶುಭಾಶಯಗಳು ಎಂದು ಬರೆದು ಟ್ವೀಟ್ ಮಾಡಿ ಶುಭಾಶಯ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://youtu.be/EwABHrgayaE

Share This Article
Leave a Comment

Leave a Reply

Your email address will not be published. Required fields are marked *