ಎಕ್ಸಿಟ್ ಪೋಲ್ ಬೆನ್ನಲ್ಲೇ ದೋಸ್ತಿ ಕೂಟದಲ್ಲಿ ಆತಂಕ!

Public TV
2 Min Read

ಬೆಂಗಳೂರು: ಲೋಕಸಭಾ ಚುನಾವಣೆಯ ಎಕ್ಸಿಟ್ ಪೋಲ್ ಭಾನುವಾರ ಸಂಜೆ ಹೊರಬಿದ್ದಿದ್ದು, ಸರಿ ಸುಮಾರು ಎಲ್ಲಾ ಸಮೀಕ್ಷೆಗಳೂ ಬಿಜೆಪಿಯೇ ಬಹುಮತ ಸಾಧಿಸುವುದಾಗಿ ತಿಳಿಸಿವೆ. ಈ ಹಿನ್ನೆಲೆಯಲ್ಲಿ ಇದೀಗ ಕಾಂಗ್ರೆಸ್‍ನಲ್ಲಿ ಅಸಮಾಧಾನ ಮತ್ತಷ್ಟು ಭುಗಿಲೆದ್ದಿದೆ ಎನ್ನಲಾಗಿದೆ.

ಸಮೀಕ್ಷೆಯಿಂದಾಗಿ ಇಬ್ಬರು ಸೇರಿಕೊಂಡು ಮೈತ್ರಿ ಮಾಡಿದರೆ ಹೆಚ್ಚು ಲೋಕಸಭಾ ಸೀಟು ಗೆಲ್ಲಬಹುದೆಂಬ ಲೆಕ್ಕಾಚಾರ ಸುಳ್ಳಾಗುತ್ತಾ ಅನ್ನೋ ಆತಂಕ ಕಾಂಗ್ರೆಸ್ ನಾಯಕರಲ್ಲಿ ಶುರುವಾಗಿದೆ. ಇರೋ ಸೀಟನ್ನೇ ಉಳಿಸಿಕೊಳ್ಳುವುದು ಕಷ್ಟವಾದರೆ ಇಂತಹ ಮೈತ್ರಿ ಯಾಕೆ ಬೇಕು. ಹತ್ತು ಸೀಟೂ ಜಯಿಸೋಕೆ ಆಗಲ್ಲ ಅಂದರೆ ಈ ಮೈತ್ರಿಯ ಅನಿವಾರ್ಯತೆ ಏನು ಎಂಬ ಪ್ರಶ್ನೆಗಳು ಕಾಂಗ್ರೆಸ್ ನಾಯಕರಲ್ಲಿ ಮೂಡಿದ್ದು, ಈ ಹಿನ್ನೆಲೆಯಲ್ಲಿ `ಮೈತ್ರಿ ಮುರಿಯೋಣ, ಪಕ್ಷ ಉಳಿಸೋಣ’ ಎಂಬ ಕಾಂಗ್ರೆಸ್ ನಾಯಕರ ಅಭಿಯಾನ ಚುರುಕುಗೊಳ್ಳಲಿದೆ ಎಂಬುದಾಗಿ ತಿಳಿದುಬಂದಿದೆ.

