ಗೇಮಿಂಗ್ ಆ್ಯಪ್‌ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ; `ಕೈʼ ಶಾಸಕ ವೀರೇಂದ್ರ ಪಪ್ಪಿ ಸಿಕ್ಕಿಂನಲ್ಲಿ ED ವಶಕ್ಕೆ

Public TV
1 Min Read

– ಮನೆ, ಕಂಪನಿಗಳಲ್ಲಿ ಮುಂದುವರೆದ ಶೋಧ

ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್‌ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ (Veerendra Puppy) ಅವರ ಮನೆ ಮೇಲೆ ಇಂದು ಬೆಳ್ಳಂಬೆಳಗ್ಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಬೆನ್ನಲ್ಲೇ ಸಿಕ್ಕಿಂನಲ್ಲಿ (Sikkim) ಶಾಸಕರನ್ನ ವಶಕ್ಕೆ ಪಡೆಯಲಾಗಿದೆ.

ತನ್ನ ಒಡೆತನದ ಕಂಪನಿಗಳಿಂದ ಗೇಮಿಂಗ್ ಆ್ಯಪ್‌ಗಳಿಗೆ ಅಕ್ರಮವಾಗಿ ಹಣ ವರ್ಗಾವಣೆ (Illegal Money Transfer), ಅಕ್ರಮ ಆಸ್ತಿ ಮತ್ತು ತೆರಿಗೆ ವಂಚನೆ ಆರೋಪದ ಮೇಲೆ ಶುಕ್ರವಾರ ಬೆಳಿಗ್ಗೆಯೇ ಶಾಸಕರು, ಅವರ ಸಹೋದರಾದ ಕೆ.ಸಿ ನಾಗರಾಜ ಮತ್ತು ಕೆಸಿ ತಿಪ್ಪೇಸ್ವಾಮಿ ಮನೆಗಳ ಮೇಲೆ ದಾಳಿ ನಡೆದಿದೆ. ಬೆಂಗಳೂರು, ಚಿತ್ರದುರ್ಗ, ಚಳ್ಳಕೆರೆ, ಗೋವಾ ಸೇರಿದಂತೆ 17 ಕಡೆಗಳಲ್ಲಿ ಏಕಕಾಲಕ್ಕೆ ದಾಳಿಯಾಗಿದ್ದು, ದಾಖಲೆಗಳನ್ನ ಪರಿಶೀಲಿಸಲಾಗುತ್ತಿದೆ. ಈ ನಡುವೆ ಶಾಸಕರು ಸಿಕ್ಕಿಂನಲ್ಲಿ ಸ್ನೇಹಿತರೊಂದಿಗೆ ಇದ್ದಾಗ ವಶಕ್ಕೆ ಪಡೆಯಲಾಗಿದೆ.

ಇಡಿ ದಾಳಿಗೆ ಕಾರಣ ಏನು?
ಗೇಮಿಂಗ್ ಆ್ಯಪ್‌ಗಳಿಗೆ ಅಕ್ರಮವಾಗಿ ಹಣ ವರ್ಗಾವಣೆ, ಅಕ್ರಮ ಆಸ್ತಿ ಮತ್ತು ತೆರಿಗೆ ವಂಚನೆ ಆರೋಪ ಪಪ್ಪಿ ವಿರುದ್ಧ ಕೇಳಿಬಂದಿತ್ತು. ಈ ಕುರಿತು ಗೋವಾದಲ್ಲಿ 2 ಪ್ರಕರಣ ದಾಖಲಾಗಿತ್ತು. ಇದನ್ನಾಧರಿಸಿ ಇಡಿ ದಾಳಿ (ED Raid) ನಡೆಸಿತ್ತು. ದಾಳಿ ವೇಳೆ ಶಾಸಕರು ಸಿಕ್ಕಿಂ ಪ್ರವಾಸದಲ್ಲಿರುವುದಾಗಿ ತಿಳಿದುಬಂದಿತ್ತು. ಹೊರತಾಗಿಯೂ ಅಧಿಕಾರಿಗಳ ಶೋಧ ಮುಂದುವರಿದಿದೆ.

ಶಾಸಕರಿಗೆ ಸೇರಿದ ಪಪ್ಪಿ ಟೆಕ್ನಾಲಜಿ, ರತ್ನ ಗೇಮಿಂಗ್ ಸೊಲ್ಯೂಷನ್ಸ್, ರತ್ನ ಗೋಲ್ಡ್, ರತ್ನ ಮಲ್ಟಿ ಸೋರ್ಸ್ ಕಂಪನಿಗಳು ಅಕ್ರಮ ಎಸಗಿವೆ ಎಂದು ಆರೋಪಿಸಲಾಗಿದೆ. ಚಳ್ಳಕೆರೆ ಪಟ್ಟಣದಲ್ಲಿರುವ 4 ಮನೆಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಶೋಧ ಕಾರ್ಯ ನಡೆಸುತ್ತಿದ್ದಾರೆ. 40ಕ್ಕೂ ಹೆಚ್ಚು ಇಡಿ ಅಧಿಕಾರಿಗಳು ಖಾಸಗಿ ವಾಹನಗಳಲ್ಲಿ ಆಗಮಿಸಿದ್ದಾರೆ. ಮಹತ್ವದ ದಾಖಲೆಗಳನ್ನ ತೆಗೆಯುವ ಪ್ರಯತ್ನ ಮಾಡಲಾಗಿದೆ.

ಕುಸುಮಾ ಮನೆ ಮೇಲೂ ದಾಳಿ
ಇನ್ನೂ ಪಪ್ಪಿ ಅವರೊಂದಿಗೆ ಆರ್ಥಿಕ ವ್ಯವಹಾರ ಹೊಂದಿದ್ದ ಹಿನ್ನೆಲೆ ಕಾಂಗ್ರೆಸ್‌ ಮುಖಂಡೆ ಕುಸುಮಾ ಹನುಮಂತ ರಾಯಪ್ಪ ಅವರ ಮುದ್ದಿಪಾಳ್ಯ ರಸ್ತೆಯಲ್ಲಿರುವ ನಿವಾಸದ ಮೇಲೆ ಇಡಿ ದಾಳಿ ನಡೆದಿದೆ. ಶೋಧ ಮುಂದುವರಿದಿದೆ.

Share This Article