ಕೈ ನಾಯಕರ ಜೊತೆ ವೇಣುಗೋಪಾಲ್ ಸಭೆಯಲ್ಲಿ ಏನಾಯ್ತು: ಇಲ್ಲಿದೆ ಇನ್‍ಸೈಡ್ ಸ್ಟೋರಿ

Public TV
1 Min Read

ಬೆಂಗಳೂರು: ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಬಂಡಾಯದ ಕಹಳೆ ಮೊಳಗಿಸಿದ್ದ ಜಾರಕಿಹೊಳೆ ಸಹೋದರರನ್ನು ನಾನು ಮಾತನಾಡಿಸುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕೈ ನಾಯಕರಿಗೆ ಭರವಸೆ ನೀಡಿದ್ದಾರೆ.

ಕಾಂಗ್ರೆಸ್ ಭಿನ್ನಮತ ಶಮನಕ್ಕೆ ಬೆಂಗಳೂರಿಗೆ ಬಂದಿರುವ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೆಣುಗೋಪಾಲ್ ಅವರು ಕುಮಾರಕೃಪಾ ಅತಿಥಿಯಲ್ಲಿ ಮಹತ್ವದ ಸಭೆ ನಡೆಸಿದರು. ಜಾರಕಿಹೊಳಿ ಸಹೋದರರ ಬಂಡಾಯ, ಲಕ್ಷ್ಮಿ ಹೆಬ್ಬಾಳ್ಕರ್, ಡಿಕೆ ಶಿವಕುಮಾರ್, ಆಪರೇಷನ್ ಕಮಲದ ಬಗ್ಗೆ ಚರ್ಚೆ ನಡೆಸಿದ್ದು ಮುಂದಿನ ಹೆಜ್ಜೆಯ ಬಗ್ಗೆ ಚರ್ಚೆ ನಡೆಸಿದರು ಎಂದು ಮೂಲಗಳು ಪಬ್ಲಿಕ್ ಟಿವಿ ತಿಳಿಸಿವೆ.

ಸಭೆಯಲ್ಲಿ ಪ್ರಮುಖವಾಗಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಬಹಿರಂಗವಾಗಿ ಜಾರಕಿಹೊಳಿ ಸಹೋದರರ ವಿರುದ್ಧ ಅಸಮಾಧಾನ ಹೊರಹಾಕಿದ್ದಲ್ಲದೇ, ಜಾರಕಿಹೊಳಿ ಸಹೋದರರು ಮಾಧ್ಯಮಗಳಲ್ಲಿ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಇದು ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ತೊಂದರೆಯಾಗುತ್ತದೆ. ಇದರಿಂದಾಗಿ ಸರ್ಕಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಕೂಡಲೇ ನೀವು ಜಾರಕಿಹೊಳಿ ಸಹೋದರರನ್ನು ಹದ್ದುಬಸ್ತಿನಲ್ಲಿಡಿ, ಅಸಮಾಧಾನ ಏನೇ ಇದ್ದರು ಅದನ್ನು ಪಕ್ಷದ ವೇದಿಕೆಯಲ್ಲಿ ಹೇಳಿಕೊಂಡು ಪರಿಹಾರ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ಬಹಿರಂಗ ಹೇಳಿಕೆಗಳನ್ನು ನೀಡುವುದು ಸರಿಯಲ್ಲವೆಂದು ಹೇಳಿದ್ದಾರೆ ಎನ್ನಲಾಗಿದೆ.

ಡಿಕೆಶಿಯವರು ಹೇಳಿಕೆಯನ್ನು ಕೇಳಿದ ಬಳಿಕ ವೇಣುಗೋಪಾಲ್ ಸಿದ್ದರಾಮಯ್ಯನವರೊಂದಿಗೆ ಮಾತನಾಡಿ, ಕೂಡಲೇ ನೀವು ಜಾರಕಿಹೊಳಿ ಸಹೋದರರೊಂದಿಗೆ ಈ ಬಗ್ಗೆ ಮಾತನಾಡಿ. ಇದಲ್ಲದೇ ಕಾಂಗ್ರೆಸ್ಸಿನ ಹಲವು ಶಾಸಕರನ್ನು ಬಿಜೆಪಿ ನಾಯಕರು ಸಂಪರ್ಕ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಅವರನ್ನು ಸಹ ಸಂಪರ್ಕಿಸಿ ಸಮಾಧಾನ ಪಡಿಸಿ ಎಂದು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ವೇಣುಗೋಪಾಲ್‍ರ ಸೂಚನೆಯನ್ನು ಒಪ್ಪಿದ ಸಿದ್ದರಾಮಯ್ಯನವರು ಕೂಡಲೇ ಜಾರಕಿಹೊಳಿ ಸಹೋದರರನ್ನು ಕರೆದು ಮಾತನಾಡುತ್ತೇನೆ. ಯಾವುದೇ ಅಸಮಾಧಾನಗಳಿದ್ದರು ಶಮನಗೊಳಿಸುತ್ತೇನೆ. ಯಾವುದೇ ಶಾಸಕರು ಪಕ್ಷ ಬಿಟ್ಟು ಹೋಗದಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *