ಗ್ಯಾರಂಟಿ ಪರಿಷ್ಕರಣೆಗೆ ಕೆಲವು ಸಚಿವರಿಂದ ಹೈಕಮಾಂಡ್ ಮೇಲೆ‌ ಒತ್ತಡ

Public TV
1 Min Read

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವದ ಗ್ಯಾರಂಟಿ ಯೋಜನೆ ಪರಿಷ್ಕರಣೆ ಮಾಡುವಂತೆ ಕೆಲವು ಸಚಿವರೇ ಎಐಸಿಸಿ ನಾಯಕರ ‌ಮೇಲೆ‌ ಒತ್ತಡ ತಂದಿದ್ದಾರೆ ಎನ್ನಲಾಗಿದೆ.

ಗ್ಯಾರಂಟಿ ಯೋಜನೆಯ ಸಮೀಕ್ಷೆ ನಡೆಸಿ‌ ಗ್ಯಾರಂಟಿ ಅನುಷ್ಠಾನದಲ್ಲಿ ಒಂದಷ್ಟು ಮಾರ್ಪಾಡು ಮಾಡಬೇಕು ಎಂಬುದು ಸಚಿವರ ವಾದ ಎನ್ನಲಾಗಿದೆ. ಗ್ಯಾರಂಟಿ ಯೋಜನೆಯನ್ನು ಅರ್ಹ ಫಲಾನಿಭವಿಗಳಿಗೆ ಮಾತ್ರ ತಲುಪಿಸುವ ನಿಟ್ಟಿನಲ್ಲಿ ಒಂದಷ್ಟು ಮಾರ್ಪಾಡು ಮಾಡಬೇಕು. ಸಮೀಕ್ಷೆ ನಡೆಸಿ ಅದರ ಆಧಾರದಲ್ಲಿ ಪರಿಷ್ಕರಣೆ ನಡೆಸಬೇಕು ಎಂದು ದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಜೊತೆ ಈ ಬಗ್ಗೆ ಸಚಿವರೊಬ್ಬರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಗ್ಯಾರಂಟಿ ಸಾಧಕ-ಬಾಧಕಗಳ ಸಮೀಕ್ಷೆ ಅಂತೂ ನಡೆಸಬೇಕು ಈ ಸಂಬಂಧ ಮುಖ್ಯಮಂತ್ರಿಗಳ‌ ಜೊತೆ ಚರ್ಚೆ ನಡೆಸುವುದಾಗಿ ಎಐಸಿಸಿ ನಾಯಕರು ಭರವಸೆ ನೀಡಿದ್ದಾರೆ ಎನ್ನಲಾಗಿದೆ. ವಾರ್ಷಿಕ 60 ಸಾವಿರ ಕೋಟಿ ವೆಚ್ಚ ತಗುಲುವ 5 ಗ್ಯಾರಂಟಿಗಳು ಅರ್ಹ ಫಲಾನುಭವಿಗಳಿಗೆ ಅಷ್ಟೇ ತಲುಪಿದರೆ ವೆಚ್ಚ ಕಡಿತ ಮಾಡಬಹುದು ಎಂಬುದು ಸಚಿವರ ವಾದ ಎನ್ನಲಾಗಿದೆ.

ಅಂದಾಜು 20 ಸಾವಿರ ಕೋಟಿ ಉಳಿತಾಯ ಮಾಡಬಹುದು. ಯೋಜನೆ ಬಡವರು ಹಾಗೂ ಅರ್ಹ ಫಲಾನಿಭವಿಗಳಿಗೆ ಅಷ್ಟೇ ತಲುಪಿಸುವ ವ್ಯವಸ್ಥೆ ಮಾಡಿದರೆ ವೆಚ್ಚ ಕಡಿತ ಮಾಡಬಹುದು ಎಂಬುದು ಇದರ ಹಿಂದಿನ ಲೆಕ್ಕಾಚಾರ ಎಂದು ತಿಳಿದುಬಂದಿದೆ.

ಗ್ಯಾರಂಟಿ ಕಾರಣಕ್ಕೆ ಇತರೆ ಅಭಿವೃದ್ಧಿ ಕಾರ್ಯಕ್ಕೆ ಹಣದ ಕೊರತೆ ಆಗಿದೆ ಎಂಬ ಮಾತುಗಳು ಸಚಿವರು ಹಾಗೂ ಶಾಸಕರಿಂದಲೇ ಕೇಳಿ ಬಂದಿತ್ತು. ಈಗ ಗ್ಯಾರಂಟಿ ಯೋಜನೆಯ ಸಮೀಕ್ಷೆ ನಡೆಸಿ ಪರಿಷ್ಕರಣೆ ನಡೆಸುವ ಬಗ್ಗೆ ಒಲವು ವ್ಯಕ್ತವಾಗಿದೆ ಎನ್ನಲಾಗುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ಕಾರಣಕ್ಕೂ ಗ್ಯಾರಂಟಿ ಯೋಜನೆಯಲ್ಲಿ ಯಾವುದೇ ಬದಲಾವಣೆ ಇಲ್ಲಾ ಎಂದಿದ್ದರು. ಆದರೆ ಗ್ಯಾರಂಟಿ ಸಮೀಕ್ಷೆಗೆ ಅವರು ಒಲವು ತೋರಿದ್ದಾರೆ ಎನ್ನಲಾಗಿದೆ. ಸಮೀಕ್ಷೆಯಲ್ಲಿ ಅರ್ಹತೆ ಮೀರಿ ಅನಗತ್ಯವಾಗಿ ಕೆಲವರು ಗ್ಯಾರಂಟಿ ಫಲಾನುಭವಿಗಳಾಗಿದ್ದಾರೆ ಎಂಬುದು ಖಾತರಿ ಆದರೆ, ಗ್ಯಾರಂಟಿ ಯೋಜನೆ ಪರಿಷ್ಕರಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸಿಎಂ ಜೊತೆ ಸ್ವತಃ ಎಐಸಿಸಿ ನಾಯಕರೇ ಈ ಬಗ್ಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂಬ ಮಾಹಿತಿ ಇದೆ.

Share This Article