ಮೈತ್ರಿಯಿಂದಾದ ನಷ್ಟದ ಲೆಕ್ಕ ಇಡಲು ಮುಂದಾದ ರಾಜ್ಯ ನಾಯಕರು!
1. ಜೆಡಿಎಸ್‍ಗೆ ಬಿಟ್ಟುಕೊಟ್ಟ ಏಳೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯವಿತ್ತು. ಈಗ ಅಲ್ಲೇ ಕಾಂಗ್ರೆಸ್ ಅಸ್ತಿತ್ವದ ಪ್ರಶ್ನೆ ಎದ್ದಿದೆ.
2. ಮಂಡ್ಯ, ಹಾಸನದಲ್ಲಿ ಜೆಡಿಎಸ್‍ಗೆ ಕಾಂಗ್ರೆಸ್ ಎದುರಾಳಿ ಆಗಿತ್ತು. ಆ ಸ್ಥಾನ ಈಗ ಬಿಜೆಪಿ ಪಾಲಾಗಿದೆ.
3. ತುಮಕೂರಲ್ಲಿ ಕಾಂಗ್ರೆಸ್ ಗೆಲ್ಲುವ ಕ್ಷೇತ್ರ, ಆದರೆ ಜೆಡಿಎಸ್‍ಗೆ ಬಿಟ್ಟು ಕೊಟ್ಟು ಕಾಂಗ್ರೆಸ್ ಕಣ್ಮರೆ ಆಗಿದೆ.
4. ಮಂಡ್ಯದಲ್ಲಿ ಸುಮಲತಾ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದರೆ ನಮ್ಮದೇ ಗೆಲುವಾಗುತ್ತಿತ್ತು. ಆದರೆ ಮೈತ್ರಿಯಿಂದಾಗಿ ಕಾಂಗ್ರೆಸ್ ಮುಖಂಡರೇ ಮೈತ್ರಿ ಅಭ್ಯರ್ಥಿ ವಿರುದ್ಧ ತಿರುಗಿ ಬೀಳುವಂತಾಯ್ತು.
5. ಮೈಸೂರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲದಂತೆ ಬಿಜೆಪಿ ಜೊತೆಗೆ ಜೆಡಿಎಸ್ ಒಪ್ಪಂದ ಮಾಡಿಕೊಂಡಿತ್ತು.
6. ಕೋಲಾರ, ಚಿಕ್ಕಬಳ್ಳಾಪುರದಲ್ಲೂ ನಮ್ಮ ಅಭ್ಯರ್ಥಿಯ ಬೆನ್ನಿಗೆ ಜೆಡಿಎಸ್ ಚೂರಿ ಹಾಕಿದೆ.
7. ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಿದರೆ ಕನಿಷ್ಠ 12 ಸ್ಥಾನವನ್ನಾದರೂ ಸುಲಭವಾಗಿ ಗೆಲ್ಲಬಹುದಿತ್ತು.
8. ಮೈತ್ರಿ ಧರ್ಮ ಪಾಲಿಸುವ ಅನಿವಾರ್ಯತೆಯಲ್ಲಿ ಕೈಯಲ್ಲಿದ್ದಿದ್ದನ್ನೂ ಕಳೆದುಕೊಳ್ಳಬೇಕಾದ ಸ್ಥಿತಿ ಎದುರಾಗಿದೆ.
9. ಹೀಗೆ ಆದ್ರೆ ಕರ್ನಾಟಕದಲ್ಲಿ ಕಾಂಗ್ರೆಸ್‍ಗೆ ಅಸ್ತಿತ್ವನೇ ಹೊರಟು ಹೋಗುತ್ತದೆ.

ಒಟ್ಟಿನಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಉಳಿಯಬೇಕಾದರೆ ಮೈತ್ರಿ ಮುರಿದುಕೊಳ್ಳುವುದು ಒಳ್ಳೆಯದು. ಎಕ್ಸಿಟ್ ಪೋಲ್ ಪ್ರಕಾರ ಕಾಂಗ್ರೆಸ್‍ಗೆ ಹೀನಾಯ ಸೋಲಾದರೆ ಮೈತ್ರಿ ಖತಂ ಆಗಲಿದ್ದು, ಮೇ 23ರ ಫಲಿತಾಂಶ ಬಳಿಕ `ಮೈತ್ರಿ ಹಠಾವೋ, ಕಾಂಗ್ರೆಸ್ ಬಚಾವೋ’ ಅಭಿಯಾನ ಜೋರಾಗಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

Share This Article
Leave a Comment

Leave a Reply

Your email address will not be published. Required fields are marked *