ಲೋಕಸಭೆ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಸೋಲೊಪ್ಪಿಕೊಂಡಿದೆ: ನಿಖಿಲ್ ಕುಮಾರಸ್ವಾಮಿ

Public TV
2 Min Read

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ (Lok Sabha Election) ಕಾಂಗ್ರೆಸ್ (Congress) ಹೆಚ್ಚು ಸ್ಥಾನ ಗೆಲ್ಲದೇ ಹೋದರೆ ಗ್ಯಾರಂಟಿ ರದ್ದಾಗುತ್ತದೆ ಎಂಬ ಶಾಸಕ ಬಾಲಕೃಷ್ಣ (HC Balakrishna) ಹೇಳಿಕೆಗೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಕಿಡಿಕಾರಿದ್ದಾರೆ. ಸರಣಿ ಟ್ವೀಟ್ ಮೂಲಕ ಕಿಡಿಕಾರಿರುವ ನಿಖಿಲ್ ಕುಮಾರಸ್ವಾಮಿ, ಲೋಕಸಭೆಗೂ ಮುನ್ನವೇ ಕಾಂಗ್ರೆಸ್ ಸೋಲೊಪ್ಪಿಕೊಂಡಿದೆ ಎಂದು ಲೇವಡಿ ಮಾಡಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲದಿದ್ದರೆ ಐದು ಗ್ಯಾರಂಟಿಗಳು ರದ್ದಾಗುತ್ತವೆ ಎಂದು ಮಾಗಡಿ ವಿಧಾನಸಭೆ ಕ್ಷೇತ್ರದ ಶಾಸಕರಾದ ಬಾಲಕೃಷ್ಣ ಅವರು ಹೇಳಿರುವುದು ಕಾಂಗ್ರೆಸ್ ಸರ್ಕಾರದ ಅಸಲಿ ಆಲೋಚನೆಯನ್ನು ಬಯಲು ಮಾಡಿದೆ. ಕೊಟ್ಟ ಕೈಯ್ಯಲ್ಲೇ ಕಸಿದುಕೊಳ್ಳುವ ಹುನ್ನಾರ ಇಲ್ಲಿ ಸ್ಫುಟವಾಗಿ ಗೋಚರಿಸುತ್ತಿದೆ. ಪಕ್ಷ, ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳ ಅಪ್ಪಣೆ ಇಲ್ಲದೆ ಶಾಸಕರು ಇಂಥ ಮಹತ್ವದ ಹೇಳಿಕೆಯನ್ನು ಅದೂ ಚುನಾವಣೆ ಹೊತ್ತಿನಲ್ಲಿ ಕೊಡಲು ಸಾಧ್ಯವೇ? ಅಲ್ಲಿಗೆ ಯುದ್ಧಕ್ಕೆ ಮೊದಲೇ ಕಾಂಗ್ರೆಸ್ ಸೋಲೊಪ್ಪಿಕೊಂಡಿದೆ ಎಂದಿದ್ದಾರೆ. ಇದನ್ನೂ ಓದಿ: ವಿಜಯೇಂದ್ರ‌ ಮುಂದಿನ‌ ಮುಖ್ಯಮಂತ್ರಿ ಎಂದ ಶಾಸಕ ಶಿವರಾಜ್ ಪಾಟೀಲ್

ಗ್ಯಾರಂಟಿಗಳ ಸಮರ್ಪಕ ಅನುಷ್ಠಾನಕ್ಕೆ ಒದ್ದಾಡುತ್ತಿರುವ ಸರ್ಕಾರವು, ತನ್ನ ಶಾಸಕರೊಬ್ಬರ ಮೂಲಕ ರದ್ದು ಮಾಡುತ್ತೇವೆ ಎಂದು ಹೇಳಿಸಿದೆ ಎಂದೇ ಭಾವಿಸಬೇಕಾಗುತ್ತದೆ. ಅದು ನಿಜವೂ ಹೌದು ಎನ್ನುವುದು ನನ್ನ ಭಾವನೆ. ಆ ಶಾಸಕರ ಹೇಳಿಕೆಯ ಧಾಟಿ ಹೇಗಿದೆ ಎಂದರೆ ಅವರು ಜನರಿಗೆ ಸ್ಪಷ್ಟವಾದ ಬೆದರಿಕೆ ಒಡ್ಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ, ಇಲ್ಲವಾದರೆ ನಿಮಗೆ ಕೊಟ್ಟಿರುವ ಗ್ಯಾರಂಟಿಗಳನ್ನು ಮುಲಾಜಿಲ್ಲದೆ ರದ್ದು ಮಾಡುತ್ತೇವೆ ಎಂದು ಅವರು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ, ಜನರ ನಂಬಿಕೆಗೆ ಎಸಗಿದ ಅಪಚಾರ. ಆ ಶಾಸಕರು ಹಾಗೂ ಕಾಂಗ್ರೆಸ್ ಪಕ್ಷ ಅರ್ಥ ಮಾಡಿಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಇಂಥದ್ದೇ ಡ್ರೆಸ್‌ ಹಾಕೊಳ್ಳಿ, ಬಟ್ಟೆ ಬಿಚ್ಚಾಕ್ಕೊಂಡು ಹೋಗಿ ಹೇಳಲ್ಲ- ದೇಗುಲಗಳಲ್ಲಿನ ಡ್ರೆಸ್‌ ಕೋಡ್‌ಗೆ ಸಿಎಂ ವಿರೋಧ

ಚುನಾವಣೆಯಲ್ಲಿ ಗೆಲ್ಲುವ ಏಕೈಕ ಉದ್ದೇಶದಿಂದ ನೀವು ಪಂಚ ಗ್ಯಾರಂಟಿಗಳ ಭರವಸೆ ಕೊಟ್ಟಿದ್ದಿರಿ. ಆಮೇಲೆ ಅವುಗಳನ್ನು ಜಾರಿ ಮಾಡಿದ್ದೀರಿ. ಗ್ಯಾರಂಟಿ ಕೊಡಿ, ನಿಮಗೆ ವೋಟು ಹಾಕುತ್ತೇವೆ ಎಂದು ಜನರೇನು ಕೇಳಿರಲಿಲ್ಲ. ವಾಸ್ತವ ಸ್ಥಿತಿ ಹೀಗಿದ್ದ ಮೇಲೆ ಈಗ ಗ್ಯಾರಂಟಿಗಳನ್ನು ಅದು ಹೇಗೆ ವಾಪಸ್ ಪಡೆಯುತ್ತೀರಿ? ಕಾಂಗ್ರೆಸ್ ಸರ್ಕಾರದ ವರ್ತನೆಗೆ ನನ್ನ ಹಾಗೂ ನಮ್ಮ ಪಕ್ಷದ ತೀವ್ರ ವಿರೋಧವಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಪ್ರತ್ಯೇಕ ರಾಷ್ಟ್ರದ ಕೂಗು ಎತ್ತಿದ ಸಂಸದ ಡಿಕೆ ಸುರೇಶ್‌

Share This Article